ಪ್ರಾಥಮಿಕ ಶಿಕ್ಷಣ ಉತ್ತಮಗೊಳ್ಳಲು ಸರ್ಕಾರಿ ಪ್ರಾಥಮಿಕ ಶಾಲೆಗಳ ಜೊತೆಗೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅನುಷ್ಠಾನಗೊಳಿಸಬೇಕು. ಭಾಷಾ ಮಾಧ್ಯಮವಾಗಿ ಕನ್ನಡ ಮತ್ತು ಇಂಗ್ಲಿಷ್ ಎರಡಕ್ಕೂ ಸಮಾನ ಸ್ಥಾನ ನೀಡಬೇಕಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಗತ್ತು ನಿರಂತರ ಬದಲಾವಣೆಯಿಂದ ಕೂಡಿದೆ. ಬದಲಾದ ಕಾಲಕ್ಕೆ ಅಗತ್ಯ ಶಿಕ್ಷಣ ನೀಡಬೇಕಿರುವುದು ನಾಗರಿಕ ಸಮಾಜದ ಕರ್ತವ್ಯ. ಇಂಥ ಬದಲಾವಣೆಗಳ ಬಗ್ಗೆ ಶಿಕ್ಷಕರು ಹಾಗೂ ಶಿಕ್ಷಣಾಸಕ್ತರು ಆಗಿಂದಾಗ್ಗೆ ಒಂದೆಡೆ ಚರ್ಚೆ ನಡೆಸುವುದು ಅಗತ್ಯವಿದೆ ಎಂದು ಕೆಜಿವಿಎಸ್ ರಾಜ್ಯ ಕಾರ್ಯದರ್ಶಿ ಬಸವರಾಜು ಅಭಿಪ್ರಾಯ ಪಟ್ಟರು.

ನಗರದ ಬಿಬಿ ರಸ್ತೆಯ ಜ್ಯೂನಿಯರ್ ಕಾಲೇಜು ಆವರಣದ ನಂದಿ ರಂಗಮಂದಿರದಲ್ಲಿ ಭಾನುವಾರ ನಡೆದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ತಾಲೂಕು ಘಟಕ ಪ್ರಥಮ ಜಿಲ್ಲಾ ಸಮಾವೇಶ- 2026 ಅನ್ನು ಉದ್ಘಾಟಿಸಿ, ಶಿಕ್ಷಣ ತಜ್ಞ ಹಾಗೂ ಗಾಂಧಿವಾದಿ, ಪದ್ಮಭೂಷಣ ಡಾ. ಎಚ್ ನರಸಿಂಹಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಹಾಗೂ ಸಾರ್ವಜನಿಕರ ನೆರವಿನಿಂದ ಸಂಘಟಿಸುತ್ತಾ ಬಂದಿದೆ. ಶಿಕ್ಷಣದ ಸಾರ್ವತ್ರೀಕರಣಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರಗಳ ಕರ್ತವ್ಯವಾದರೆ ಮಗುವನ್ನು ಶಾಲೆಯತ್ತ ಆಕರ್ಷಿಸುವ ಹಾಗೂ ಸಮುದಾಯವನ್ನು ಶಾಲೆಯ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸುವ ಪ್ರಯತ್ನದಲ್ಲಿ ಸಂಘ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬಹುದು ಎಂಬುದು ಕೆಜೆವಿಎಸ್ ನಂಬಿಕೆ. ಈ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಕೆಜೆವಿಎಸ್ ಸಂಘಟಿಸಿದೆ ಎಂದು ತಿಳಿಸಿದರು.

ಕೆಜೆವಿಎಸ್‌ ಗೌರವಾಧ್ಯಕ್ಷ ಡಾ.ಕೋಡಿರಂಗಪ್ಪ ಮಾತನಾಡಿ, ಮೂಢನಂಬಿಕೆಗಳಿಂದ ಹಿಂದುಳಿದಿರುವ ಸಮಾಜವನ್ನು ಮುನ್ನಡೆಸಲು ಜನರಲ್ಲಿ ವೈಚಾರಿಕ ಮನೋಭಾವವನ್ನು ಬೆಳೆಸಬೇಕಿದೆ. ವೈಚಾರಿಕತೆಯಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ವೈಜ್ಞಾನಿಕವಾಗಿ ಸೂಕ್ತ ಜ್ಞಾನವನ್ನು ಜನರಲ್ಲಿ ಮೂಡಿಸಿದರೆ ವೈಚಾರಿಕತೆ ತನ್ನಷ್ಟಕ್ಕೆ ತಾನೇ ಮೂಡುತ್ತದೆ. ಈ ನಿಟ್ಟಿನಲ್ಲಿ ಶ್ರಮವಹಿಸಿ ದುಡಿಯಬೇಕಿದೆ. ಮುಂದಿನ ದಿನಗಳಲ್ಲಿ ವಿಜ್ಞಾನ ಸಮಿತಿ ತನ್ನ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.

