ಶಿಶುವಿನಹಾಳದಲ್ಲಿ ಶರೀಫಜ್ಜ, ಗೋವಿಂದ ಭಟ್ಟರ ಸಂಭ್ರಮದ ರಥೋತ್ಸವ

| Published : Mar 20 2024, 01:22 AM IST

ಶಿಶುವಿನಹಾಳದಲ್ಲಿ ಶರೀಫಜ್ಜ, ಗೋವಿಂದ ಭಟ್ಟರ ಸಂಭ್ರಮದ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಶಾಂತಿ ಸೌಹಾರ್ದತೆ, ಭಾವೈಕ್ಯದ ತಾಣವಾದ ತಾಲೂಕಿನ ಶಿಶುವಿನಹಾಳ ಗ್ರಾಮದ ಪಂಚಾಗ್ನಿಮಠದಲ್ಲಿ ಸಂತ ಶಿಶುವಿನಹಾಳ ಶರೀಫ್‌ ಶಿವಯೋಗಿಗಳ ಹಾಗೂ ಗುರು ಗೋವಿಂದ ಭಟ್ಟರ ಮಹಾರಥೋತ್ಸವ ಮಂಗಳವಾರ ಸಂಜೆ ಸಾವಿರಾರು ಭಕ್ತರ ಮಧ್ಯ ಸಡಗರ ಸಂಭ್ರಮದಿಂದ ನೆರವೇರಿತು.

ಶಿಗ್ಗಾಂವಿ: ಶಾಂತಿ ಸೌಹಾರ್ದತೆ, ಭಾವೈಕ್ಯದ ತಾಣವಾದ ತಾಲೂಕಿನ ಶಿಶುವಿನಹಾಳ ಗ್ರಾಮದ ಪಂಚಾಗ್ನಿಮಠದಲ್ಲಿ ಸಂತ ಶಿಶುವಿನಹಾಳ ಶರೀಫ್‌ ಶಿವಯೋಗಿಗಳ ಹಾಗೂ ಗುರು ಗೋವಿಂದ ಭಟ್ಟರ ಮಹಾರಥೋತ್ಸವ ಮಂಗಳವಾರ ಸಂಜೆ ಸಾವಿರಾರು ಭಕ್ತರ ಮಧ್ಯ ಸಡಗರ ಸಂಭ್ರಮದಿಂದ ನೆರವೇರಿತು. ವಿವಿಧ ಜಿಲ್ಲೆಗಳಿಂದ, ಗ್ರಾಮಗಳಿಂದ ತಂಡೋಪ ತಂಡವಾಗಿ ಸಾವಿರಾರು ಭಕ್ತರು ಆಗಮಿಸಿದ್ದರು.

ಶರೀಫ ಶಿವಯೋಗಿಗಳು ಸರಳ ಸಾಲುಗಳಲ್ಲಿ ಸರ್ವ ಧರ್ಮದ ತಿರುಳು ಒಂದೇ ಎಂದು ಸಾರಿದವರು. ಪ್ರತಿ ವರ್ಷ ನಡೆಯುವ ಅವರ ಜಾತ್ರಾ ಮಹೋತ್ಸವಕ್ಕೆ, ಮಹಾರಥೋತ್ಸವಕ್ಕೆ ಎತ್ತಿನ ಬಂಡಿ ಮೂಲಕ ಹರಿದು ಬರುವ ಸಾವಿರಾರು ಭಕ್ತರಲ್ಲಿ ಅನೇಕರು ಚಿಲುಮೆ ಸೇದಿ ಶರೀಫರನ್ನು ಸ್ಮರಿಸಿದ್ದು ಸಾಮಾನ್ಯವಾಗಿತ್ತು. ಶರೀಫ ಗಿರಿಯಲ್ಲಿ ಬೆಳಗ್ಗೆಯಿಂದ ನಡೆಯುವ ಧಾರ್ಮಿಕ ವಿಧಿವಿಧಾನಗಳ ಬಳಿಕ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಭಕ್ತಿಯಿಂದ ಕಟ್ಟಿಕೊಂಡು ಬಂದ ಅನ್ನದ ಬುತ್ತಿಯನ್ನೇ ಪ್ರಸಾದ ರೂಪದಲ್ಲಿ ನೀಡುತ್ತಾರೆ. ನೂಕುನುಗ್ಗಲು ಮಧ್ಯೆ ಅನ್ನ ಪ್ರಸಾದವನ್ನು ಪಡೆಯುವ ದೃಶ್ಯ ಕಂಡುಬಂತು. ಸಂಜೆ ನಡೆದ ಮಹಾರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ವಿಶ್ವಸ್ಥ ಸಮಿತಿಯ ಧರ್ಮದರ್ಶಿಗಳು ಜನಪ್ರತಿನಿಧಿಗಳು ಹಾಗೂ ಮಠಾಧಿಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಗ್ಗಾಂವಿ ಪೊಲೀಸರು ಸೂಕ್ತ ಬಂದೋಬಸ್ತ್‌ ಕಲ್ಪಿಸಿದ್ದರು.ಸಚಿವ ಜೋಶಿ ಭೇಟಿ: ತಾಲೂಕಿನ ಶಿಶುನಾಳ ಗ್ರಾಮದ ಪಂಚಾಗ್ನಿಮಠದಲ್ಲಿ ಸಂತ ಶಿಶುವಿನಹಾಳ ಶರೀಫ ಶಿವಯೋಗಿಗಳ ಹಾಗೂ ಗುರು ಗೋವಿಂದ ಭಟ್ಟರ ರಥೋತ್ಸವ ಮುಗಿದ ಬಳಿಕ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಷಿ ಭೇಟಿ ನೀಡಿ, ಪೂಜೆ ಸಲ್ಲಿಸಿದರು.

ಡೊಳ್ಳು ಹಾಕಿಕೊಂಡು ಬಾರಿಸಿದ ಪ್ರಹ್ಲಾದ ಜೋಶಿ ಅವರು ಜಾತ್ರೆಗೆ ಬಂದ ಭಕ್ತರಿಗೆ ಶುಭಕೋರಿದರು. ಬಳಿಕ ಸಂತ ಶಿಶುವಿನಹಾಳ ಶರೀಫ ಶಿವಯೋಗಿಗಳ ಹಾಗೂ ಗುರುಗೋವಿಂದ ಭಟ್ಟರ ಮೂರ್ತಿಗೆ ನಮನ ಸಲ್ಲಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಮಾಜಿ ಅಧ್ಯಕ್ಷ ದೇವಣ್ಣಾ ಚಾಕಲಬ್ಬಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ, ಯುವ ಮುಖಂಡ ನರಹರಿ ಕಟ್ಟಿ ಪಾಲ್ಗೊಂಡಿದ್ದರು.