ತಾಲೂಕಿನ ಎರ್ಲಪಾಡಿ ಗ್ರಾಮದ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಮುಖ್ಯ ಕೋಚ್ ರವಿಶಂಕರ್ ಜಯದ್ರಥ ಶಾಸ್ತ್ರಿ (ರವಿಶಾಸ್ತ್ರಿ) ಗುರುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ಕಳ : ತಾಲೂಕಿನ ಎರ್ಲಪಾಡಿ ಗ್ರಾಮದ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಮುಖ್ಯ ಕೋಚ್ ರವಿಶಂಕರ್ ಜಯದ್ರಥ ಶಾಸ್ತ್ರಿ (ರವಿಶಾಸ್ತ್ರಿ) ಗುರುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ತಮ್ಮ ಸಂಬಂಧಿಕರಾದ ಸಂತೋಷ್ ಶಾಸ್ತ್ರಿ, ಕವಿತಾ ಶಾಸ್ತ್ರಿ ಹಾಗೂ ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ರವಿಶಾಸ್ತ್ರಿ, ಮೂಲ ನಾಗದೇವರಿಗೆ ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ, ಕಲ್ಪೋಕ್ತ ಪೂಜೆ ಹಾಗೂ ನಾಗತಂಬಿಲ ಸೇವೆ ನೆರವೇರಿಸಿದರು. ಬಳಿಕ ಶ್ರೀ ವಿಷ್ಣುಮೂರ್ತಿ ದೇವರಿಗೆ ಮಹಾಪೂಜೆ ಸಲ್ಲಿಸಿದರು.ನರಸಿಂಹ ತಂತ್ರಿ ಹಾಗೂ ಅಶೋಕ್ ಕಾರಂತ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ದೇವಸ್ಥಾನದ ಮೊಕ್ತೇಸರ ಅನಂತ ಪಟ್ಟಾಭಿರಾವ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೋಜ ಶೆಟ್ಟಿ ಸೇರಿದಂತೆ ಹಲವರು ಇದ್ದರು.ಕರ್ವಾಲು ದೇವಸ್ಥಾನದೊಂದಿಗೆ ರವಿಶಾಸ್ತ್ರಿ ಕುಟುಂಬಕ್ಕೆ ಸುಮಾರು 19 ವರ್ಷಗಳಿಂದ ವಿಶೇಷ ನಂಟಿದೆ ಎನ್ನಲಾಗಿದೆ. ಸಂತಾನ ಪ್ರಾಪ್ತಿಗಾಗಿ ಜ್ಯೋತಿಷಿಯೊಬ್ಬರ ಸಲಹೆಯಂತೆ ಮೂಲ ನಾಗದೇವರಿಗೆ ಪೂಜೆ ಸಲ್ಲಿಸಲು ರವಿಶಾಸ್ತ್ರಿ ಹಾಗೂ ಅವರ ಪತ್ನಿ ರಿತು ಸಿಂಗ್ ದೇವಸ್ಥಾನಕ್ಕೆ ಆಗಮಿಸಿದ್ದರು. ಪೂಜೆಯ ಬಳಿಕ ಅವರಿಗೆ ಪುತ್ರಿ ಅಲೇಕಾ ಶಾಸ್ತ್ರಿ ಜನಿಸಿದ ಹಿನ್ನೆಲೆಯಲ್ಲಿ ಕರ್ವಾಲು ಕ್ಷೇತ್ರದೊಂದಿಗೆ ಕುಟುಂಬಕ್ಕೆ ಭಾವನಾತ್ಮಕ ನಂಟು ಬೆಳೆದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ವಿಶ್ವಕಪ್ ಕುರಿತು ವಿಶ್ವಾಸ:
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ರವಿಶಾಸ್ತ್ರಿ, ಮುಂಬರುವ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಭಾರತ ತಂಡಕ್ಕೆ ಹೆಮ್ಮೆಯ ಹಾಗೂ ಐತಿಹಾಸಿಕ ಅವಕಾಶವಾಗಿದೆ ಎಂದರು.ಜಾಗತಿಕ ಕ್ರಿಕೆಟ್ ವೇದಿಕೆಯಲ್ಲಿ ಮತ್ತೊಮ್ಮೆ ಗಮನಾರ್ಹ ಸಾಧನೆ ಮಾಡುವ ನಿಟ್ಟಿನಲ್ಲಿ ಟೀಮ್ ಇಂಡಿಯಾ ಸಜ್ಜಾಗಿದೆ. ಟೂರ್ನಿಗೆ ಆಯ್ಕೆಯಾಗಿರುವ ಆಟಗಾರರ ಬಳಗ ಉತ್ತಮ ಪ್ರತಿಭೆ ಹಾಗೂ ಸಾಮರ್ಥ್ಯದಿಂದ ಕೂಡಿದ್ದು, ಪ್ರತಿಯೊಬ್ಬರೂ ಉತ್ತಮ ಲಯದಲ್ಲಿದ್ದಾರೆ. ಅಚಲ ವಿಶ್ವಾಸ ಮತ್ತು ಪರಸ್ಪರ ಸಮನ್ವಯದೊಂದಿಗೆ ತಂಡ ಆಡಲು ಸಿದ್ಧವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳ ಬಲಿಷ್ಠ ಪ್ರದರ್ಶನ ಎದುರಾಳಿಗಳಿಗೆ ಸವಾಲಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.