ಪ್ರಾಥಮಿಕ ಶಿಕ್ಷಣ ಉತ್ತಮಗೊಳ್ಳಲು ಸರ್ಕಾರಿ ಪ್ರಾಥಮಿಕ ಶಾಲೆಗಳ ಜೊತೆಗೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅನುಷ್ಠಾನಗೊಳಿಸಬೇಕು. ಭಾಷಾ ಮಾಧ್ಯಮವಾಗಿ ಕನ್ನಡ ಮತ್ತು ಇಂಗ್ಲಿಷ್ ಎರಡಕ್ಕೂ ಸಮಾನ ಸ್ಥಾನ ನೀಡಬೇಕಿದೆ. ಖಾಸಗಿ ಶಾಲೆಗಳ ಜೊತೆ ಸರ್ಕಾರಿ ಶಾಲೆಗಳು ಸಮನಾಗಿ ನಿಲ್ಲಬೇಕಾದರೆ ಏಕರೂಪ ಶಿಕ್ಷಣ ಪದ್ಧತಿ ಜಾರಿಗೆ ತರಬೇಕಿದೆ ಎಂದು ತಿಳಿಸಿದರು.

ಕೆಜೆವಿಎಸ್ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ, ನಿವೃತ್ತ ಶಿಕ್ಷಕ ಕೆ.ಎಂ .ರೆಡ್ಡಪ್ಪ ಮಾತನಾಡಿ, ಮಕ್ಕಳಲ್ಲಿ ಆಲೋಚನೆ, ಜ್ಞಾನ, ಧೈರ್ಯ, ಸಾಮಾಜಿಕ ಪ್ರಜ್ಞೆ, ಸಮಾನತೆ, ವೈಜ್ಞಾನಿಕ ಮನೋಭಾವ ಮೂಡಬೇಕಾದರೆ ವೈಜ್ಞಾನಿಕ ವಿಚಾರಗಳತ್ತ ಗಮನಹರಿಸಬೇಕು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮೂಲಕ ಆನ್ಲೈನ್ ರಸಪ್ರಶ್ನೆ ಕಾರ್ಯಕ್ರಮ ನಡೆಯುತ್ತಿದ್ದು, ಈ ಸ್ಪರ್ಧೆಗಳಲ್ಲಿ ಅನೇಕ ಮಕ್ಕಳು ಭಾಗವಹಿಸಿ ಅತ್ಯಾಕರ್ಷಕ ಬಹುಮಾನ ಪಡೆಯುತ್ತಿದ್ದಾರೆ. ಜೊತೆಗೆ ವೈಜ್ಞಾನಿಕ ಜ್ಞಾನವು ದೊರಕುತ್ತಿದೆ. ಹಾಗಾಗಿ ಹೆಚ್ಚು ಮಕ್ಕಳು ನೋಂದಣಿಯಾಗಬೇಕು. ಕೆಜೆವಿಎಸ್ ನ ವಿಚಾರ, ಗುರಿ, ಉದ್ದೇಶಗಳು, ಕಾರ್ಯಕ್ರಮಗಳು ಮನೆಮನೆಗೂ ತಲುಪಬೇಕು. ಈ ನಿಟ್ಟಿನಲ್ಲಿ ತಾಲೂಕು ಹಾಗೂ ಜಿಲ್ಲಾ ಘಟಕ ಹೆಚ್ಚು ಶ್ರಮಿಸುತ್ತಿವೆ. ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹದಿಂದ ಕೆಜೆವಿಎಸ್ ಅನ್ನು ಇನ್ನಷ್ಟು ಬಲಪಡಿಸುತ್ತೇವೆ . ಈ ಮೂಲಕ ಚಿಕ್ಕಬಳ್ಳಾಪುರದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೆಜೆವಿಎಸ್‌ ರಾಜ್ಯ ಸಹ ಕಾರ್ಯದರ್ಶಿ ಜಗನ್ನಾಥ್, ತಾಲೂಕು ಗೌರವಾಧ್ಯಕ್ಷೆ ಎ.ಸರಸಮ್ಮ, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ಗೋಪಿನಾಥ್, ಜಿಲ್ಲಾ ಸಲಹಾ ಸಮಿತಿಯ ಸದಸ್ಯ ಬಿ.ಎನ್.ಮುನಿಕೃಷ್ಣಪ್ಪ, ತಾಲೂಕು ಅಧ್ಯಕ್ಷೆ ಸುಶೀಲಾ ಮಂಜುನಾಥ್, ಮಾಧ್ಯಮ ಕಾರ್ಯದರ್ಶಿ ಕೆ.ಎಸ್.ನಾರಾಯಣಸ್ವಾಮಿ ,ಸಂಘಟನಾ ಕಾರ್ಯದರ್ಶಿ ವೆಂಕಟರಮಣ ನಾಯಕ್, ಉಪಾಧ್ಯಕ್ಷೆ ಜಿ.ಅಣ್ಣಮ್ಮ, ಸಲಹಾ ಸಮಿತಿಯ ಸದಸ್ಯರಾದ ಯಲುವಹಳ್ಳಿ ಸೊಣ್ಣೇಗೌಡ ,ಎಂ. ಚೆನ್ನಮಲ್ಲಿಕಾರ್ಜುನಯ್ಯ ,ಸೌಭಾಗ್ಯ, ಮಮತಾ, ಎ.ಆರ್.ಶಶಿಕಲಾ,ಭೈರಪ್ಪ, ಮತ್ತಿತರರು ಇದ್ದರು.