ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ದಕ್ಷಿಣ ಭಾರತ ಜೈನಸಭಾದ ಅಧ್ಯಕ್ಷ, ಖ್ಯಾತ ಉದ್ಯಮಿ, ಸಹಕಾರಿ ಧುರೀಣ ರಾವಸಾಹೇಬ ಪಾಟೀಲ (83) ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ ಮೀನಾಕ್ಷಿ, ಪುತ್ರ ಅಭಿನಂದನ್, ಯುವ ಮುಖಂಡ ಉತ್ತಮ ಪಾಟೀಲ ಮತ್ತು ಪುತ್ರಿ ದೀಪಾಲಿ, ಸಹೋದರ, ಅಳಿಯ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವಿದೆ.ಅರಿಹಂತ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ರಾವಸಾಹೇಬ್ ಅವರು ಜೈನ ಸಮಾಜದ ಮುಖಂಡರಾಗಿದ್ದರು. ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೆಳಗಾವಿ ಜಿಲ್ಲೆಯನಿಪ್ಪಾಣಿ ತಾಲೂಕಿನ ಸ್ವಗ್ರಾಮ ಬೋರಗಾಂವದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯಚನ್ನರಾಜ ಹಟ್ಟಿಹೊಳಿ ಸಂತಾಪ ವ್ಯಕ್ತಪಡಿಸಿದ್ದಾರೆ. ಜೈನ ಸಮುದಾಯದ ಪ್ರತಿಷ್ಠೆಯೆಂದು ಪರಿಗಣಿಸಲಾದ ದಕ್ಷಿಣ ಭಾರತ ಜೈನ ಸಭಾದ ಅಧ್ಯಕ್ಷರಾಗಿ ರಾವಸಾಹೇಬ ಪಾಟೀಲ ಕಳೆದ 4 ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಸಂಸ್ಕೃತಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿದ್ದ ಅವರು ಸಮಾಜದ ಪ್ರತಿ ಮಗು ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿ ವೇತನ ಯೋಜನೆಯನ್ನು ಕೈಗೊಂಡರು. ಇಂದು ಈ ಸ್ಕಾಲರ್‌ಶಿಪ್ ಯೋಜನೆಯಲ್ಲಿ ಕೋಟ್ಯಂತರ ರುಪಾಯಿ ಹಣ ಲಭ್ಯವಿದ್ದು, ಈ ಮೂಲಕ ಅನೇಕ ಜನರು ಶಿಕ್ಷಣ ಮತ್ತು ಸಂಸ್ಕೃತಿ ಪಡೆದುಕೊಂಡಿದ್ದಾರೆ ಮತ್ತು ಬಡವರು ಆರೋಗ್ಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.ಫೋಟೋ-ರಾವಸಾಹೇಬ.------------ಕೋಟ್...
ರಾವಸಾಹೇಬ ಪಾಟೀಲರವರು ದೈವಾಧೀನರಾದ ವಿಷಯ ತಿಳಿದು ನಮಗೆಲ್ಲರಿಗೂ ಅತೀವ ದುಃಖ, ಆಘಾತ ಹಾಗೂ ಭರಿಸಲಾಗದಷ್ಟು ನೋವಾಗಿದೆ. ಸುಸಂಸ್ಕೃತರೂ ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದ ರಾವಸಾಹೇಬರವರು ದಕ್ಷಿಣ ಭಾರತ ಜೈನ ಸಭಾದ ನಿರಂತರ ನಾಲ್ಕು