ಹುಬ್ಬಳ್ಳಿ:
ನಗರದಲ್ಲಿ ಹೋಳಿ ಹಬ್ಬದ ಸಂಭ್ರಮದ ತಮಟೆ ಸದ್ದು ಎಲ್ಲೆಡೆ ಮೊಳಗಿದ್ದು ರತಿ-ಕಾಮಣ್ಣರ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ.ನಗರದಲ್ಲಿ ಹೋಳಿ ಹಬ್ಬದ ಸಕಲ ಸಿದ್ಧತೆ ನಡೆಯುತ್ತಿದ್ದು ರತಿ-ಕಾಮಣ್ಣರ ಮೂರ್ತಿಗೆ ಅಂತಿನ ಸ್ಪರ್ಶ ನೀಡಲಾಗುತ್ತಿದೆ. ಮಂಗಳವಾರ ಗ್ರಹಣ ಇರುವ ಹಿನ್ನೆಲೆಯಲ್ಲಿ ರಾತ್ರಿ 8 ಗಂಟೆಯ ನಂತರ ರತಿ-ಕಾಮಣ್ಣರ ಮೂತಿ ಪ್ರತಿಷ್ಠಾಪನೆಗೆ ಸಿದ್ಧತೆ ಮಾಡಿಕೊಡಲಾಗಿದೆ.
ಹಳೇಹುಬ್ಬಳ್ಳಿ ಸೇರಿದಂತೆ ನಗರದಾದ್ಯಂತ ಮಂಗಳವಾರ 300ಕ್ಕೂ ಹೆಚ್ಚು ರತಿ-ಕಾಮಣ್ಣರ ಮೂರ್ತಿಗಳ ಪ್ರತಿಷ್ಠಾಪನೆಯಾಗಲಿವೆ. ವಿಶೇಷವಾಗಿ ಮೇದಾರ ಓಣಿ, ದಾಜಿಬಾನ್‌ಪೇಟೆ ಸರ್ಕಲ್, ಚನ್ನಪೇಟೆ, ಕಮರಿಪೇಟೆ, ಬಾಕಳೆ ಗಲ್ಲಿ, ಅರಳಿಕಟ್ಟಿ ಓಣಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರತಿ-ಕಾಮಣ್ಣರ ಮೂರ್ತಿ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಲಾಗಿದೆ.ಇಲ್ಲಿಯ ಹೊಸೂರ ಹಾಗೂ ವಿದ್ಯಾನಗರ ಭಾಗದಲ್ಲಿಯೂ ಮಂಗಳವಾರ ರತಿ-ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆ ಆಗಲಿವೆ. ಈ ಭಾಗದಲ್ಲಿ ಮರುದಿನವೇ ಕಾಮದಹನ ಕಾರ್ಯಕ್ರಮ ನಡೆಯಲಿದ್ದು, ನಂತರ ಇಲ್ಲಿ ಬಣ್ಣದೋಕುಳಿ ಆಡಲಿದ್ದಾರೆ. ಉಳಿದಂತೆ ಮಂಗಳವಾರ ಪ್ರತಿಷ್ಠಾಪನೆಗೊಳ್ಳುವ ರತಿ-ಕಾಮಣ್ಣ ಮೂರ್ತಿಗಳ ದಹನ ಕಾರ್ಯಕ್ರಮ ಮಾ. 7ರಂದು ನಡೆಯಲಿದ್ದು, ಕಾಮದಹನ ನಂತರ ಇಡೀ ಹುಬ್ಬಳ್ಳಿ ರಂಗಪಂಚಮಿ ಬಣ್ಣದೋಕುಳಿಯಲ್ಲಿ ಮಿಂದೇಳಲಿದೆ. ಮಂಗಳವಾರ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಮೂರ್ತಿ ಸ್ಥಾಪನೆಯನ್ನು ಗ್ರಹಣ ಮುಕ್ತಾಯದ ನಂತರ ನೆರವೇರಿಸುವ ನಿರ್ಣಯಿಸಲಾಗಿದೆ ಎಂದು ಭಾಸ್ಕರ್ ಜಿತೂರಿ ತಿಳಿಸಿದ್ದಾರೆ.
ಹಲಗೆ ಸದ್ದು:
ಪ್ರತಿ ವರ್ಷವು ನಗರದಲ್ಲಿ ಅತ್ಯಂತ ವಿಜಂಭೃಣೆಯಿಂದ ರಂಗ ಪಂಚಮಿ ಆಚರಣೆಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಫೈಬರ್ ಹಲಿಗೆ, ಚರ್ಮವಾದ್ಯಗಳ ಮಾರಾಟ ಜೋರಾಗಿದೆ. ಇದರೊಟ್ಟಿಗೆ ತರಹೇವಾರಿ ಬಣ್ಣ, ಪಿಚಕಾರಿ, ಮಾಸ್ಕ್ ಸೇರಿ ಹೋಳಿ ಹಬ್ಬಕ್ಕೆ ಸಂಬಂಧಿತ ಸಾಮಗ್ರಿಗಳ ಮಾರಾಟವೂ ಜೋರಾಗಿದೆ.