ಚಾಮರಾಜನಗರ ದಸರಾ ಮಹೋತ್ಸವಕ್ಕೆ ಖ್ಯಾತ ಚಲನಚಿತ್ರ ನಟ, ನಿರ್ದೇಶಕ ವಿ.ರವಿಚಂದ್ರನ್, ಪಶುಸಂಗೋಪನೆ, ರೇಷ್ಮೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ವಿಧ್ಯುಕ್ತ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ದಸರಾ ಮಹೋತ್ಸವಕ್ಕೆ ಖ್ಯಾತ ಚಲನಚಿತ್ರ ನಟ, ನಿರ್ದೇಶಕ ವಿ.ರವಿಚಂದ್ರನ್, ಪಶುಸಂಗೋಪನೆ, ರೇಷ್ಮೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ವಿಧ್ಯುಕ್ತ ಚಾಲನೆ ನೀಡಿದರು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಖ್ಯ ವೇದಿಕೆಯಲ್ಲಿ ಚಾಮರಾಜನಗರ ಜಿಲ್ಲಾಡಳಿತದಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ಚಾಮರಾಜನಗರ ದಸರಾ ಮಹೋತ್ಸವವನ್ನು ಡ್ರಮ್ ಬಾರಿಸುವ ಮೂಲಕ ಉದ್ಘಾಟಿಸಿದರು.

ಇದೇ ವೇಳೆ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಮೈಸೂರಿನಲ್ಲಿ ನಡೆಯುವ ನಾಡಹಬ್ಬ ದಸರಾ ಉತ್ಸವದಂತೆ ಇಲ್ಲಿಯೂ ದಸರಾ ನಡೆಸಬೇಕೆಂಬುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಾಗಿತ್ತು. ಅದರಂತೆ ದಸರಾ ನಡೆಯುತ್ತಿತ್ತು. ಪ್ರಸ್ತುತ ಚಾಮರಾಜನಗರ ತೀವ್ರ ಬರಪೀಡಿತ ಜಿಲ್ಲೆಯಾಗಿ ಘೋಷಣೆಯಾದ್ದರಿಂದ ಸರ್ಕಾರ ದಸರಾವನ್ನು ನಿರಾಕರಿಸಿತ್ತು ಎಂದರು.

ಸದ್ಯ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯಸರ್ಕಾರ ೨ ಕೋಟಿ ಅನುದಾನ ನೀಡಿ ಚಾಮರಾಜನಗರ ದಸರಾಗೆ ಹಸಿರು ನಿಶಾನೆ ತೋರಿದೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಮೈಸೂರಿನಲ್ಲಿ ನಡೆಯುವ ದಸರಾ ಕಾರ್ಯಕ್ರಮಗಳಂತೆ ಇಲ್ಲಿಯೂ ಸಹ ಕಳೆದ ೨ ದಿನಗಳಿಂದ ವಿಶಿಷ್ಟ, ವಿಭಿನ್ನವಾಗಿ ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ನಾಡಿನೆಲ್ಲೆಡೆ ಉತ್ತಮ ಮಳೆ-ಬೆಳೆಯಾಗಿ ಸಮೃದ್ಧಿಯಾಗಲಿ ಎಂದು ಹಾರೈಸಿದರು.

ಖ್ಯಾತ ಚಲನಚಿತ್ರ ನಟ, ನಿರ್ದೇಶಕ ವಿ. ರವಿಚಂದ್ರನ್ ಮಾತನಾಡಿ, ಈ ಮೊದಲು ನಾನು ಚಾಮರಾಜನಗರದ ಸುತ್ತಲಿನ ಸ್ಥಳಗಳಿಗೆ ಚಿತ್ರೀಕರಣಕ್ಕಾಗಿ ಬಂದಿದ್ದೆ. ಇದೇ ಮೊದಲ ಬಾರಿಗೆ ಚಾಮರಾಜನಗರಕ್ಕೆ ಆಗಮಿಸಿದ್ದೇನೆ. ಈ ಮಣ್ಣಿನ ಋಣ ಹಾಗೂ ನಿಮ್ಮೆಲ್ಲರ ಪ್ರೀತಿಯೇ ಇದಕ್ಕೆ ಕಾರಣವಾಗಿದೆ. ಹಬ್ಬ ಎಂದರೆ ವಿಶೇಷ, ಅದರಲ್ಲೂ ನಾಡಹಬ್ಬ ದಸರಾ ಎಂದರೇ ಆಚರಣೆಯ ಅಷ್ಟೂ ದಿನವೂ ಮನರಂಜನೆಯಲ್ಲಿ ಮಿಂದೇಳುವ ಹಬ್ಬವೇ ಆಗಿದೆ ಎಂದರು.

ಚಾಮರಾಜನಗರಕ್ಕೆ ಬಂದಿರುವುದು ನನ್ನ ಖುಷಿಯ ಕ್ಷಣ. ಪ್ರಂಪಂಚ ಸುತ್ತುವುದು ಎಲ್ಲರ ಆಸೆ. ಕರ್ನಾಟಕ ಸುತ್ತುವ ಆಸೆ ನನಗೆ. ನನಗೆ ನನ್ನದೇ ಆದ ಲೋಕವಿದೆ. ಪ್ರೇಮಲೋಕದಲ್ಲಿ ರಣಧೀರನಾಗಿ ಬೆಳೆದಿರುವ ನನಗೆ ಜೀವನಪೂರ್ತಿ ನಿಮ್ಮನ್ನು ರಂಜಿಸುವುದೇ ನನ್ನ ಗುರಿ, ಧ್ಯೇಯವಾಗಿದೆ. ನನಗೆ ೬೫ ವರ್ಷ ವಯಸ್ಸಾಗಿದ್ದರೂ ನಿಮ್ಮ ಪ್ರೀತಿ ಮುಂದೆ ೨೫ ವರ್ಷಕ್ಕೆ ಇಳಿದಿರುವ ಹಾಗೆ ನನಗನಿಸುತ್ತಿದೆ. ಈ ಜೀವನ, ಬದುಕು ಎಲ್ಲಾ ನಿಮ್ಮ ಸಂತೋಷದಿಂದ ಮಾತ್ರ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿ, ಮೂರು ದಿನಗಳ ಚಾಮರಾಜನಗರ ದಸರಾ ಉತ್ಸವವನ್ನು ಬಹಳ ಕಡಿಮೆ ಅವಧಿಯಲ್ಲಿ ಆಯೋಜಿಸಲಾಗಿದ್ದರೂ ಅತ್ಯಂತ ವ್ಯವಸ್ಥಿತ ಹಾಗೂ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಕೆಲದಿನಗಳ ಹಿಂದೆ ಮುಖ್ಯಮಂತ್ರಿಗಳು ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಕಾಳಜಿ ಹಾಗೂ ಕಲಾವಿದರ ಮನವಿ ಮೇರೆಗೆ ಚಾಮರಾಜನಗರದಲ್ಲಿ ದಸರಾ ನಡೆಸಲು ಸರ್ಕಾರ ಅನುಮತಿ ನೀಡಿದೆ ಎಂದರು.

ಮಾದಾಪಟ್ಟಣ ಮಠದ ತೋಟಂದಾರ್ಯ ಸ್ವಾಮೀಜಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಪ್ರಿಯದರ್ಶಿನಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಿ.ಸಿ.ಶೃತಿ ಇತರರು ಹಾಜರಿದ್ದರು.