ಸಾರಾಂಶ
ಬೆಂಗಳೂರು : ನಗರದ ಹೊರವಲಯ ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ ಹೌಸ್‌ವೊಂದರಲ್ಲಿ ‘ಸನ್ ಸೆಟ್ ಟು ಸನ್ ರೈಸ್ ವಿಕ್ಟರಿ’ ಹೆಸರಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳು ಸೋಮವಾರ ಮುಂಜಾನೆ ದಾಳಿ ಮಾಡಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.ಪಾರ್ಟಿ ಆಯೋಜಕ ಹೈದರಾಬಾದ್ ಮೂಲದ ವಾಸು, ಸ್ನೇಹಿತರಾದ ಅರುಣ್, ಸಿದ್ಧಿಕಿ, ರಣಧೀರ್, ಬಾಬು ಬಂಧಿತರು.
ಆರೋಪಿಗಳಿಂದ ಎಂಡಿಎಂಎ, ಕೊಕೇನ್, ಹೈಡ್ರೋ ಗಾಂಜಾ ಜಪ್ತಿ ಮಾಡಿದ್ದಾರೆ.ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್.ಫಾರ್ಮ್ ಹೌಸ್‌ನಲ್ಲಿ ಮಾದಕವಸ್ತು ಬಳಸಿಕೊಂಡು ರೇವ್ ಪಾರ್ಟಿ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ಸ್ಥಳೀಯ ಪೊಲೀಸರೊಂದಿಗೆ ಮುಂಜಾನೆ ಸುಮಾರು 3.30ರ ಸುಮಾರಿಗೆ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದ್ದಾರೆ.
ಈ ವೇಳೆ ಪಾರ್ಟಿಯಲ್ಲಿ ಸುಮಾರು 70 ಪುರುಷರು ಹಾಗೂ 30 ಮಹಿಳೆಯರು ಸೇರಿದಂತೆ ನೂರಕ್ಕೂ ಅಧಿಕ ಮಂದಿ ಭಾಗಿಯಾಗಿರುವುದು ಕಂಡು ಬಂದಿದೆ. ಈ ಪೈಕಿ ಆಂಧ್ರಪ್ರದೇಶ ಮೂಲದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ತೆಲುಗು ಚಿತ್ರರಂಗದ ಖ್ಯಾತ ಪೋಷಕ ನಟಿ ಹೇಮಾ ಸೇರಿದಂತೆ ಸಹ ನಟ-ನಟಿಯರು, ರೂಪದರ್ಶಿಗಳು, ಉದ್ಯಮಿಗಳು, ರಾಜಕಾರಣಿಗಳು, ಸಾಫ್ಟ್‌ವೇರ್ ಎಂಜಿನಿಯರ್‌ಗಳು ಭಾಗವಹಿಸಿದ್ದರು ಎನ್ನಲಾಗಿದೆ.ವೈದ್ಯರನ್ನು ಪಾರ್ಟಿ ಸ್ಥಳಕ್ಕೆ ಕರೆಸಿಕೊಂಡು ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರ ರಕ್ತದ ಮಾದರಿ ಸಂಗ್ರಹಿಸುತ್ತಿದ್ದಾರೆ. ಅಂತೆಯೇ ಸೀನ್ ಆಫ್ ಕ್ರೈಂ ಅಧಿಕಾರಿಗಳನ್ನು ಕರೆಸಿ ಪಾರ್ಟಿಯ ಸ್ಥಳದಲ್ಲಿ ಸಿಕ್ಕ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿದ್ದಾರೆ.