400 ವರ್ಷಗಳಿಂದ ಮನೆಯಲ್ಲಿಯೇ ರತಿ-ಕಾಮಣ್ಣರ ಪ್ರತಿಷ್ಠಾಪನೆ

| Published : Mar 26 2024, 01:16 AM IST

400 ವರ್ಷಗಳಿಂದ ಮನೆಯಲ್ಲಿಯೇ ರತಿ-ಕಾಮಣ್ಣರ ಪ್ರತಿಷ್ಠಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಮುತ್ತಜ್ಜರ ಕಾಲದಲ್ಲಿ ಅವರ ಅಜ್ಜಂದಿರು ತಮ್ಮ ಮನೆಯಲ್ಲಿಯೇ ರತಿ-ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದರು. ಅಂದಿನಿಂದ ಈ ವರೆಗೂ ಪ್ರತಿವರ್ಷವೂ ಈ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದೇವೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:ನಗರದ ದಿವಟೆ ಗಲ್ಲಿಯಲ್ಲಿ ಕಾಂಬಳೆ ಮನೆತನದವರು ತಮ್ಮ ಮನೆಯಲ್ಲಿ ಜೋಡಿ ಕಾಮ-ರತಿಯ ಮೂರ್ತಿ ಪ್ರತಿಷ್ಠಾಪಿಸುತ್ತ ಬಂದಿದ್ದಾರೆ. ಇದರಲ್ಲಿ ಕಳೆದ 400 ವರ್ಷಗಳ ಮೂರ್ತಿಯೊಂದಿದ್ದರೆ, ಮತ್ತೊಂದು 90 ವರ್ಷಗಳ ಹಳೆಯ ಮೂರ್ತಿ ಎಂಬುದು ವಿಶೇಷ.ನಮ್ಮ ಮುತ್ತಜ್ಜರ ಕಾಲದಲ್ಲಿ ಅವರ ಅಜ್ಜಂದಿರು ತಮ್ಮ ಮನೆಯಲ್ಲಿಯೇ ರತಿ-ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದರು. ಅಂದಿನಿಂದ ಈ ವರೆಗೂ ಪ್ರತಿವರ್ಷವೂ ಈ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಮನೆಯ ಹಿರಿಯ ಮಗ ನಾರಾಯಣ ಕಾಂಬಳೆ.ಜೋಡಿ ಕಾಮ-ರತಿ ಪ್ರತಿಷ್ಠಾಪನೆ:ಕಳೆದ 90 ವರ್ಷಗಳಿಂದ ಇವರ ಮನೆಯಲ್ಲಿಯೇ 400 ವರ್ಷಗಳ ಹಿಂದಿನದು ಹಾಗೂ 90 ವರ್ಷಗಳ ಹಿಂದಿನಿಂದ ಮತ್ತೊಂದು ರತಿ-ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಈ ಮೂರ್ತಿಯನ್ನು ಇದೇ ಓಣಿಯಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗುತ್ತಿತ್ತು. ನಂತರ ಅವರು ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಓಣಿಯ ಹಿರಿಯರೆಲ್ಲ ಸೇರಿ ನಮ್ಮ ಮನೆತನದವರಿಗೆ ಈ ರತಿ-ಕಾಮಣ್ಣನ ಮೂರ್ತಿ ನೀಡಿದ್ದು, ಕಳೆದ 90 ವರ್ಷಗಳಿಂದ ಈ ಮೂರ್ತಿಗಳನ್ನೂ ನಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿಕೊಂಡು ಬರುತ್ತಿದ್ದೇವೆ ಎಂದು ಮನೆಯ ಯಜಮಾನಿ ನಾಗಮ್ಮ ಕಾಂಬಳೆ (81) ಕನ್ನಡಪ್ರಭಕ್ಕೆ ತಿಳಿಸಿದರು.