ಅವಧಿಗೆ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವುದು ಅವಿಸ್ಮರಣೀಯ. ಸರ್ವ ವರ್ಗದ ಜನ,ಮನ ಗೆದ್ದಿದ್ದ, ಮಠ-ಮಾನ್ಯಗಳ ಗೌರವಕ್ಕೆ ಪಾತ್ರರಾಗಿದ್ದ ಅಪರೂಪದ ಆದರ್ಶ ವ್ಯಕ್ತಿಯಾಗಿದ್ದು ಸಹಸ್ರಾರು ಜನರಿಗೆ ಉದ್ಯೋಗ ಕಲ್ಪಿಸಿ ಕೊಟ್ಟಿದ್ದರು. ಅಂತಹ ಸಂಭಾವಿತ, ಧೀಮಂತ ನಾಯಕನನ್ನು ಕಳೆದುಕೊಂಡ ನಮ್ಮ ಜೈನ ಸಮಾಜ ಇಂದು ಅನಾಥವಾಗಿದೆ. ಆ ಭಗವಂತನು ಅಗಲಿದ ಭವ್ಯಾತ್ಮನಿಗೆ ಸದ್ಗತಿ ಹಾಗೂ ಚಿರಶಾಂತಿ ಕರುಣಿಸಲೆಂದು ಪ್ರಾರ್ಥಿಸುತ್ತೇನೆ.-ಪಿ.ವೈ.ರಾಜೇಂದ್ರ ಕುಮಾರ್, ಉಪಾಧ್ಯಕ್ಷರು ಕರ್ನಾಟಕ ಜೈನ್ ಅಸೋಸಿಯೇಷನ್ ಬೆಂಗಳೂರು.-----
ರಾವಸಾಹೇಬರವರು ದಕ್ಷಿಣ ಭಾರತ ಜೈನ ಸಭಾದ ಅಧ್ಯಕ್ಷರಾಗಿ ನಿರಂತರ ನಾಲ್ಕು ಅವಧಿಗೆ ಸೇವೆ ಸಲ್ಲಿಸಿರುವುದು ಸಮಾಜದ ಕಾಳಜಿಗೆ ಹಿಡಿದ ಕೈಗನ್ನಡಿ. ಸರ್ವ ಸಮಾಜದ ಏಳಿಗೆಗೆ ಶ್ರಮಿಸಿದ್ದು, ಸರ್ವರ ಜನ, ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಶಿಕ್ಷಣ, ಉದ್ಯೋಗ ಸೇರಿದಂತೆ ಧಾರ್ಮಿಕತೆಗೆ ಹೆಚ್ಚು ಒಲವು ನೀಡಿದ್ದು, ಸ್ವಾಸ್ಥ್ಯ ಸಮಾಜಕ್ಕೆ ರಾವಸಾಹೇಬರ್ ವ್ಯಕ್ತಿತ್ವ ಸರ್ವರಿಗೂ ಆದರ್ಶಪ್ರಾಯ. ಅಗಲಿದ ಹಿರಿಯ ಜೀವಕ್ಕೆ ಸದ್ಗತಿ ಹಾಗೂ ಚಿರಶಾಂತಿ ಕರುಣಿಸಲಿ.-ಬಿ.ಎ.ಪಾಟೀಲ, ಉತ್ತರ ಕರ್ನಾಟಕ ಜೈನ ಮಹಾಸಂಘ, ಅಧ್ಯಕ್ಷರು.
ಸಹಕಾರಿ ಧುರೀಣ, ಜೈನ ಸಮಾಜದ ಮುಖಂಡರಾಗಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರದಲ್ಲಿ ಅನೇಕ ಕಾರ್ಯಚಟುವಟಿಕೆಗಳನ್ನು ಮಾಡಿದ್ದಾರೆ. ಅವರ ನಿಸ್ವಾರ್ಥ ಸೇವೆ ನಮಗೆ ಸದಾ ಆದರ್ಶಪ್ರಾಯ. ಅವರಿಗೆ ಭಗವಂತ ಸದ್ಗತಿ ನೀಡಲಿ.-ಶಾಂತರಾಜ ಮಲಸಮುದ್ರ, ಉತ್ತರ ಕರ್ನಾಟಕ ಜೈನ ಮಹಾಸಂಘ, ಪ್ರಧಾನ ಕಾರ್ಯದರ್ಶಿ.---ರಾವ್ ಸಾಹೇಬ ಪಾಟೀಲ ನಿಧನ ಸುದ್ಧಿ ಕೇಳಿ ಮನಸ್ಸಿಗೆ ನೋವಾಯಿತು. ಸಮಾಜಮುಖಿ ಹಾಗೂ ಸಹಕಾರ ರಂಗದಲ್ಲಿ ಅವರ ಸೇವೆ ಅಪಾರ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬಸ್ಥರಿಗೆ ನೋವು ಸಹಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.-ಲಕ್ಷ್ಮೀ ಹೆಬ್ಬಾಳಕರ್, ಸಚಿವೆ.
