ಸಾರಾಂಶ
ಹೊನ್ನಾವರ: ಶಿಕ್ಷಣದ ಗುಣಮಟ್ಟ ಇನ್ನಷ್ಟು ಹೆಚ್ಚಾಗಬೇಕು. ಭಾರತದಲ್ಲಿ ಸರಿಯಾದ ಶಿಕ್ಷಣ ದೊರಕಿದರೆ ದೇಶ ಎಲ್ಲೋ ಇರುತ್ತಿತ್ತು. ದುಡ್ಡು ಇರುವವರು ವಿದೇಶಕ್ಕೆ ಹೋಗಿ ಕಲಿಯುತ್ತಿದ್ದಾರೆ. ಇದರಿಂದ ಲಾಭವು ಇದೆ. ತಂದೆ - ತಾಯಿಯ ಅವಲಂಬನೆ ಬಿಟ್ಟು ಬದುಕಲು ಹೆಚ್ಚು ಉಪಯುಕ್ತವಾಗುತ್ತದೆ ಎಂದು ವಿಪ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದರು.
ಪಟ್ಟಣದ ಎಂಪಿಇ ಸೊಸೈಟಿಯ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು, ಪ್ರಶಿಕ್ಷಣ ಭಾರತಿ ಉತ್ತರಕನ್ನಡ ಹಾಗೂ ಎಸ್ಡಿಎಂ ಕಾಲೇಜು ವಿದ್ಯಾರ್ಥಿ ಒಕ್ಕೂಟ ವತಿಯಿಂದ ರಾಷ್ಟ್ರೋತ್ಥಾನ ಪರಿಷತ್ ೬೦ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸುವ ಕೆಲಸವನ್ನು ರಾಷ್ಟ್ರೋತ್ಥಾನ ಪರಿಷತ್ ಮಾಡುತ್ತಿದೆ. ದೇಶಾಭಿಮಾನ ಮೂಡಿಸುವ ಕೆಲಸವನ್ನು ಮಾಡಿಸುತ್ತಿದೆ. ಡಾ.ಬಿ.ಆರ್. ಅಂಬೇಡ್ಕರ್ ಸ್ವಾತಂತ್ರ್ಯ ನಂತರವೂ ಬೆಳೆಯುತ್ತಿದ್ದಾರೆ. ಸಂವಿಧಾನ ಬರೆದಿದ್ದಾರೆ. ಎಸ್.ಸಿ., ಎಸ್.ಟಿ ಯವರಿಗೆ ನೆರವಾಗಿದ್ದಾರೆ ಎನ್ನುವುದಷ್ಟೇ ಗೊತ್ತಿದೆ. ಆದರೆ ಅವರ ವ್ಯಕ್ತಿತ್ವ ಬಹಳ ದೊಡ್ಡದು. ರಾಷ್ಟ್ರವನ್ನು ಉತ್ಥಾನ ಮಾಡುವುದೇ ಈ ಸಂಘಟನೆಯ ಕೆಲಸವಾಗಿದೆ. ಸ್ಪಂದನಶೀಲ ಸಮಾಜ ನಿರ್ಮಾಣ ಮಾಡುವ ಗುರಿ ನಮ್ಮದಾಗಬೇಕು. ಜೀವನದಲ್ಲಿ ಯಶಸ್ಸನ್ನು ತಂದುಕೊಡುವುದು ಶಿಕ್ಷಣ. ಮಾನವೀಯತೆಯನ್ನು ಕಲಿಸುವ ಶಿಕ್ಷಣ ಸಿಗುವಂತಾಗಬೇಕು ಎಂದು ನುಡಿದರು.
ಆದರ್ಶ ಗೋಖಲೆ ಮಾತನಾಡಿ, ಭಾರತ ಸಂಸ್ಕೃತಿಯ ಬಗ್ಗೆ ತಿಳಿಸುವ ಜೊತೆಗೆ ಗುರುಕುಲ ಶಿಕ್ಷಣ ಪದ್ಧತಿ ಕುರಿತು ತಿಳಿಸಿದರು. ನಾವು ವಿದ್ಯೆಯನ್ನು ಪಡೆಯುತ್ತಿದ್ದೇವೆ ಆದರೆ ವಿನಯವನ್ನು ಮರೆಯುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಬದುಕಿನ ಪಾಠವನ್ನು ಹೇಳಿದರು. ಅಲ್ಲದೆ, ಶಿಕ್ಷಣ ವ್ಯವಸ್ಥೆ ಯಾವ ಕಡೆ ಹೋಗುತ್ತಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದರು.ಉನ್ನತ ಶಿಕ್ಷಣದಲ್ಲಿ ಮಾನವೀಯತೆ ಮೌಲ್ಯಗಳ ಬಗ್ಗೆ ಉಪನ್ಯಾಸವನ್ನು ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಸುರೇಶ್ ಹೆಗಡೆ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.
ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಉತ್ತಮ ವಿಷಯವನ್ನು ನೀಡಿದ್ದಾರೆ. ದೇಶಭಕ್ತಿ ಎಲ್ಲ ಕಡೆ ಜಾಗೃತವಾಗಬೇಕು ಎಂದರು.ಅಜಯ್ ಗೌಡ, ಪ್ರಶಿಕ್ಷಣ ಭಾರತಿ ಜಿಲ್ಲಾ ಸಂಯೋಜಕ ಅಭಿಷೇಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಎಲ್.ಹೆಬ್ಬಾರ್ ಸ್ವಾಗತಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಎನ್.ಜಿ. ಅನಂತಮೂರ್ತಿ ವಂದಿಸಿದರು. ಪ್ರಶಾಂತ್ ಹೆಗಡೆ, ಮೂಡಲಮನೆ ನಿರೂಪಿಸಿದರು.