ಸಾರಾಂಶ
3,707 ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ನಿರ್ಧಾರ । ಪ್ರಧಾನ ಜಿಲ್ಲಾ ನ್ಯಾಯಾಧೀಶ ರೋಣ ವಾಸುದೇವ ಮಾಹಿತಿಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಾರ್ಚ್ 8 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದ್ದು ರಾಜಿ ಸಂಧಾನದ ಮೂಲಕ 3,707 ಪ್ರಕರಣಗಳ ಇತ್ಯರ್ಥ ಪಡಿಸಲು ಉದ್ದೇಶಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ ಹೇಳಿದರು.ಲೋಕ ಅದಾಲತ್ ಗೆ ಸಂಬಂಧಿಸಿದಂತೆ ಶುಕ್ರವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಮಾಹಿತಿ ನೀಡಿದ ಅವರು 15 ಪ್ರಕರಣಗಳಲ್ಲಿ ಪಕ್ಷಗಾರರ ಮನವೊಲಿಸಿ ರಾಜಿ ಸಂಧಾನಕ್ಕೆ ಒಪ್ಪಿಸಲಾಗಿದೆ. ಕಳೆದ ಅದಾಲತ್‌ಗಿಂತಲೂ ಹೆಚ್ಚಿನ ಪ್ರಕರಣಗಳನ್ನು ಈ ಬಾರಿ ಇತ್ಯರ್ಥ ಪಡಿಸಲು ಗುರಿ ಹೊಂದಲಾಗಿದೆ ಎಂದರು.
ಕಳೆದ ಡಿ.14 ರಂದು ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯಲ್ಲಿ ಬಾಕಿ ಇದ್ದ 4,777 ವ್ಯಾಜ್ಯ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರ ಪೈಕಿ 11 ಜೋಡಿಗಳ ಮನ ಒಲಿಸಿ ಪುನಃ ಒಂದು ಮಾಡಲಾಗಿದೆ.ಇದುವರೆಗೂ ಬಾಕಿ ಇದ್ದ 98,452 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ವಿಲೆ ಮಾಡಲಾಗಿದೆ. ಜಿಲ್ಲೆಯಾದ್ಯಂತ 44,632 ಪ್ರಕರಣಗಳು ಬಾಕಿಯಿವೆ ಎಂದರು.ಜಿಲ್ಲೆಯ ನ್ಯಾಯಾಲಯಗಳಲ್ಲಿ ಪ್ರಸ್ತುತ 4,821 ಚಕ್ ಅಮಾನ್ಯ, 827 ವಿವಾಹ, 347 ಕೌಟುಂಬಿಕ ವ್ಯಾಜ್ಯ, 3,801 ಆಸ್ತಿ ವಿಭಾಗ ಹಾಗೂ ಜೀವನಾಂಶ ಕೋರಿ ಸಲ್ಲಿಸಿದ 641 ಪ್ರಕರಣಗಳು ಇವೆ. ಈ ಎಲ್ಲಾ ಸಿವಿಲ್ ವ್ಯಾಜ್ಯಗಳನ್ನು ಸುಲಭವಾಗಿ ಪಕ್ಷಗಾರರು ಬಗೆ ಹರಿಸಿಕೊಳ್ಳಬಹುದು. ಈ ಎಲ್ಲಾ ಪ್ರಕರಣಗಳಿಂದ ಸುಮಾರು 25,000 ಹೆಚ್ಚು ಜನರು ವಿನಾ ಕಾರಣ ನ್ಯಾಯಾಲಯಕ್ಕೆ ಅಲೆದಾಡುವುದು ತಪ್ಪುತ್ತದೆ. ಪ್ರಕರಣಗಳು ಸೌಹಾರ್ಧಯುತವಾಗಿ ಬಗೆಹರಿದರೆ, ಮೇಲಿನ ನ್ಯಾಯಾಲಯಗಳಿಗೆ ಮೇಲ್ಮನವಿ ಹೋಗುವುದು ತಪ್ಪುತ್ತದೆ. ಪತಿ-ಪತ್ನಿ ಪ್ರಕರಣಗಳಲ್ಲಿ ಅಹಂ ಭಾವದಿಂದ ವರ್ತಿಸದೇ ಸೋತು ಗೆದ್ದರೆ ವಿಚ್ಚೇದನ ಪ್ರಮಾಣ ಕಡಿಮೆಯಾಗುತ್ತದೆ ಎಂದು ರೋಣ ವಾಸುದೇವ ಹೇಳಿದರು.
