ಸಾರಾಂಶ
ಹೂವಿನಹಡಗಲಿ: ತಾಲೂಕಿನ ಎಲ್ಲ ಗ್ರಾಮೀಣ ರಸ್ತೆಗಳು ಬಳ್ಳಾರಿ ಜಾಲಿಗಿಡ-ಮುಳ್ಳುಕಂಟಿ ಮುತ್ತಿಕೊಡಿವೆ. ಇದರಿಂದ ಈ ರಸ್ತೆಗಳಲ್ಲಿ ಸಂಚಾರಕ್ಕೆ ಜನ ಬೇಸತ್ತು ಹೋಗಿದ್ದಾರೆ. ರಸ್ತೆ ನಿರ್ವಹಣೆ ಸೇರಿದಂತೆ ಸಣ್ಣ ಪುಟ್ಟ ತಗ್ಗು ಗುಂಡಿಗಳನ್ನು ಮುಚ್ಚಲು ಅನುದಾನವೇ ಇಲ್ಲದಂತಾಗಿದೆ.
ತಾಲೂಕಿನ ಬಹುತೇಕ ಗ್ರಾಮೀಣ ರಸ್ತೆಗಳ ಇಕ್ಕೆಲದಲ್ಲಿ ಮುಳ್ಳುಕಂಟಿ ಗಿಡ ಬೆಳೆದು ನಿಂತಿವೆ. ಸಣ್ಣಪುಟ್ಟ ರಸ್ತೆ ನಿರ್ವಹಣೆ ಇಲ್ಲದ ಕಾರಣ, ಎದುರಿಗೆ ಬರುವ ವಾಹನಗಳಿಗೆ ರಸ್ತೆಯ ಪಕ್ಕದಲ್ಲಿ ಸರಿದು ಹೋಗಲು ರಸ್ತೆಯೇ ಕಾಣದಷ್ಟು ಜಾಲಿಮುಳ್ಳು ಮುತ್ತಿಕೊಂಡಿವೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರಯಾಣಿಕರು ತಗ್ಗು ಗುಂಡಿಗಳಲ್ಲಿ ಹಿಡಿಶಾಪ ಹಾಕುತ್ತಾ ಸಂಚರಿಸುತ್ತಿದ್ದಾರೆ.ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಅಧಿಕವಾಗಿದ್ದು, ಬಸ್ ಸೇರಿದಂತೆ ಇನ್ನಿತರ ವಾಹನಗಳ ಚಾಲಕರು ಮೈಯೆಲ್ಲ ಕಣ್ಣಾಗಿಸಿಕೊಂಡು ವಾಹನ ಓಡಿಸುವಂತಹ ಪರಿಸ್ಥಿತಿ ಇದೆ. ಹೂವಿನಹಡಗಲಿಯಿಂದ ಕೆ.ಅಯ್ಯನಹಳ್ಳಿ ಮಾರ್ಗವಾಗಿ ಮಾಗಳಕ್ಕೆ ಸಂಚರಿಸುವ ಬಸ್‌ಗಳ ಕಿಟಿಕಿ ಗ್ಲಾಸ್‌ಗಳು ಜಾಲಿಮುಳ್ಳಿಗೆ ಬಡಿದು ನಿತ್ಯ ಒಡೆಯುತ್ತಿವೆ. ವಾಹನ ಚಾಲಕರೇ ಇದರ ದಂಡವನ್ನು ಸಾರಿಗೆ ಇಲಾಖೆಗೆ ಕಟ್ಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಈ ರಸ್ತೆಯಲ್ಲಿ ಸರಿಯಾಗಿ ಎರಡು ವಾಹನಗಳು ಓಡಾಡಲು ಸರಿಯಾಗಿ ರಸ್ತೆಯೇ ಇಲ್ಲ. ಎದುರಿಗೆ ಬರುವ ವಾಹನಗಳು ಗೊತ್ತಾಗದೇ ಅಪಘಾತ ಉಂಟಾಗಿರುವ ಉದಾಹರಣೆಗಳಿವೆ.
ಈ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರು ಎದುರಿಗೆ ಬರುವ ವಾಹನಗಳಿಗೆ ಸಂಚರಿಸುವ ಅನುಕೂಲ ಮಾಡಲು ಹೋಗಿದ್ದ, ಸಂದರ್ಭದಲ್ಲಿ ಜಾಲಿಮುಳ್ಳಿಗೆ ಸಿಕ್ಕು ಹಾಕಿಕೊಂಡು ಮೈಮೇಲಿನ ಬಟ್ಟೆ ಕೂಡ ಹರಿದುಕೊಂಡ ಘಟನೆಗಳು ವರದಿಯಾಗಿದೆ.ಇನ್ನು ಕೆಲವೆಡೆ ರೈತರು ರಸ್ತೆಯನ್ನೇ ಒತ್ತುವರಿ ಮಾಡಿದ್ದಾರೆ. ರಸ್ತೆಯ ಇಕ್ಕೆಲದಲ್ಲಿ ಮಳೆ ನೀರು ಹರಿದು ಹೋಗಲು ನಿರ್ಮಾಣ ಮಾಡಿರುವ ಮಣ್ಣಿನ ಚರಂಡಿ ಕೂಡ ಮುಚ್ಚಿ ಹಾಕಿದ್ದಾರೆ.
ಡಾಂಬರ್ ರಸ್ತೆಯ ಪಕ್ಕದಲ್ಲಿ ಮಣ್ಣಿನ ರಸ್ತೆಯೇ ಇಲ್ಲದಂತೆ ಮಾಡಿದ್ದಾರೆ. ಒತ್ತುವರಿ ಮಾಡಿ ಮತ್ತೆ ರಸ್ತೆಯ ಪಕ್ಕದಲ್ಲಿ ಮುಳ್ಳಿನ ಬೇಲಿ ಹಾಕಿದ್ದಾರೆ. ಇದರಿಂದ ಈ ಗ್ರಾಮೀಣ ಭಾಗದ ರಸ್ತೆಯಲ್ಲಿ ಸಂಚಾರಕ್ಕೆ ಪ್ರಯಾಣಿಕರು ಹಾಗೂ ಬೈಕ್ ಸವಾರರು ಹೈರಾಣಾಗಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಕನಿಷ್ಠ ಜಾಲಿಮುಳ್ಳಿನ ಗಿಡ ತೆರವು ಮಾಡಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಲಿ ಎನ್ನುತ್ತಾರೆ ಸಾರ್ವಜನಿಕರು.