ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಶೈವ ಲಿಂಗಾಯಿತ ಸಂಘದಿಂದ ಶುಕ್ರವಾರ ಬೆಳಿಗ್ಗೆ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಬಸವಣ್ಣನ ರಥೋತ್ಸವ ವಿವಿಧ ರಾಜ ಬೀದಿಗಳಲ್ಲಿ ಸಾಗಿತು.ಶ್ರೀ ವೀರಶೈವ ಲಿಂಗಾಯಿತ ಸಂಘದ ಅಧ್ಯಕ್ಷ ಬಿ.ಪಿ. ಐಸಾಮಿಗೌಡ ಮಾತನಾಡಿ, ಜಿಲ್ಲಾ ವೀರಶೈವ ಲಿಂಗಾಯಿತ ಸಂಘದ ವತಿಯಿಂದ ೧೨ನೇ ಶತಮಾನದ ಮಹಾನ್ ಕ್ರಾಂತಿಕಾರಿ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯನ್ನು ಆಚರಿಸುತ್ತಿದ್ದೇವೆ. ಬೆಳಗ್ಗಿನಿಂದಲೇ ವಿವಿಧ ಪೂಜೆ ಕಾರ್ಯಗಳನ್ನು ನೆರವೇರಿಸಲಾಗಿದೆ ಎಂದರು. ಪ್ರಸ್ತುತ ನಾವೆಲ್ಲರೂ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದ್ದೇವೆ, ಆದರೆ, ೧೨ನೇ ಶತಮಾನದಲ್ಲೇ ಅನುಭವ ಮಂಟಪವನ್ನು ಸ್ಥಾಪನೆ ಮಾಡಿ ಪ್ರಜಾಪ್ರಭುತ್ವದ ತಳಹದಿಯನ್ನು ಹಾಕಿಕೊಟ್ಟಂತಹ ಮಹಾನ್ ಕ್ರಾಂತಿಕಾರಿ ಬಸವಣ್ಣನವರು. ವಚನ ಸಾಹಿತ್ಯದ ಮೂಲಕ ಸರಳವಾಗಿ ಸಮಾಜವನ್ನು ತಿದ್ದುವ ಕಾಯಕ ಮಾಡಿದ್ದವರು. ವಚನಗಳ ಮೂಲಕ ಸಮಾಜದ ಅಂಕು-ಡೊಂಕನ್ನು ತಿದ್ದಿ ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೂಯ್ಯುವ ದೆಸೆಯಲ್ಲಿ ಜಗಜ್ಯೋತಿ ಬಸವೇಶ್ವರರು ನಮಗೆಲ್ಲಾ ಆದರ್ಶವಾಗಿದ್ದಾರೆ ಎಂದು ಹೇಳಿದರು.
ಪ್ರತಿ ವರ್ಷವೂ ಕೂಡ ಸಂಘದಿಂದ ಬಸವ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅವರ ಆದರ್ಶ ಮತ್ತು ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸಮಾಜ ಹಾಗೂ ಸಂಘಟನೆಯ ಸಮಗ್ರ ಅಭಿವೃದ್ಧಿಗೆ ನಾವೆಲ್ಲಾ ಪಣತೊಡಬೇಕೆಂದು ಕರೆ ನೀಡಿದರು.ಶ್ರೀ ವೀರಶೈವ ಲಿಂಗಾಯಿತ ಸಂಘದ ಭುವನಾಕ್ಷ, ರುದ್ರಕುಮಾರ್, ಮಲ್ಲಿಕಾರ್ಜುನ್, ಶೋಭನ್ ಬಾಬು, ಮಯೂರಿ ಲೋಕೇಶ್, ಲೋಕೇಶ್, ಯು.ಎಸ್. ಬಸವರಾಜು, ಮಿಥುನ್, ನಾಗೇಶ್, ಡಾ. ಜಯರಾಜ್, ಕಾಂತರಾಜು, ಅನ್ನಪೂರ್ಣ, ಷಡಕ್ಷರಿ, ಕೀರ್ತಿಕುಮಾರ್ ಇತರರು ಉಪಸ್ಥಿತರಿದ್ದರು.