ಜನವರಿ 14ರಿಂದ ಸೊರಬದಲ್ಲಿ ಹೊಳೆಲಿಂಗೇಶ್ವರ ಸ್ವಾಮಿಯ ರಥೋತ್ಸವ

| Published : Jan 14 2025, 01:01 AM IST

ಸಾರಾಂಶ

ಸೊರಬದ ವರದಾ ಮತ್ತು ದಂಡಾವತಿ ನದಿಗಳ ಸಂಗಮವೂ ಒಂದಾಗಿದ್ದು, ನದಿಗಳ ಸಂಗಮ ಕ್ಷೇತ್ರದಲ್ಲಿ ನೆಲೆಸಿರುವ ಗ್ರಾಮದ ಅದಿ ದೇವತೆ ಶ್ರೀ ಹೊಳೆಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಜ. ೧೪ ರಿಂದ ೧೬ ರವರೆಗೆ ಜರುಗಲಿದೆ.

೧೬ ರವರೆಗೆ ನಡೆಯುವ ಜಾತ್ರೆ ಉತ್ಸವ । ವರದಾ, ದಂಡಾವತಿ ನದಿಗಳ ಸಂಗಮ ಕ್ಷೇತ್ರ

ಕನ್ನಡಪ್ರಭ ವಾರ್ತೆ ಸೊರಬ

ದೇಶದ ಕೆಲವೇ ಕೆಲವು ಪುಣ್ಯ ಸಂಗಮ ಸ್ಥಳಗಳಲ್ಲಿ ತಾಲೂಕಿನ ಬಂಕಸಾಣ ಗ್ರಾಮದ ವರದಾ ಮತ್ತು ದಂಡಾವತಿ ನದಿಗಳ ಸಂಗಮವೂ ಒಂದಾಗಿದ್ದು, ನದಿಗಳ ಸಂಗಮ ಕ್ಷೇತ್ರದಲ್ಲಿ ನೆಲೆಸಿರುವ ಗ್ರಾಮದ ಅದಿ ದೇವತೆ ಶ್ರೀ ಹೊಳೆಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಜ. ೧೪ ರಿಂದ ೧೬ ರವರೆಗೆ ಜರುಗಲಿದೆ.

ತಾಲೂಕಿನ ಮಳಲಗದ್ದೆ ಗ್ರಾಮದ ಬಳಿ ಹುಟ್ಟುವ ದಂಡಾವತಿ ನದಿ ಹಾಗೂ ಸಾಗರ ತಾಲೂಕಿನಿಂದ ವಿಸ್ತಾರಗೊಂಡು ತಾಲೂಕಿಗೆ ಹರಿದು ಬರುವ ವರದಾ ನದಿಗಳು ಬಂಕಸಾಣ ಗ್ರಾಮದಲ್ಲಿ ಸಂಗಮವಾಗುತ್ತವೆ. ನಂತರ ವರದಾ ನದಿಯಾಗಿ ಬಯಲು ಸೀಮೆಯ ತಾಲೂಕುಗಳಿಗೆ ನೀರಿನ ಬರವನ್ನು ನೀಗಿಸುತ್ತದೆ ಇಂಥ ಪವಿತ್ರ ಸ್ಥಳದಲ್ಲಿ ನೆಲೆಸಿರುವ ಶಿವನಿಗೆ ಹೊಳೆಲಿಂಗೇಶ್ವರ ಎಂದು ಹೇಳಲಾಗುತ್ತದೆ.

ಮಕರ ಸಂಕ್ರಾತಿ ಸಂದರ್ಭದಲ್ಲಿ ಶ್ರೀಕ್ಷೇತ್ರದ ಸಂಗಮ ಸ್ಥಾನದಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ದೇಶಾದ್ಯಂತ ಪೂರ್ವ ಅಥವಾ ಪಶ್ಚಿಮಾಭಿಮುಖವಾಗಿ ನದಿಗಳು ಹರಿಯುತ್ತಿದ್ದು, ಬಂಕಸಾಣದಲ್ಲಿ ವರದಾ-ದಂಡಾವತಿ ಸಂಗಮದ ನಂತರ ಉತ್ತರಾಭಿಮುಖವಾಗಿ ಹರಿಯುತ್ತದೆ. ಇದರಿಂದಾಗಿ ಉತ್ತರ ಪುಣ್ಯ ಕಾಲದಲ್ಲಿ ಮಕರ ಸಂಕ್ರಮಣದಂದು ಸ್ನಾನ ಮಾಡಿ ಪೂಜೆ ಸಲ್ಲಿಸಿದರೆ ಪುಣ್ಯ ಸಿಗುತ್ತದೆ ಎಂಬುದು ಜನರ ನಂಬಿಕೆಯಾಗಿದೆ.

