ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ನಗರದಲ್ಲಿ ಏ.18ರಂದು ಶ್ರೀರಾಮನ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ.ರಾಮದೇವರಬೆಟ್ಟದಲ್ಲಿ ನೆಲೆಸಿರುವ ಶ್ರೀರಾಮದೇವರಿಗೆ ಇಲ್ಲಿನ ಛತ್ರದ ಬೀದಿಯಲ್ಲಿ ಪ್ರತಿ ವರ್ಷದ ಪದ್ಧತಿಯ ಪ್ರಕಾರ ಶೋಭಕೃತ ನಾಮ ಸಂವತ್ಸರದ ಚೈತ್ರ ಶುದ್ಧ ದಶಮಿಯ ಗುರುವಾರದಂದು ಬೆಳಿಗ್ಗೆ 9.58 ರಿಂದ 10.15 ಗಂಟೆಯೊಳಗೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ಮಹಾ ರಥೋತ್ಸವ ನಡೆಯಲಿದೆ.
ಪಾಂಚರಾತ್ರೋಕ್ತ ಆಗಮಾನುಸಾರವಾಗಿ ಏ.9 ರಿಂದ ಮೇ 11 ರವರೆಗೆ ನವಾಹೋತ್ಸವ ಪೂರ್ವಕ ಶ್ರೀ ಸ್ವಾಮಿಯವರ ಸೇವಾ ಕೈಂಕರ್ಯಗಳು ನಡೆಯಲಿವೆ. ಶ್ರೀರಾಮನ ರಥೋತ್ಸವಕ್ಕೆ 500 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ರಾಮದೇವರ ಬೆಟ್ಟದಲ್ಲಿ ಕಳೆದ 56 ವರ್ಷಗಳ ಹಿಂದೆ ವಿಗ್ರಹಗಳ ಕಳ್ಳತನವಾದ್ದರಿಂದ ನಗರದಲ್ಲಿ 1971ರಲ್ಲಿ ಶ್ರೀರಾಮ ದೇವಾಲಯವನ್ನು ಸ್ಥಾಪಿಸಲಾಯಿತು.ರಥವು 36 ಅಡಿ ಎತ್ತರವಿದೆ. ನಾನಾ ಜಿಲ್ಲೆಗಳಿಂದ ರಥೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳು ರಥಕ್ಕೆ ಜವನ ಮತ್ತು ಬಾಳೆ ಹಣ್ಣು ಎಸೆದು ಹರಕೆ ತೀರಿಸಿಕೊಳ್ಳಲಿದ್ದಾರೆ. ರಾಮನಗರದಲ್ಲಿ ಪ್ರತಿ ವರ್ಷ ಶ್ರೀರಾಮ ನವಮಿಯ ಮರುದಿನ ಶ್ರೀರಾಮನ ರಥೋತ್ಸವ ಮತ್ತು ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ ಎಂದು ದೇವಾಲಯದ ಪ್ರಧಾನ ಅರ್ಚಕ ಎ. ನರಸಿಂಹಭಟ್ಟ ತಿಳಿಸಿದ್ದಾರೆ.
ಏ.17ರಿಂದ 24 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು:ಶ್ರೀ ರಾಮದೇವರ ರಥೋತ್ಸವದ ಪ್ರಯುಕ್ತ ಏ. 17 ರಿಂದ 24ರ ವರೆಗೆ ಪ್ರತಿ ದಿನ ಸಂಜೆ 6 ಗಂಟೆಗೆ ಶ್ರೀ ರಾಮನವಮಿ ಸಂಗೀತೋತ್ಸವದಲ್ಲಿ ಭಗವನ್ನಾಮ ಸಂಕೀರ್ತನೆ, ಹರಿಕತೆ, ಭರತನಾಟ್ಯ ಹಾಗೂ ದೇವರ ನಾಮ ಕಾರ್ಯಕ್ರಮಗಳನ್ನು ನಗರದ ಶ್ರೀ ಶಾರದಾಂಬ ದೇವಾಲಯದಲ್ಲಿ ಆಯೋಜಿಸಲಾಗಿದೆ. ಜೊತೆಗೆ ಸಾಧಕರನ್ನು ಗೌರವಿಸಲಾಗುತ್ತದೆ.
