ಸಾರಾಂಶ
ರಟ್ಟೀಹಳ್ಳಿ: ಸರಳ ಸಾತ್ವಿಕತೆಗೆ ಹೆಸರಾದ ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಆದರ್ಶ, ತತ್ವ, ಸಿದ್ಧಾಂತಗಳನ್ನು ಅನುಸರಿಸಿ ಬದುಕನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ ಎಂದು ಬಾಳೆಹೊನ್ನೂರು ಪೀಠದ ಶ್ರೀ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕಬ್ಬಿಣಕಂತಿ ಮಠದ ಆವರಣದಲ್ಲಿ ಆರಂಭವಾದ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಷಷ್ಟ್ಯಬ್ದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಲಿ. ಜಯಸಿದ್ದಲಿಂಗ ಶ್ರೀಗಳ ಕೃಪಾಶೀರ್ವಾದದಿಂದ ಶ್ರೀ ಮಠದಲ್ಲಿ ನಿರಂತರ ಅನ್ನ ದಾಸೋಹ, ಶಿಕ್ಷಣ, ಇನ್ನೂ ಅನೇಕ ಸಮಾಜಮುಖಿ ಮಹತ್ತಕಾರ್ಯದಿಂದ ಮಠ ನಿರಂತರ ಭಕ್ತರ ಒಡನಾಡಿಯಾಗಿ ಬೆಳೆದಿರುವುದು ನಿಮ್ಮೆಲ್ಲರ ಭಾಗ್ಯ. ಸೌಹಾರ್ದಯುತ ಸಹಬಾಳ್ವೆ ಜೀವನದ ಪರಮಗುರಿಯಾಗಿರಬೇಕು. ಯೋಗ್ಯ ಸಂಸ್ಕಾರ ದೊರೆತರೆ ಬೆಲೆಯುಳ್ಳ ಬದುಕು ಉತ್ತಮ ಸಾರ್ಥಕತೆಗೊಳ್ಳುತ್ತದೆ ಎಂದು ಆಶೀರ್ವಚನ ನೀಡಿದರು.ಶಾಸಕ ಯು.ಬಿ. ಬಣಕಾರ ಮಾತನಾಡಿ, ಕಬ್ಬಿಣಕಂತಿ ಮಠದ ಶ್ರೀಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಅನೇಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಪ್ರತಿಕ್ಷಣವೂ ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮಡಿಪಾಗಿಟ್ಟಿದ್ದಾರೆ. ಅಂತಹ ಶ್ರೀಗಳ 60 ವರ್ಷ ಪೂರೈಸಿ ಅವರ ಷಷ್ಟ್ಯಬ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಮಗೆ ಹರ್ಷವಾಗುತ್ತಿದೆ ಎಂದರು.
ಸಮಾಜದಲ್ಲಿ ಶಾಂತಿ ಮತ್ತು ಮೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ಮಠಗಳು ಮತ್ತು ಮಂದಿರಗಳು. ಪ್ರಸ್ತುತ ಸ್ಥಿತಿಗತಿಗಳನ್ನು ನೋಡಿದರೆ ಮಠ, ಮಂದಿರಗಳು ಇಲ್ಲದಿದ್ದರೆ ಸಾಮಾಜಿಕ ಜೀವನ ಉಹಿಸಿಕೊಳ್ಳಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಕಬ್ಬಿಣಕಂತಿ ಮಠ ಅತ್ಯಂತ ಭಾವೈಕ್ಯದಿಂದ ಸರ್ವರನ್ನೂ ಒಗ್ಗೂಡಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದರು.ಮುಂಜಾನೆ 9 ಗಂಟೆಗೆ ಮಹಾಲಕ್ಷ್ಮೀ ದೇವಸ್ಥಾನದಿಂದ 108 ಕುಂಭ ಹೊತ್ತ ಮಹಿಳೆಯರಿಂದ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳ ಭವ್ಯ ಮೆರವಣಿಗೆ ವಿವಿಧ ವಾದ್ಯಮೇಳಗಳೊಂದಿಗೆ ಸಾರೋಟಿನ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಶ್ರೀ ಷ.ಬ್ರ. ರಾಚೋಟಿ ಶಿವಾಚಾರ್ಯ ಸ್ವಾಮೀಜಿ ಬಿಳ್ಕಿ ಹಿರೇಮಠ, ಶ್ರೀ ಷ.ಬ್ರ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಶಿಲಾಮಠ ತಾವರಿಕೆರೆ ಸ್ವಾಮೀಜಿಗಳು ಆಶೀರ್ವಚನ ನೀಡಿದರು.ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಡಿ.ಎಂ. ಸಾಲಿ, ಮಂಜುನಾಥ ತಂಬಾಕದ, ಎನ್.ಜಿ. ನಾಗನಗೌಡ್ರ, ಹೇಮಣ್ಣ ಮುದಿರೆಡ್ಡೇರ, ಪಿ.ಡಿ. ಬಸನಗೌಡ್ರ, ಡಾ. ನಿಂಗಪ್ಪ ಚಳಗೇರಿ, ಹನುಮಂತಗೌಡ ಭರಮಣ್ಣನವರ, ಎನ್.ಸಿ. ಕಠಾರಿ, ಎನ್.ಎಂ. ಈಟೇರ, ಪಾಲಾಕ್ಷಗೌಡ ಪಾಟೀಲ್, ರೂಪಾ ಅಂಬ್ಲೇರ, ಸಂದೀಪ ಪಾಟೀಲ್, ಮಲ್ಲೇಶಪ್ಪ ಹುಲ್ಮನಿ, ಪರಮೇಶಪ್ಪ ಹಲಗೇರಿ, ವೀರನಗೌಡ ಪ್ಯಾಟಿಗೌಡ್ರ, ಲಿಂಗಯ್ಯ ಹಿರೇಮಠ, ಲೀಲಾವತಿ ಭೋಜರಾಜ ಪಾಟೀಲ್ ಹಾಗೂ ಮುಂತಾದವರು ಇದ್ದರು.