ಬಳ್ಳಾರಿ: ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ 116ನೇ ಜಯಂತಿ ಅಂಗವಾಗಿ ರಂಗತೋರಣ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ ಹಾಗೂ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಂಗಜ್ಯೋತಿ ಯಾತ್ರೆಗೆ ವಿಧಾನಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಚಾಲನೆ ನೀಡಿದರು.
ಚೇಳ್ಳಗುರ್ಕಿಯ ಎರ್ರಿತಾತ ಜೀವಸಮಾಧಿ ಮಠದಲ್ಲಿ ಶಾಸ್ತ್ರೋಕ್ತ ಪೂಜೆ ಸಲ್ಲಿಸಿದ ಬಳಿಕ ರಂಗಜ್ಯೋತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜೋಳದರಾಶಿಯಂತಹ ಪುಟ್ಟ ಗ್ರಾಮದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ದೊಡ್ಡನಗೌಡರು ತಮ್ಮ ಸಾಹಿತ್ಯ, ನಾಟಕ, ಪ್ರವಚನ ಹಾಗೂ ಸಾಂಸ್ಕೃತಿಕ ಸೇವೆಯ ಮೂಲಕ ಇಡೀ ನಾಡಿನಾದ್ಯಂತ ಅಪಾರ ಗೌರವ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.ದೊಡ್ಡನಗೌಡರ ಜೀವನ, ಮೌಲ್ಯಗಳು ಹಾಗೂ ಸಾಧನೆಗಳನ್ನು ಇಂದಿನ ಯುವಜನತೆ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ರಂಗಜ್ಯೋತಿ ಯಾತ್ರೆಯಂತಹ ಕಾರ್ಯಕ್ರಮಗಳು ಅತ್ಯಂತ ಪರಿಣಾಮಕಾರಿಯಾಗಲಿವೆ. ಇಂತಹ ಸಾಂಸ್ಕೃತಿಕ ಯಾತ್ರೆಗಳು ಕನ್ನಡದ ಸಂಸ್ಕೃತಿ, ಸಾಹಿತ್ಯ ಮತ್ತು ರಂಗಭೂಮಿಯ ಪರಂಪರೆಯನ್ನು ಜೀವಂತವಾಗಿರಿಸಲು ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ಎರ್ರಿತಾತ ಜೀವಸಮಾಧಿ ಮಠದಿಂದ ದೊಡ್ಡನಗೌಡರ ಭಾವಚಿತ್ರ ಹೊತ್ತ ಅಲಂಕೃತ ವಾಹನವು ರಂಗತೋರಣದ ಕಾರ್ಯಕರ್ತರ ಬೈಕ್ ರ‍್ಯಾಲಿಯೊಂದಿಗೆ ಹೊರಟು ಸಮೀಪದ ದೊಡ್ಡನಗೌಡರ ಸಮಾಧಿಗೆ ತಲುಪಿತು. ಅಲ್ಲಿ ಕುಟುಂಬ ಸದಸ್ಯರು ರಂಗಜ್ಯೋತಿಯನ್ನು ಭಕ್ತಿ-ಗೌರವಗಳಿಂದ ಸ್ವಾಗತಿಸಿದರು. ಬಳಿಕ ಪರಮದೇವನಹಳ್ಳಿ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಪೂಜೆ, ಪುಷ್ಪಾರ್ಚನೆ ಮೂಲಕ ಜ್ಯೋತಿಗೆ ಗೌರವ ಸಲ್ಲಿಸಿ ಬೀಳ್ಕೊಟ್ಟರು.ಮುಂದೆ ಗೋಡೆಹಾಳು, ಅಮರಾಪುರ, ಕಕ್ಕಬೇವಿನಹಳ್ಳಿ, ಬೇವಿನಹಳ್ಳಿ ಹಾಗೂ ಬಿಸಲಹಳ್ಳಿ ಗ್ರಾಮಗಳ ಮೂಲಕ ಸಾಗಿದ ಯಾತ್ರೆಗೆ ಗ್ರಾಮಸ್ಥರು, ಶಾಲಾ ಮಕ್ಕಳು ಪುಷ್ಪನಮನ ಸಲ್ಲಿಸಿ ಭವ್ಯ ಸ್ವಾಗತ ಕೋರಿದರು. ಹಲವು ಕಡೆಗಳಲ್ಲಿ ಕನ್ನಡಾಭಿಮಾನಿಗಳು ಹಾಗೂ ಕಲಾಭಿಮಾನಿಗಳು ಜ್ಯೋತಿ ದರ್ಶನ ಪಡೆದು ದೊಡ್ಡನಗೌಡರ ಸಾಧನೆಯನ್ನು ಸ್ಮರಿಸಿದರು.
ಬಳಿಕ ಬಳ್ಳಾರಿಯ ಡಾ. ರಾಜಕುಮಾರ ರಸ್ತೆಯ ರಾಘವ ಕಲಾಮಂದಿರಕ್ಕೆ ಆಗಮಿಸಿದ ರಂಗಜ್ಯೋತಿಯನ್ನು ಕಲಾಮಂದಿರದ ಕೆ. ಚೆನ್ನಪ್ಪ, ಎನ್. ಪ್ರಕಾಶ್, ನಟರಾಜ್, ರಮಣಪ್ಪ ಭಜಂತ್ರಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಲಾವಿದರು ಆತ್ಮೀಯವಾಗಿ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಎರ್ರಿತಾತ ಜೀವಸಮಾಧಿ ಟ್ರಸ್ಟ್‌ನ ಧರ್ಮದರ್ಶಿ ಬಾಳನಗೌಡ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಜೋಳದರಾಶಿ ಪಂಪನಗೌಡ, ರಂಗತೋರಣದ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ, ಅಡವಿಸ್ವಾಮಿ, ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ಮುದ್ದಟನೂರು ತಿಪ್ಪೇಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ. ಮಲ್ಲಿಕಾರ್ಜುನ, ದೊಡ್ಡನಗೌಡರ ಬಂಧುಗಳಾದ ಬಾಪೂರ ಚಿನ್ನಬಸವನಗೌಡ, ಜೋಳದರಾಶಿ ಚನ್ನವೀರಗೌಡ, ಬಾಪೂರ ನೀಲಕಂಠಗೌಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.