ಏ.17ರಂದು ಸಂಜೆ 6 ಗಂಟೆಗೆ ಶ್ರೀ ಸರಸ್ವತಿ ಭಜನಾ ಮಂಡಳಿ ತಂಡದವರಿಂದ ಭಗವದ್ಗೀತೆ ಮತ್ತು ಭಜನಾ ಕಾರ್ಯಕ್ರಮ, ಏ.18ರಂದು ಕವಿತಾ ಮತ್ತು ಝಾನ್ಸಿರಾಣಿ ತಂಡದವರಿಂದ ಶಾಸ್ತ್ರೀಯ ಸಂಗೀತ ಹಾಗೂ ದೇವರ ನಾಮಗಳು, ಏ.19ರಂದು ಶ್ರೀರಾಮ ಸಂಗೀತ ವಿದ್ಯಾಲಯದ ಮುಖ್ಯಸ್ಥ ಕಾಕೋಳು ಶೈಲೇಶ್ ತಂಡದವರಿಂದ ಭಕ್ತಿ ಗೀತೆಗಳ ಕಾರ್ಯಕ್ರಮ, ಏ.20ರಂದು ಶ್ರೀ ಮಂಜುನಾಥ ಗುರುಕುಲ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ, ಏ.21ರಂದು ಶೃತಿ ಸಿಂಧೂರ ಅಕಾಡೆಮಿ ಆಫ್ ಮ್ಯೂಸಿಕ್ ಚಾರಿಟೇಬಲ್ ಟ್ರಸ್ಟಿನ ವಿದ್ವಾನ್ ರವಿಶಂಕರಶರ್ಮ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಭಗವನ್ನಾಮ ಸಂಕೀರ್ತನೆ, ಏ.22ರಂದು ಸಪ್ತಸ್ವರ ಸಂಗೀತ ವಿದ್ಯಾಲಯ ಚಾರಿಟಬಲ್ ಟ್ರಸ್ಟ್ ಹಾಗೂ ಗೀರ್ವಾಣಿ ಸಂಗೀತ ಶಾಲೆ, ಶಾರದಾ ಸಂಗೀತ ಶಾಲೆ ವತಿಯಿಂದ ಭಗವನ್ನಾಮ ಸಂಕೀರ್ತನೆ, ಏ.23ರಂದು ವಚನ ಗಾಯಕ ಬಿ.ಪಿ. ರೇಣುಕಪ್ಪ ಮತ್ತು ತಂಡದವರಿಂದ ವಚನ ಗಾಯನ, ಏ.24ರಂದು ವಿದ್ವಾನ್ ಸೀತಾರಾಮ್ ಮುನಿಕೋಟಿ ಅವರಿಂದ ‘ಶ್ರೀರಾಮ ಪಟ್ಟಾಭಿಷೇಕ’ ಹರಿಕಥೆ ಏರ್ಪಡಿಸಲಾಗಿದೆ ಎಂದು ಶ್ರೀರಾಮೋತ್ಸವ ಸಂಕೀರ್ತನಾ ಸೇವಾ ಟ್ರಸ್ಟಿನ ಅಧ್ಯಕ್ಷ ಎಚ್.ವಿ. ಶೇಷಾದ್ರಿ ಐಯ್ಯರ್ ತಿಳಿಸಿದ್ದಾರೆ.ಇಂದು ಸಂಗೀತೋತ್ಸವ:
ರಾಮನಗರದ ಚಾಮುಂಡೇಶ್ವರಿ ದೇವಾಲಯದ ಹಿಂಭಾಗದಲ್ಲಿರುವ ಪರಶುರಾಮರ ಮಠದಲ್ಲಿ ಏ.17ರಂದು ಸಂಜೆ 6 ಗಂಟೆಗೆ ರಾಮನವಮಿಯ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಗಾಯಕಿ ಝಾನ್ಸಿ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.