ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿಟ್ಟಿದ್ದು, ದಂಧೆ ಮಾಡುತ್ತಿದ್ದುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪತ್ತೆ ಮಾಡಿ, ಬಯಲಿಗೆಳೆದಿದ್ದರೂ ಕೆಲ ರಾಜಕೀಯ ಪಕ್ಷಗಳ ಮುಖಂಡರು ತಾವೇ ಅದನ್ನು ಪತ್ತೆ ಮಾಡಿದಂತೆ ಬಿಂಬಿಸಿಕೊಂಡಿದ್ದು ಸರಿಯಲ್ಲ ಎಂದು ಸಮಿತಿ ಜಿಲ್ಲಾ ಸಂಚಾಲಕ ರಾಘವೇಂದ್ರ ಡಿ.ಕಡೇಮನಿ ಬಿಜೆಪಿ ಹಿರಿಯ ಮುಖಂಡ ಯಶವಂತರಾವ್ ಜಾಧವ್ ಹೇಳಿಕೆಗೆ ಆಕ್ಷೇಪಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರಯ ಶಂಕರ ವಿಹಾರ್ ಬಡಾವಣೆಯ ಗೋದಾಮೊಂದರಲ್ಲಿ ಜ.19ರಂದು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿ ದಂಧೆಯನ್ನು ನಾವು ಬಯಲಿಗೆಳೆದು, ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು. ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುವವರೂ ಇದ್ದು, ಪ್ರಕರಣ ದಾಖಲಾಗುವಂತೆ ನೋಡಿಕೊಂಡೆವು ಎಂದರು.

ನಮ್ಮ ಹೋರಾಟವನ್ನು ಕೆಲ ಸ್ವಯಂ ಘೋಷಿತ ಹೋರಾಟಗಾರರು ಹಾಗೂ ರಾಷ್ಟ್ರೀಯ ಪಕ್ಷದ ಜಿಲ್ಲಾ ಮುಖಂಡರೊಬ್ಬರು ಪತ್ರಿಕಾಗೋಷ್ಟಿಯಲ್ಲಿ ಸುಳ್ಳು ಕ್ರೆಡಿಟ್ ಪಡೆಯಲು ಅಕ್ರಮ ಅಕ್ಕಿ ದಂಧೆ ಪತ್ತೆ ಮಾಡಿ, ಕೇಸ್ ಮಾಡಿಸಿದ್ದೇವೆನ್ನುವ ಮೂಲಕ ಅದರ ಕ್ರೆಡಿಟ್ ಪಡೆಯಲು ಮುಂದಾಗಿರುವುದು ಸರಿಯಲ್ಲ. ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು, ಸದಸ್ಯರು ಅಂದು ಸ್ಥಳದಲ್ಲೇ ಇದ್ದು ಕೇಸ್ ಆಗುವಂತೆ ನೋಡಿಕೊಂಡಿದ್ದಾರೆ. ಸಂಜೆಯೇ ನಾವು ಕೇಸ್ ಆಗುವಂತೆ ನೋಡಿಕೊಂಡಿದ್ದು, ರಾತ್ರಿ 9.30ಕ್ಕೆ ಯಶವಂತರಾವ್ ಇತರರು ಅಲ್ಲಿಗೆ ಬಂದಿದ್ದರು ಎಂದು ಸ್ಪಷ್ಟಪಡಿಸಿದರು.

ಬಡ, ದಲಿತ ಹಾಗೂ ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣ, ಊಟ, ವಸತಿ, ವಿದ್ಯಾರ್ಥಿ ವೇತನಕ್ಕೆಂದು ಸರ್ಕಾರ ಸಾವಿರಾರು ಕೋಟಿ ರು. ಖರ್ಚು ಮಾಡುತ್ತಿದೆ. ಕೆಲ ಭ್ರಷ್ಟ ಅಧಿಕಾರಿಗಳು ಇಂತಹ ಹಣವನ್ನು ದುರುಪಯೋಗಪಡಿಸಿಕೊಂಡು, ವಿದ್ಯಾರ್ಥಿಗಳಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಅನ್ಯಾಯದ ವಿರುದ್ಧ ಹೋರಾಟ ನಡೆಸಿದ ಡಿಎಸ್ಸೆಸ್ ಕಾರ್ಯಕರ್ತರ ಮೇಲೆಯೇ ವಾಹನ ಹತ್ತಿಸಲು ಯತ್ನಿಸಿದ, ಗಂಭೀರ ಬೆದರಿಕೆ ಹಾಕುವ ಕೆಲಸಗಳೂ ಆಗುತ್ತಿವೆ. ಇದ್ಯಾವುದಕ್ಕೂ ಹೆದರದೇ ಸಂಘಟನೆ ಹೋರಾಟ ನಡೆಸಲಿದೆ ಎಂದು ಹೇಳಿದರು.

ಡಿಎಸ್ಸೆಸ್ ಜಿಲ್ಲಾ ಸಂಘಟನಾ ಸಂಚಾಲಕ ಟಿ.ರವಿಕುಮಾರ, ಎಚ್.ಮಲ್ಲಿಕಾರ್ಜುನ ವಂದಾಲಿ, ಸುರೇಶ, ಸುನೀಲ, ಉಚ್ಚೆಂಗೆಪ್ಪ ಕಲ್ಪನಹಳ್ಳಿ ಇತರರು ಇದ್ದರು.