ಸಾರಾಂಶ
ಧಾರವಾಡ:
ಇಲ್ಲಿಯ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಮುರುಘಾಮಠದ ಶ್ರೀಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ 95ನೇ ಜಾತ್ರಾ ಮಹೋತ್ಸವ ಜ. 24ರಿಂದ ಶುರುವಾಗಿದ್ದು, ಫೆ. 3ರ ವರೆಗೆ ನಡೆಯಲಿದೆ.ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಜ. 24ರಿಂದ ಪ್ರವಚನ ಶುರುವಾಗಿದ್ದು, ಜ. 29ರಂದು ಮುಕ್ತಾಯಗೊಂಡಿತು. ಜ. 30ರ ಬೆಳಗ್ಗೆ 9ಕ್ಕೆ ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮೀಜಿ ನೇತೃತ್ವದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಲಿದೆ. ಸಂಜೆ 7ಕ್ಕೆ ಜಾತ್ರಾ ಮಹೋತ್ಸವ ಉದ್ಘಾಟನೆಯಲ್ಲಿ ಮೂರುಸಾವಿಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿವಿಧ ಮಠಾಧೀಶರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ:ಜ. 31ರ ಸಂಜೆ 6ಕ್ಕೆ ಶಿವಾನುಭವ ಚಿಂಥನ ಸಾನ್ನಿಧ್ಯವನ್ನು ಫಕೀರೇಶ್ವರ ಮಠದ ಫಕೀರಸಿದ್ದರಾಮ ಸ್ವಾಮೀಜಿ ವಹಿಸಲಿದ್ದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಪ್ರಭುಚನ್ನಬಸವ ಸ್ವಾಮೀಜಿ ಉಪನ್ಯಾಸ ನೀಡುವರು. ಫೆ.1ರಂದು ಸಂಜೆ 7ಕ್ಕೆ ಅಖಿಲ ಭಾರತ ಶಿವಾನುಭವ ಸಂಸ್ಥೆಯ 83ನೇ ಸಮ್ಮೇಳನದಲ್ಲಿ ನಿಡಸೂಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹಾಂತ ಸಿದ್ದೇಶ್ವರ ಸ್ವಾಮೀಜಿಗೆ ಗುರುವಂದನೆ ನಡೆಯಲಿದೆ. ಫೆ. 2ರ ಸಂಜೆ 7ಕ್ಕೆ ಇಂಗಳೇಶ್ವರ ಮಠದ ಚನ್ನಬಸವ ಸ್ವಾಮೀಜಿಗೆ ₹ 25 ಸಾವಿರ ನಗದು ಹಾಗೂ ಒಂದು ತೊಲೆ ಚಿನ್ನದ ಪದಕದೊಂದಿಗೆ ಮೃತ್ಯುಂಜಯ-ಮಹಾಂತ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ರಥೋತ್ಸವ:ಫೆ. 3ರಂದು ಬೆಳಗ್ಗೆ 4ಕ್ಕೆ ಲಿಂಗದೀಕ್ಷೆಯಲ್ಲಿ ಅಭಿನವ ಶಾಂತಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ವಿವಿಧ ಮಠಾಧೀಶರು ಉಪಸ್ಥಿತರಿರುವರು. ಸಂಜೆ 4ಕ್ಕೆ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ ರಥೋತ್ಸವವು ನಡೆಯಲಿದ್ದು, ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ನಾಡಿನ ವಿವಿಧ ಮಠಾಧೀಶರು ಸಮ್ಮುಖವಹಿಸುವರು. ಜಾತ್ರಾ ಮಹೋತ್ಸವದಲ್ಲಿ ಪತ್ರಕರ್ತರಾದ ರವಿಕುಮಾರ ಕಗ್ಗನವರ, ಬಸವರಾಜ ಹೊಂಗಲ, ಮಂಜುನಾಥ ಅಂಗಡಿ, ನಿಜಗುಣಿ ದಿಂಡಲಕೊಪ್ಪ, ಮಹಾಂತೇಶ ಕಣವಿ ಹಾಗೂ ರವೀಶ ಪವಾರ ಅವರನ್ನು ಸನ್ಮಾನಿಸಲಾಗುವುದು ಎಂದು ಸ್ವಾಮೀಜಿ ಮಾಹಿತಿ ನೀಡಿದರು. ರೈಲ್ವೆ ನಿಲ್ದಾಣಕ್ಕೆ ಮೃತ್ಯುಂಜಯ ಅಪ್ಪಗಳ ಹೆಸರಿಡಿ
ತ್ರಿವಿಧ ದಾಸೋಹ ಕೊಡುಗೆ ನೀಡಿದ ಮೃತ್ಯುಂಜಯಪ್ಪಗಳ ಹೆಸರನ್ನು ಧಾರವಾಡ ರೈಲ್ವೆ ನಿಲ್ದಾಣಕ್ಕೆ ನೇಮಕ ಮಾಡಬೇಕು ಎಂದು ಕರ್ನಾಟಕ ಹಾಗೂ ಕೇಂದ್ರ ಸರ್ಕಾರಕ್ಕೆ ಎರಡು ತಿಂಗಳ ಹಿಂದೆ ಪತ್ರ ಬರೆಯಲಾಗಿದೆ. ಶತಮಾನೋತ್ಸವ ಆಚರಿಸಿಕೊಂಡಿರುವ ಶ್ರೀಮುರಘಾಮಠದ ಮೃತ್ಯುಂಜಯ ಅಪ್ಪಗಳ ಹೆಸರು ನಾಮಕರಣಕ್ಕೆ ಮಠದ ಭಕ್ತರ ಸಮಿತಿ ರಚಿಸಿ ಸರ್ಕಾರಕ್ಕೆ ಒತ್ತಾಯಿಸಲಿದೆ ಎಂದು ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.