ಹೋಳಿ ಹುಣ್ಣಿಮೆ ದಿನದಂದು ಕಾಂಬಳೆ ಅವರ ಮನೆಯಲ್ಲಿಯೇ ಪ್ರತಿಷ್ಠಾಪಿಸಲಾಗುವ ಈ ಮೂರ್ತಿಗಳಿಗೆ ಬೆಳಗ್ಗೆಯಿಂದ ಸಂಜೆಯ ವರೆಗೂ ವಿಶೇಷ ಪೂಜೆ, ನೈವೇದ್ಯ, ಹರಕೆ ಸಲ್ಲಿಸಲಾಗುವುದು. ಸಂಜೆ ಮನೆಯ ಮುಂಭಾಗದಲ್ಲಿ ಸಿದ್ಧಪಡಿಸಿರುವ ಟೆಂಟ್‌ನಲ್ಲಿ ಪ್ರತಿಷ್ಠಾಪಿಸಿ 5ನೇ ದಿನದಂದು ಅದ್ಧೂರಿ ಮೆರವಣಿಗೆ ನಡೆಸಿ ಹೋಳಿ ಆಚರಿಸಲಾಗುತ್ತದೆ.

ಅದ್ಧೂರಿ ಮೆರವಣಿಗೆ:ಒಂದು ದಿನ ಮನೆಯಲ್ಲಿ ಹಾಗೂ 4 ದಿನ ಟೆಂಟ್‌ನಲ್ಲಿ ಪ್ರತಿಷ್ಠಾಪಿಸುವ ರತಿ-ಕಾಮಣ್ಣನನ್ನು 5ನೇ ದಿನ ಅದ್ಧೂರಿ ಮೆರವಣಿಗೆ ಮಾಡಲಾಗುತ್ತದೆ. ಕಾಂಬಳೆ ಅ‍ವರ ಮನೆಯಿಂದಲೇ ಆರಂಭವಾಗುವ ಮೆರವಣಿಗೆಯು ಓಣಿಯಲ್ಲಿರುವ ದರ್ಗಾದ ಮುಂಭಾಗದಲ್ಲಿ ಹಾದು ಶ್ರೀರಾಮ ಮಂದಿರ, ಡಾಕಪ್ಪ ವೃತ್ತ, ಮುಲ್ಲಾ ಓಣಿ, ಕೌಲಪೇಟ, ಕಂಬಾರ ಗಲ್ಲಿ, ಪಿ.ಬಿ. ರಸ್ತೆಯ ವರೆಗೆ ಹೋಗಿ ಮರಳಿ ದಿವಟೆ ಗಲ್ಲಿಗೆ ಬಂದ ಬಳಿಕ ಹೋಳಿ ಹಬ್ಬ ಆಚರಿಸಲಾಗುತ್ತದೆ.

ಹರಕೆ ಈಡೇರಿಕೆ:ಈ ರತಿ-ಕಾಮಣ್ಣರು ಹರಕೆ ಈಡೇರಿಸುತ್ತವೆ ಎಂಬ ನಂಬಿಕೆ ನೂರಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಮಹಿಳೆಯರು, ಪುರುಷರು ಬಂದು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ತಮ್ಮ ಹರಕೆ ಈಡೇರಿದರೆ ಸೀರೆ, ಬಟ್ಟೆ, ಬಾಸಿಂಗ್, ತೊಟ್ಟಿಲು, ಬೆಳ್ಳಿ, ಬಂಗಾರದ ಆಭರಣ ಸೇರಿದಂತೆ ವಿವಿಧ ವಸ್ತುಗಳನ್ನು ನೀಡಿ ಹರಕೆ ತೀರಿಸುತ್ತಾರೆ.400 ವರ್ಷಗಳಿಂದ ಮನೆಯಲ್ಲಿ ಕಾಮ-ರತಿ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬಂದಿದ್ದೇವೆ. ಸಾವಿರಾರು ಜನರು ಬಂದು ದರ್ಶನ ಪಡೆದು ಹರಕೆ ಕಟ್ಟಿಕೊಂಡು ಹೋಗುತ್ತಾರೆ. ಹರಕೆ ಈಡೇರಿದ ಬಳಿಕ ಮರಳಿ ಬಂದು ಹರಕೆ ತೀರಿಸುತ್ತಾರೆ ಎನ್ನುತ್ತಾರೆ ನಾರಾಯಣ ಕಾಂಬಳೆ.