ಶ್ರೀ ಹೊಳೆಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಜ.೧೪ ರಿಂದ ೧೬ರ ವರೆಗೆ ಜರುಗಲಿದ್ದು, ಜ.೧೪ರಂದು ಮಂಗಳವಾರ ಬೆಳಿಗ್ಗೆ ವರದಾ ನವ ಶಕ್ತಿ ನಾಗಚೌಡೇಶ್ವರಿ ದೇವಿಗೆ ಉಡಿತುಂಬುವುದು, ಸಂಜೆ ೪ಕ್ಕೆ ಉತ್ಸವ ಮೂರ್ತಿ ಸ್ಥಾಪನೆ ನಡೆಯಲಿದ್ದು, ಜ.೧೫ರಂದು ಮಕರ ಸಂಕ್ರಮಣದಂದು ಉತ್ತರಾಯಣ ಪುಣ್ಯ ಕಾಲ ಮತ್ತು ಪುಣ್ಯಸ್ನಾನ, ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ೧೬ರಂದು ಬೆಳಿಗ್ಗೆ ೧೧ ಗಂಟೆಗೆ ಹೊಳೆಲಿಂಗೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದೆ.

ಮೂಗೂರು ಬಳಿ ಚೆಕ್ ಡ್ಯಾಂ ನಿರ್ಮಿಸಿರುವುದರಿಂದ ಕಳೆದ ಮೂರು ವರ್ಷಗಳಿಂದ ಸಂಗಮ ಸ್ಥಳದಲ್ಲಿನ ಶಿವಲಿಂಗದ ದರ್ಶನ ಭಾಗ್ಯ ಭಕ್ತರಿಗೆ ಲಭಿಸುತ್ತಿಲ್ಲ. ನದಿಯಲ್ಲಿ ಸುಮಾರು ೩೦ ಅಡಿ ನೀರು ನಿಂತಿದೆ. ಭಕ್ತರಿಗೆ ವರ್ಷ ಪೂರ್ತಿ ಶಿವಲಿಂಗದ ದರ್ಶನ ದೊರೆಯುವಂತೆ ನದಿಯಲ್ಲಿ ರಿಂಗ್ ರೂಂ, ಜಾಕ್‌ವೆಲ್ ಸೇತುವೆ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು.

ರಾಜು ಗೌಡ, ಅಧ್ಯಕ್ಷ, ಹೊಳೆಲಿಂಗೇಶ್ವರ ದೇವಸ್ಥಾನ ಸಮಿತಿ.

ಸಂಗಮ ಕ್ಷೇತ್ರದ ಉದ್ಭವ ಹೊಳೆಲಿಂಗೇಶ್ವರ ದೇವರ ದರ್ಶನ ಭಕ್ತರಿಗೆ ವರ್ಷ ಪೂರ್ತಿ ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ನದಿಯಲ್ಲಿ ರಿಂಗ್ ರೂಂ ಮತ್ತು ಜಾಕ್‌ವೆಲ್ ಸೇತುವೆ ನಿರ್ಮಾಣ ಮಾಡಿದರೆ ಪ್ರವಾಸಿ ಸ್ಥಳವಾಗಿಯೂ ಮತ್ತು ಧಾರ್ಮಿಕ ಕ್ಷೇತ್ರವಾಗಿಯೂ ಬಂಕಸಾಣ ಮತ್ತಷ್ಟು ಪ್ರಸಿದ್ಧವಾಗಲಿದೆ.

ನಾಗರಾಜ ಗೌಡ, ಧರ್ಮದರ್ಶಿ, ಹೊಳೆಲಿಂಗೇಶ್ವರ ದೇವಸ್ಥಾನ ಸಮಿತಿ, ಬಂಕಸಾಣ.