ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಅವರಿಗೆ ತಂದೆ ಮದನ್ ಮಂದಣ್ಣ ಅವರು ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ್ದಾರೆ. ಕೊಡಗು ಮೂಲದ ಚಲನಚಿತ್ರ ನಟಿ ರಶ್ಮಿಕಾ ಅವರು ಇತ್ತೀಚಿಗಷ್ಟೇ ನಟ ವಿಜಯ ದೇವರಕೊಂಡ ಅವರನ್ನು ಮದುವೆಯಾದರು. ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಅವರು ಇದೀಗ ತಮ್ಮ ಮನೆಯನ್ನೇ ಮದುವೆಯ ಉಡುಗೊರೆಯಾಗಿ ನೀಡಿದ್ದಾರೆ. ವಿರಾಜಪೇಟೆ ಚೆಂಚೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಲೂರು ಗ್ರಾಮದ ನಿವಾಸಿ, ವಿರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾಗಿದ್ದ ಮದನ್ ಮಂದಣ್ಣ ಮತ್ತು ಪತ್ನಿ ಸುಮನ್ ಮಂದಣ್ಣ ಅವರ ಹೆಸರಿನಲ್ಲಿದ್ದ ಸರ್ವೆ ಸಂಖ್ಯೆ 142/1 ಮತ್ತು 142/2 ಐಷಾರಾಮಿ (ಸೆರಿನಿಟಿ) ಮನೆಯನ್ನು ವಿರಾಜಪೇಟೆ ಉಪನೋಂದಣಿ ಕಚೇರಿಯಲ್ಲಿ ಮಗಳು ರಶ್ಮಿಕಾ ಮಂದಣ್ಣ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ.

ವಿವಾಹದ ಉಡುಗೊರೆಯಾಗಿ ಮನೆಯನ್ನು ನೀಡಲಾಗಿದೆ ಎಂದು ಕುಟುಂಬದ ಮೂಲದಿಂದ ತಿಳಿದುಬಂದಿದೆ. ಈ ಸಂದರ್ಭದಲ್ಲಿ ದಾನಪತ್ರ ಮತ್ತು ದಾಖಲೆ ಪತ್ರಗಳನ್ನು ನಿರ್ವಹಿಸಿದ ವಕೀಲರು ಮತ್ತು ಮಂದಣ್ಣ ಕುಟುಂಬದ ವಕೀಲರಾದ ಪಟ್ಟಡ ರೀನಾ ಪ್ರಕಾಶ್, ರಶ್ಮಿಕಾ ಮಂದಣ್ಣ ಅವರ ಖಾಸಗಿ ವ್ಯವಸ್ಥಾಪಕರು, ಅಂಗರಕ್ಷಕರು ಇದ್ದರು.