ಸಾರಾಂಶ
ಸೈಕಲ್ ಸವಾರಿ ಮೂಲಕ ದೇಶ ಪರ್ಯಟನೆಗೈಯ್ಯುತ್ತಿರುವ ಉತ್ತರಖಂಡ ರಾಜ್ಯದ ಯುವಕ ರವಿಕಾಂತ ಅವರನ್ನು ಭಟ್ಕಳ ಪಟ್ಟಣದಲ್ಲಿ ಸ್ಥಳೀಯರು ಹೂಮಾಲೆ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು. ೨೯ ವರ್ಷದ ರವಿಕಾಂತ ದೇಶದ ವಿವಿಧ ಭಾಗಗಳಲ್ಲಿನ ಧಾರ್ಮಿಕ ಅಚರಣೆ, ಸಂಸ್ಕೃತಿ, ವೇಷ-ಭೂಷಣದ ಅಧ್ಯಯನಕ್ಕೆ ಆಗಮಿಸಿದ್ದಾರೆ.
ಭಟ್ಕಳ: ಸೈಕಲ್ ಸವಾರಿ ಮೂಲಕ ದೇಶ ಪರ್ಯಟನೆಗೈಯ್ಯುತ್ತಿರುವ ಉತ್ತರಖಂಡ ರಾಜ್ಯದ ಯುವಕ ರವಿಕಾಂತ ಅವರನ್ನು ಪಟ್ಟಣದಲ್ಲಿ ಸ್ಥಳೀಯರು ಹೂಮಾಲೆ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.
ಸೈಕಲ್ ಸವಾರಿ ಹೊರಟ ಯುವಕ ರವಿಕಾಂತ ಅವರಿಗೆ ಭಟ್ಕಳದಲ್ಲೇ ವಸತಿಗೆ ಅವಕಾಶ ಮಾಡಿಕೊಟ್ಟ ಸ್ಥಳೀಯರಾದ ರಾಮನಾಥ ಬಳೆಗಾರ, ದೀಪಕ ನಾಯ್ಕ, ನರೇಂದ್ರ ನಾಯಕ ಅವರು ಶನಿವಾರ ಬೆಳಗ್ಗೆ ಪಟ್ಟಣ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದಲ್ಲಿ ದೇವರ ಪ್ರಸಾದವನ್ನು ನೀಡಿ ಗೌರವಿಸಿ ಮುಂದಿನ ಪ್ರಯಾಣಕ್ಕೆ ಬೀಳ್ಕೊಟ್ಟರು.ಉತ್ತರಖಂಡ ರಾಜ್ಯದ ಲಕ್ವಾಡ ಗ್ರಾಮದ ೨೯ ವರ್ಷದ ರವಿಕಾಂತ ದೇಶದ ವಿವಿಧ ಭಾಗಗಳಲ್ಲಿನ ಧಾರ್ಮಿಕ ಅಚರಣೆ, ಸಂಸ್ಕೃತಿ, ವೇಷ-ಭೂಷಣದ ಅಧ್ಯಯನದ ಜತೆಗೆ ಜನರಲ್ಲಿ ಧರ್ಮ ಜಾಗೃತಿ ಮೂಡಿಸುವ ಸಲುವಾಗಿ ತಮ್ಮ ಸೈಕಲ್ ಪಯಣ ಅರಂಭಿಸಿದ್ದಾರೆ. ಡಿ. ೧ರಂದು ಉತ್ತರಖಂಡದ ಲಕ್ವಾಡದಿಂದ ಸೈಕಲ್ ಪಯಾಣ ಆರಂಭಿಸಿ ೨೮ ದಿನಗಳಲ್ಲಿ ತಮ್ಮ ಸೈಕಲ್ ಯಾತ್ರೆಯಲ್ಲಿ ಭಟ್ಕಳಕ್ಕೆ ತಲುಪಿದ್ದಾರೆ. ಪಂಚಾಬ್, ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಸಂಚರಿಸಿ, ಅಲ್ಲಿಂದ ಕರ್ನಾಟಕ ತಲುಪಿರುವ ಅವರು, ಇಲ್ಲಿಂದ ಕನ್ಯಾಕುಮಾರಿ ತನಕ ಸಾಗಲಿದ್ದಾರೆ. ಅಂದಾಜು ೪ ತಿಂಗಳಿನಲ್ಲಿ ದೇಶ ಪರ್ಯಟನೆ ಮುಗಿಸುವ ಅಭಿಲಾಷೆ ಹೊಂದಿರುವ ರವಿಕಾಂತ ಆ ನಿಟ್ಟಿನಲ್ಲಿ ಪ್ರತಿನಿತ್ಯ ೧೦೦ ಕಿ.ಮೀ. ಸೈಕಲ್ ತುಳಿಯುತ್ತಿರುವುದು ವಿಶೇಷವಾಗಿದೆ.
ಬಿಎ ಪದವೀಧರನಾದರೂ ಕೆಲಸಕ್ಕಾಗಿ ಕಾಯದೇ ಕುಟುಂಬದವರ ಜತೆ ಕೃಷಿ ಕಾಯಕದಲ್ಲಿ ತೋಡಗಿಕೊಂಡಿದ್ದೆ. ಮನೆ ಬಿಟ್ಟು ಹೋಗುವ ಮಕ್ಕಳ ಜತೆ ಪರ ಊರಿನಲ್ಲಿ ಯಾವ ರೀತಿ ವರ್ತಿಸುತ್ತಾರೆ ಎನ್ನುವುದು ನನಗೆ ತಿಳಿಯಬೇಕಾದ ಹಂಬಲವಿತ್ತು. ಜತೆಗೆ ವಿವಿಧ ಊರಿನ ಧಾರ್ಮಿಕ ಆಚರಣೆಗಳ ಬಗ್ಗೆ ತಿಳಿಯುವ ಬಯಕೆಯಿಂದ ಸೈಕಲ್ ಮೇಲೆ ಪಯಾಣ ಆರಂಭಿಸಿದೆ. ನಾನು ಹೋದ ಪ್ರದೇಶದಲ್ಲಿ ನನಗೆ ಜನತೆಯಿಂದ ಉತ್ತಮ ಸ್ಪಂದನೆ ಸಿಕ್ಕಿರುವುದು ಖುಷಿ ತಂದಿದೆ ಎಂದು ಅವರು ತಿಳಿಸಿದರು.