ಸಾರಾಂಶ
ಇಲ್ಲಿನ ಜೆಪಿ ನಗರದ ಶ್ರೀದೇವಿ ದೇವಸ್ಥಾನದ ರಥೋತ್ಸವನ್ನು ಸಡಗರ ಸಂಭ್ರಮದಿಂದ ಭಾನುವಾರ ಸಂಜೆ ಮಹಿಳೆಯರಷ್ಟೇ ಎಳೆದು ನವರಾತ್ರಿ ಉತ್ಸವವನ್ನು ಸಂಪನ್ನಗೊಳಿಸಿದರು.
ಮಹಿಳೆಯರಷ್ಟೇ ರಥ ಎಳೆದು ಸಂಭ್ರಮ । ನವರಾತ್ರಿ ಉತ್ಸವ ಸಂಪನ್ನ
ಕನ್ನಡಪ್ರಭ ವಾರ್ತೆ ಕಾರಟಗಿ
ಇಲ್ಲಿನ ಜೆಪಿ ನಗರದ ಶ್ರೀದೇವಿ ದೇವಸ್ಥಾನದ ರಥೋತ್ಸವನ್ನು ಸಡಗರ ಸಂಭ್ರಮದಿಂದ ಭಾನುವಾರ ಸಂಜೆ ಮಹಿಳೆಯರಷ್ಟೇ ಎಳೆದು ನವರಾತ್ರಿ ಉತ್ಸವವನ್ನು ಸಂಪನ್ನಗೊಳಿಸಿದರು.ದೇವಸ್ಥಾನದ ರಥವನ್ನು ಮಹಿಳೆಯರಷ್ಟೇ ಎಳೆಯುವ ಸಂಪ್ರದಾಯ ಇದ್ದು, ಭಾನುವಾರ ಸಂಜೆ ನೆರೆದಿದ್ದ ನೂರಾರು ಮಹಿಳೆಯರು-ಯುವತಿಯರು ರಥವನ್ನು ಪಾದಗಟ್ಟೆಯವರೆಗೆ ಮತ್ತು ಅಲ್ಲಿಂದ ದೇವಸ್ಥಾನದ ಮುಂದಿನ ಸ್ವಸ್ಥಳದವರೆಗೂ ಎಳೆದು ಭಕ್ತಿ ಅರ್ಪಿಸಿದರು.
ಜೆಪಿ ನಗರದ ದೇವಸ್ಥಾನದ ಮುಂದಿನ ಬಯಲಿನಲ್ಲಿ ಅಲಂಕೃತ ರಥದಲ್ಲಿ ಅರ್ಚಕರು ಮತ್ತು ದೇವಸ್ಥಾನ ಸಮಿತಿ ಸದಸ್ಯರು ನಿಗದಿ ಪಡಿಸಿದ ಮುಹೂರ್ತದಲ್ಲಿ ಉತ್ಸವ ಮೂರ್ತಿಯನ್ನು ಪೂಜೆಯೊಂದಿಗೆ ರಥದಲ್ಲಿ ಕೂಡಿಸಿದರು. ಆದಾಗಲೇ ಅಪಾರ ಸಂಖ್ಯೆಯಲ್ಲಿ ಸಿದ್ಧವಾಗಿ ನಿಂತಿದ್ದ ಮಹಿಳೆಯರು ಮತ್ತು ಯುವತಿಯರುನಿಧಾನವಾಗಿ ರಥವನ್ನು ಎಳೆಯತೊಡಗಿದರು. ಶ್ರೀದೇವಿ ಜಗನ್ಮಾಥೆಯ ಜಯಘೋಷಣೆಗಳ ನಡುವೆ ದೇವಸ್ಥಾನದಿಂದ ಆರಂಭಗೊಂಡ ರಥೋತ್ಸವ ಜೆಪಿ ನಗರದ ಮುಖ್ಯರಸ್ತೆಯಿಂದ ಸಾಗಿ ನವಲಿ ರಸ್ತೆ, ಕರ್ನಾಟಕ ಪಬ್ಲಿಕ್ ಶಾಲೆ ಮಾರ್ಗವಾಗಿ ಕರೆಪ್ಪತಾತ ದೇವಾಲಯದ ಬಳಿಯ ಎದುರು ಬಸವಣ್ಣ ಪಾದಗಟ್ಟೆಯವರೆಗೂ ತಲುಪಿ ಬಳಿಕ ಮರಳಿ ದೇವಸ್ಥಾನದ ಮುಂದಿನ ಸ್ವಸ್ಥಳಕ್ಕೆ ತಲುಪಿತು. ಈ ವೇಳೆ ನೆರೆದಿದ್ದ ಮಹಿಳೆಯರು, ಯುವತಿಯರು, ಪುರುಷರು ಹೂವು, ಬಾಳೆಹಣ್ಣು, ಉತ್ತತ್ತಿ ಅರ್ಪಿಸಿದರು. ಶ್ರೀದೇವಿಗೆ ಜೈಕಾರ ಹಾಕಿದರು.
ಬೆಳಗ್ಗೆ ದೇವಸ್ಥಾನದ ಮುಂದೆ ಮಹಿಳೆಯರೇ ಮಡಿತೇರು ಎಳೆದರು. ದೇವಸ್ಥಾನ ಸಮಿತಿಯ ಸದಸ್ಯರು ನಿಗದಿತ ಮುಹೂರ್ತಕ್ಕೆ ರಥಕ್ಕೆ ಪೂಜೆ ಸಲ್ಲಿಸಿ, ಉತ್ಸವ ಮೂರ್ತಿ ಪ್ರತಿಷ್ಥಾಪಿಸಿ ಕಳಸಾರೋಹಣ ನಡೆಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದಲ್ಲಿ ಶರನ್ನವರಾತ್ರಿ ನಿಮಿತ್ತ ನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮ, ಪುರಾಣ ಪ್ರವಚನ ನಡೆದು ರಥೋತ್ಸವದೊಂದಿಗೆ ಉತ್ಸವಕ್ಕೆ ತೆರೆ ಬಿತ್ತು.