ನೂತನ ಜಿಲ್ಲಾ ನ್ಯಾಯಾಲಯ ಸಂಕಿರ್ಣ ನಿರ್ಮಾಣಕ್ಕೆ ನಗರದ ಹೊರ ವಲಯದಲ್ಲಿ 9.25 ಎಕರೆ ಜಮೀನು ಗುರುತಿಸಿ ಸ್ವಾಧೀನಕ್ಕೆ ಪಡೆಯಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಈಗಿರುವ ಜಿಲ್ಲಾ ನ್ಯಾಯಾಲಯವನ್ನು 1965ರಲ್ಲಿ ನಿರ್ಮಿಸಲಾಗಿದೆ. ಇಂದು ಜನಸಂಖ್ಯೆ ಹೆಚ್ಚಳವಾಗಿದ್ದು, ನೂತನ ನ್ಯಾಯಾಲಯದ ಅವಶ್ಯಕತೆ ಇದೆ. ಮೊಳಕಾಲ್ಮೂರು ಪಟ್ಟಣದಲ್ಲೂ ನೂತನ ತಾಲೂಕು ನ್ಯಾಯಾಲಯ ಸ್ಥಾಪಿಸಲು ಜಾಗ ಗುರುತಿಸಲಾಗಿದೆ ಎಂದು ನ್ಯಾಯಾಧೀಶ ಅಧ್ಯಕ್ಷ ರೋಣ ವಾಸುದೇವ ಮಾಹಿತಿ ನೀಡಿದರು.ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಪಕ್ಷಗಾರರು ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭ ಹಾಗೂ ಶೀಘ್ರವಾಗಿ ಯಾವುದೇ ಶುಲ್ಕ, ಖರ್ಚು ವೆಚ್ಚವಿಲ್ಲದೇ ತೀರ್ಮಾನ ಮಾಡಿಕೊಳ್ಳಬಹುದು. ಲೋಕ ಅದಾಲತ್‌ನಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳಾದ ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ, ಉದ್ಯೋಗ, ಕಾರ್ಮಿಕ, ವೇತನ, ವಿದ್ಯುತ್,ನೀರು ಇತರೆ ಸೇವಾ ಶುಲ್ಕದ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅವಕಾಶವಿದೆ. ಇದರೊಂದಿಗೆ ನ್ಯಾಯಾಲಯದ ವ್ಯಾಜ್ಯದಲ್ಲಿರುವ ನಾನ್ ಕಾಂಪೌಂಡಬಲ್ ಹಾಗೂ ಗಂಭೀರ ತರದ ಅಪರಾಧಿಕ ಪ್ರಕರಣಗಳನ್ನು ಹೊರತು ಪಡಿಸಿ, ಇತರೆ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಬಹುದು. ಕಕ್ಷಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಲೋಕ ಅದಾಲತ್‌ನಲ್ಲಿ ಭಾಗವಹಿಸಬಹುದು. ಸಾರ್ವಜನಿಕರು ಲೋಕ ಅದಾಲತ್ ಕುರಿತು ಹೆಚ್ಚಿನ ಪ್ರಶ್ನೆ ಮತ್ತು ಮಾಹಿತಿಗಾಗಿ ಬೇಕಾದಲ್ಲಿ ಇ-ಮೇಲ್ dlsachitradurga3@gmail.com ಹಾಗೂ ಸದಸ್ಯ ಕಾರ್ಯದರ್ಶಿಯವರ ಕಚೇರಿ ಮೊಬೈಲ್ ಸಂಖ್ಯೆ 9141193935 ಹಾಗೂ ದೂರವಾಣಿ ಸಂಖ್ಯೆ 08194- 222322 ಕ್ಕೆ ಸಹ ಸಂಪರ್ಕಿಸಬಹುದು ಎಂದು ನ್ಯಾಯಾಧೀಶ ರೋಣ ವಾಸುದೇವ ಹೇಳಿದರು.
ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಉಪಸ್ಥಿತರಿದ್ದರು.