ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ದಿನವೇ ರಥಸಪ್ತಮಿ: ಹರೀಶ್

| Published : Feb 06 2025, 12:19 AM IST

ಸಾರಾಂಶ

ಸೂರ್ಯನಿಗೆ ಶಕ್ತಿ ಸಂಚಯನವಾಗುವ ದಿನವೇ ರಥಸಪ್ತಮಿ. ಸೂರ್ಯ ತನ್ನ ಪಥ ಹಾಗೂ ರಥ ಬದಲಿಸುವ ದಿನ. ಎಲ್ಲಾ ರೀತಿಯ ಯೋಗ ಪದ್ಧತಿಗಳಲ್ಲಿಯೂ ಸೂರ್ಯ ನಮಸ್ಕಾರಕ್ಕೆ ಮಹತ್ವದ ಸ್ಥಾನವಿದೆ. ಪುರಾಣಗಳಲ್ಲಿ ರಥಸಪ್ತಮಿಯನ್ನು ಸೂರ್ಯನ ಹುಟ್ಟಿದ ದಿನವೆಂದು ಹೇಳಲಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಭೂಮಿಯ ಸಕಲ ಜೀವಿಗಳು ಸೂರ್ಯನಿಗೆ ಋಣಿಯಾಗಿವೆ. ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ದಿನವೇ ರಥಸಪ್ತಮಿ ಎಂದು ಯುವಜನ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಸಿ. ಕೆ. ಹರೀಶ್ ತಿಳಿಸಿದರು.

ನಗರದ ಮಹಾರಾಜ ಉದ್ಯಾನದಲ್ಲಿರುವ ಶ್ರೀ ವಿವೇಕಾನಂದ ಯೋಗ ಶಿಕ್ಷಣ ಶಾಲೆಯ ಎಚ್. ಬಿ. ರಮೇಶ್ ಸಭಾಂಗಣದಲ್ಲಿ ರಥಸಪ್ತಮಿ ಅಂಗವಾಗಿ ಏರ್ಪಡಿಸಲಾಗಿದ್ದ 108 ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಮಹಿಳೆಯರ ಮೂರು ಕಂಟಕಗಳಾದ ಗರ್ಭ ಕೊರಳಿನ ಕ್ಯಾನ್ಸರ್, ಥೈರಾಯ್ಡ್ ಸಮಸ್ಯೆ ಹಾಗೂ ಋತುಚಕ್ರದ ಸಮಸ್ಯೆಗಳನ್ನು ಯೋಗದ ಮೂಲಕ ನಿವಾರಿಸಿಕೊಳ್ಳಬಹುದೆಂದು ಅವರು ವಿವರಿಸಿದರು.

