ದಿಗ್ಗಿ ಸಂಗಮೇಶ್ವರರ ಸಂಭ್ರಮದ ರಥೋತ್ಸವ

| Published : Aug 30 2024, 01:00 AM IST

ಸಾರಾಂಶ

Rathotsava to celebrate Diggi Sangameshwara

- ಯಾದಗಿರಿ ಜಿಲ್ಲೆ ಸೇರಿದಂತೆ ಹೊರ ರಾಜ್ಯ ಮಹಾರಾಷ್ಟ್ರ, ಆಂಧ್ರದಿಂದಲೂ ಭಕ್ತರ ಆಗಮನ

-----

ಕನ್ನಡಪ್ರಭ ವಾರ್ತೆ ಶಹಾಪುರ

ಸಗರನಾಡಿನ ಆರಾಧ್ಯದೈವ ತಾಲೂಕಿನ ದಿಗ್ಗಿ ಗ್ರಾಮದ ಸಂಗಮೇಶ್ವರರ ರಥೋತ್ಸವ ಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ ಶ್ರದ್ಧಾ, ಭಕ್ತಿಯಿಂದ ನಡೆಯಿತು.

ಪ್ರತಿ ಶ್ರಾವಣ ಮಾಸದ 4ನೇಯ ಸೋಮವಾರದ ನಂತರ ದಿಗ್ಗಿ ಸಂಗಮೇಶ್ವರರ ರಥೋತ್ಸವ ಜರುಗುತ್ತದೆ. ಎಂದಿನಂತೆ ಭಕ್ತರು ಬೆಳಿಗ್ಗೆಯಿಂದಲೇ ದೇವರಿಗೆ ಕಾಯಿ, ಕರ್ಪೂರ, ನೈವೇದ್ಯ ಸಮರ್ಪಿಸಿ ದರ್ಶನ ಪಡೆದರು. ಸಂಜೆ ನಡೆದ ರಥೋತ್ಸವದಲ್ಲಿ ಭಾಗವಹಿಸಿದ ಭಕ್ತರು ಉತ್ತುತ್ತಿ, ಬಾಳೆಹಣ್ಣು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.

ಪ್ರತಿವರ್ಷಕ್ಕಿಂತ ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ನೆರೆಯ ಕಲಬರಗಿ, ಯಾದಗಿರಿ, ಬಾಗಲಕೋಟೆ, ರಾಯಚೂರಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಸುತ್ತಲಿನ ಗ್ರಾಮಗಳಿಂದಲೂ ಭಕ್ತಾಧಿಗಳು ಕುಟುಂಬ ಸಮೇತ ಆಗಮಿಸಿದ್ದರು.

ಜಾತ್ರೆಯಲ್ಲಿ ಬಜಿ, ಜಿಲೇಬಿ ಮಾರಾಟ ಜೋರಾಗಿತ್ತು. ಉಳಿದಂತೆ ಹಸಿರು ಬಳೆ ಅಂಗಡಿಗಳು, ಸಿಹಿ ತಿಂಡಿ ಮಾರಾಟದ ಅಂಗಡಿಗಳು ಸೇರಿದಂತೆ ಮಕ್ಕಳ ಆಟಿಕೆ ಸಾಮಗ್ರಿಗಳ ವಹಿವಾಟು ಕಂಡು ಬಂದಿತು.

ರಥೋತ್ಸವ ನಡೆಸಲು ಮುಂಚಿತವಾಗಿ ಹಳಿಸಗರದ ಭಕ್ತರ ಮನೆಯಿಂದ ಕಳಶ ಮತ್ತು ಹಗ್ಗ ಮೆರವಣಿಗೆ ಮೂಲಕ ತರಲಾಯಿತು. ದೇವರ ಮೂಲ ಮೂರ್ತಿ ಗವಿಯೊಳಗಿಂದ ಮೆರವಣಿಗೆಯೊಂದಿಗೆ ತಂದು ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು. ನಿಗದಿತ ಸಮಯದಲ್ಲಿ ದೇವಸ್ಥಾನದ ಧರ್ಮದರ್ಶಿ ದೇವಯ್ಯ ಸ್ವಾಮಿ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

-----

ಫೋಟೊ:

29ವೈಡಿಆರ್4: ಶಹಾಪುರ ನಗರದ ದಿಗ್ಗಿ ಸಂಗಮೇಶ್ವರರ ಮಹಾರಥೋತ್ಸವ ಸಂಭ್ರಮ ಸಡಗರದಿಂದ ಜರುಗಿತು.