ನೈರುತ್ಯ ರೈಲ್ವೆಯ ಆರ್.ಪಿ.ಎಫ್ ಕ್ಷಿಪ್ರ ಕಾರ್ಯಾಚರಣೆ

| Published : Jan 21 2024, 01:34 AM IST

ಸಾರಾಂಶ

ಕಳೆದ ಜ.18ರಂದು ರೈಲು ಸಂಖ್ಯೆ 18048 ಅಮರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ 14 ವರ್ಷದ ಬಾಲಕಿ ಮತ್ತು 23 ವರ್ಷದ ಹುಡುಗನನ್ನು ರಕ್ಷಿಸಲಾಗಿದ್ದು, ಇವರಿಬ್ಬರನ್ನು ಅಪಹರಿಸಿದ ಆರೋಪಿಗಳನ್ನು ಹೆಚ್ಚಿನ ವಿಚಾರಣೆಯ ಸಲುವಾಗಿ ಗೋವಾದ ಮಾಪುಸಾ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಆರ್.ಪಿ.ಎಫ್. ತಂಡ ಗಸ್ತು ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ಹೊಸಪೇಟೆ ರೈಲು ನಿಲ್ದಾಣದಲ್ಲಿ ಇಬ್ಬರು ಅಪಹರಣಕಾರರನ್ನು ಪತ್ತೆ ಹಚ್ಚುವಲ್ಲಿ ಯಶಸ್ಸಿಯಾಗಿದ್ದಾರೆ.

ಕಳೆದ ಜ.18ರಂದು ರೈಲು ಸಂಖ್ಯೆ 18048 ಅಮರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ 14 ವರ್ಷದ ಬಾಲಕಿ ಮತ್ತು 23 ವರ್ಷದ ಹುಡುಗನನ್ನು ರಕ್ಷಿಸಲಾಗಿದ್ದು, ಇವರಿಬ್ಬರನ್ನು ಅಪಹರಿಸಿದ ಆರೋಪಿಗಳನ್ನು ಹೆಚ್ಚಿನ ವಿಚಾರಣೆಯ ಸಲುವಾಗಿ ಗೋವಾದ ಮಾಪುಸಾ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ಕುರಿತು ಗೋವಾದ ಮಾಪುಸಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಸೆಕ್ಷನ್ 363 ಮತ್ತು ಜಿಸಿಎ 8ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಾಲಕಿಯ ರಕ್ಷಣೆ: ಮತ್ತೊಂದು ಪ್ರಕರಣದಲ್ಲಿ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಆರ್ ಪಿ ಎಫ್ ಸಿಬ್ಬಂದಿಯ ಜಾಗರೂಕತೆಯಿಂದ ಜ. 9 ರಂದು ಕಾಣೆಯಾಗಿದ್ದ 14 ವರ್ಷದ ಬಾಲಕಿಯನ್ನು ಜ. 10ರಂದು ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದಲ್ಲಿ ಪತ್ತೆ ಹಚ್ಚಿ, ಬಾಲಕಿಯನ್ನು ಸಂಬಂಧಿಸಿದ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

ಕಳೆದು ಹೋದ ಮಗಳನ್ನು ಸರಿಯಾದ ಸಮಯಕ್ಕೆ ಹುಡುಕಿಕೊಟ್ಟಿರುವ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹುಡುಗಿಯ ಪಾಲಕರು ಕೃತಜ್ಞತೆ ಸಲ್ಲಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಸಂಬಂಧಿಸಿದ ಕುಟುಂಬಕ್ಕೆ ಬಾಲಕರನ್ನು ಹುಡುಕಿ ಒಪ್ಪಿಸಿರುವ ರೈಲ್ವೆ ರಕ್ಷಣಾ ಪಡೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.