----ಸಹಕಾರ, ಉದ್ಯಮ, ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ರಾವಸಾಹೇಬ ಕಾಕಾ ಮಾರ್ಗದರ್ಶನ ಇನ್ನಷ್ಟು ಕಾಲ ಸಮಾಜಕ್ಕೆ ಅವಶ್ಯವಿತ್ತು. ವಿಶೇಷವಾಗಿ ಜೈನ ಸಮುದಾಯದ ಮಹಾಸಭೆಯ ಮೂಲಕ ಸಮುದಾಯದ ಏಳ್ಗೆಗೆ ಶ್ರಮಿಸುವ ಜೊತೆಗೆ ಹಲವಾರು ರಾಜಕೀಯ ಕುಟುಂಬಗಳ ನಂಟು ಹೊಂದಿದ್ದ ಅವರು ಅಧಿಕಾರಕ್ಕಾಗಿ ಎಂದಿಗೂ ಆಸೆಪಟ್ಟವರಲ್ಲ. ನೇರ ನಡೆ-ನುಡಿಯ ಮೂಲಕ ಸಮಾಜದ ವಿವಿಧ ಕ್ಷೇತ್ರಗಳ ಉನ್ನತಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಅಗಲಿಕೆ ಸಮಾಜಕ್ಕೆ ತುಂಬಿಬಾರದ ಹಾನಿಯನ್ನುಂಟು ಮಾಡಿದೆ. ಅವರ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ.-ರಮೇಶ ಕತ್ತಿ, ಅಧ್ಯಕ್ಷರು, ಬೆಳಗಾವಿ ಡಿಸಿಸಿ ಬ್ಯಾಂಕ್.--------------ಗಡಿಭಾಗದಲ್ಲಿ ಸಹಕಾರ ಹಾಗೂ ಔದ್ಯೋಗಿಕ ಕ್ಷೇತ್ರದ ಹಿರಿಮೆ ಹೆಚ್ಚಿಸಿದ ಸಹಕಾರ ಜೀವಿ ರಾವಸಾಹೇಬ ದಾದಾ ಪಾಟೀಲ ನಿಧನ ಆಘಾತ ತಂದಿದ್ದು, ಸರಳತೆಯ ಬದುಕು ಸವೆಸಿ ತಮ್ಮ ಪ್ರತಿ ಕಾರ್ಯದಲ್ಲಿಯೂ ಯಶ ಕಂಡಿದ್ದ ಅವರ ಬದುಕು ಯುವಕರಿಗೆ ಮಾದರಿಯಾಗಿತ್ತು. ದಿ.ಉಮೇಶ ಕತ್ತಿ ಹಾಗೂ ಚಿಕ್ಕಪ್ಪ ರಮೇಶ ಕತ್ತಿ ಅವರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡು ಬಂದಿದ್ದ ಅವರ ನಿಧನ ದುಃಖದ ಸಂಗತಿಯಾಗಿದೆ. ಅವರ ಅಗಲಿಕೆಯಿಂದ ಈ ಭಾಗ ಶ್ರೇಷ್ಠ ಸಹಕಾರಿಯೊಬ್ಬರನ್ನು ಕಳೆದುಕೊಂಡಂತಾಗಿದ್ದು, ಈ ನೋವು ಸಹಿಸುವ ಶಕ್ತಿ ಕುಟುಂಬ ವರ್ಗ ಹಾಗೂ ಅಭಿಮಾನಿ ಬಳಗಕ್ಕೆ ಭಗವಂತ ಕರುಣಿಸಲಿ.- ನಿಖಿಲ್ ಕತ್ತಿ, ಶಾಸಕರು, ಹುಕ್ಕೇರಿ.
-------------ಸಹಕಾರ ಕ್ಷೇತ್ರದ ಶ್ರೇಯೋಭಿವೃದ್ಧಿಗಾಗಿ ಶ್ರಮಪಟ್ಟ, ಸಹಕಾರಿ ಕ್ಷೇತ್ರದ ಧುರೀಣರಾದ ರಾವಸಾಹೇಬ ಪಾಟೀಲ ಅವರ ನಿಧನದಿಂದ ವೈಯಕ್ತಿಕವಾಗಿ ಹಾಗೂ ಸಹಕಾರಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.-ರಮೇಶ ಜಿಗಜಿಣಗಿ, ವಿಜಯಪುರ ಸಂಸದ.