ಲೇಖಕ ಗೊರೂರು ಶಿವೇಶ್ ಮಾತನಾಡಿ, ಸೂರ್ಯನಿಗೆ ಶಕ್ತಿ ಸಂಚಯನವಾಗುವ ದಿನವೇ ರಥಸಪ್ತಮಿ. ಸೂರ್ಯ ತನ್ನ ಪಥ ಹಾಗೂ ರಥ ಬದಲಿಸುವ ದಿನ. ಎಲ್ಲಾ ರೀತಿಯ ಯೋಗ ಪದ್ಧತಿಗಳಲ್ಲಿಯೂ ಸೂರ್ಯ ನಮಸ್ಕಾರಕ್ಕೆ ಮಹತ್ವದ ಸ್ಥಾನವಿದೆ. ಪುರಾಣಗಳಲ್ಲಿ ರಥಸಪ್ತಮಿಯನ್ನು ಸೂರ್ಯನ ಹುಟ್ಟಿದ ದಿನವೆಂದು ಹೇಳಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಚಳಿ ಕಳೆದು ದಿನದ ಉಷ್ಣತೆಯು ಹೆಚ್ಚುತ್ತಾ ಹೋಗುತ್ತದೆ ಎಂದು ತಿಳಿಸಿದರು. ವಿಶ್ವದ ಬಿಲಿಯನ್ನುಗಟ್ಟಲೆ ನಕ್ಷತ್ರಗಳಲ್ಲಿ ಸೂರ್ಯ ಮಧ್ಯಮ ಗಾತ್ರದ ನಕ್ಷತ್ರ. ಇದುವರೆಗಿನ ಸಂಶೋಧನೆಯಲ್ಲಿ ಭೂಮಿಯಲ್ಲಿ ಮಾತ್ರ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳಿವೆ. ಬಹುತೇಕ ಪ್ರಾಣಿ, ಪಕ್ಷಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಸ್ಯ ಸಂಕುಲವನ್ನು ಅವಲಂಬಿಸಿದ್ದು, ಸಸ್ಯಗಳು ಆಹಾರ ತಯಾರಿಸಿಕೊಳ್ಳಲು ಸೂರ್ಯನನ್ನು ಅವಲಂಬಿಸಿವೆ. ಮನುಷ್ಯ ತನ್ನ ಉಳಿವಿಗಾಗಿ ಈ ಸಸ್ಯಗಳನ್ನು ಅವಲಂಬಿಸಿದ್ದಾನೆ. ಸೂರ್ಯನ ಏಳು ಕಿರಣಗಳು ನಮ್ಮ ದೇಹದ ಏಳು ಶಕ್ತಿ ಚಕ್ರಗಳನ್ನು ಜಾಗ್ರತಗೊಳಿಸಿ ಹಾರ್ಮೋನ್ ವಿಸರ್ಜಿಸುವ ಗ್ರಂಥಿಗಳನ್ನು ಸಚೇತನಗೊಳಿಸುತ್ತವೆ. ಜೀವಚೇತನ ಮೂಲವಾದ್ದರಿಂದ ಸೂರ್ಯನಿಗೆ ಕೃತಜ್ಞತೆ ಸಲ್ಲಿಸಲು ನಮ್ಮ ಹಿರಿಯರು ಸೂರ್ಯ ನಮಸ್ಕಾರವನ್ನು ಆಚರಣೆಗೆ ತಂದರು. ಸೂರ್ಯ ನಮಸ್ಕಾರ ಮಾನವನ ಪ್ರಕೃತಿಯ ಆರಾಧನೆಯ ಸಂಕೇತ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ವಿವೇಕಾನಂದ ಪ್ರತಿಮೆಗೆ ಹಿರಿಯರಾದ ಪುಟ್ಟಪ್ಪ ಮಾಲಾರ್ಪಣೆ ಮಾಡಿದರು. ಮಹಿಳಾ ಶಿಕ್ಷಣಾರ್ಥಿಗಳು ರಥಸಪ್ತಮಿ ರಂಗೋಲಿ ಹಾಕಿ ಸಂಭ್ರಮಿಸಿದರು. ಯೋಗ ಶಿಕ್ಷಣಾರ್ಥಿಗಳಾದ ಧರ್ಮಪ್ಪ ,ಪುಟ್ಟಪ್ಪ , ರಾಜೇಶ್, ಸುಬ್ರಹ್ಮಣ್ಯ ನಿವೃತ್ತ ಎಸ್ ಬಿಎಂ ಮ್ಯಾನೇಜರ್ ಕೃಷ್ಣಮೂರ್ತಿ, ನಾಗೇಶ್ ಮತ್ತು ಉದ್ಯಮಿಗಳಾದ ಪರಮೇಶ್, ರಂಗನಾಥ್, ಗೋಪಿನಾಥ್, ಅಧ್ಯಾಪಕರಾದ ಚೆಲುವೆಗೌಡ, ವಿಜಯ್, ಹಾಪ್ ಕಾಮ್ಸ್ ಸುರೇಶ್, ಶ್ರೀಮತಿ ಸುಶೀಲ, ಭಾರತಿ, ಸುಮನ, ರಮ್ಯ, ಚಂದ್ರಕಲಾ, ಕೋಮಲ, ಜಯಂತಿ, ಗೌರಿಬಾಯಿ, ಪದ್ಮ,ಗಾನವಿ ಮುಂತಾದವರು ಹಾಜರಿದ್ದರು.