27ರಿಂದ ಹಸಿ ಶುಂಠಿ ಖರೀದಿ ಕೇಂದ್ರ ಪ್ರಾರಂಭ: ಡಾ. ವಿಜಯಮಹಾಂತೇಶ

| Published : Apr 24 2025, 11:53 PM IST

ಸಾರಾಂಶ

ಎಫ್‌ಎಕ್ಯು ಗುಣಮಟ್ಟದ ಹಸಿಶುಂಠಿ ಪ್ರತಿ ಕ್ವಿಂಟಲ್‌ಗೆ ₹2,445ಗಳಂತೆ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ.

ಹಾವೇರಿ: ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಹಸಿಶುಂಠಿ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ನಾಲ್ಕು ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಆರಂಭಿಸಲು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ನಿಗದಿಪಡಿಸಿದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯ ಮಾರ್ಗಸೂಚಿ ಅನ್ವಯ ಎಫ್ಎಕ್ಯು ಗುಣಮಟ್ಟದ ಹಸಿ ಶುಂಠಿ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.ಎಫ್‌ಎಕ್ಯು ಗುಣಮಟ್ಟದ ಹಸಿಶುಂಠಿ ಪ್ರತಿ ಕ್ವಿಂಟಲ್‌ಗೆ ₹2,445ಗಳಂತೆ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ. ಏ. 27ರಿಂದ ರೈತರ ನೋಂದಣಿ ಜತೆಗೆ ಖರೀದಿ ಕಾರ್ಯವನ್ನು ಆರಂಭಿಸಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಮೂಲಕ ಕೇಂದ್ರ ಸರ್ಕಾರದ ಅನುಮೋದಿಸಿದ ದಿನಾಂಕದಿಂದ 30 ದಿನಗಳವರೆಗೆ ಖರೀದಿಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.ಖರೀದಿ ಕೇಂದ್ರ: ಹಸಿಶುಂಠಿ ಖರೀದಿ ಕೇಂದ್ರಗಳನ್ನು ಹಾನಗಲ್ಲ, ಹಿರೇಕೆರೂರು ಬ್ಯಾಡಗಿ ಹಾಗೂ ಶಿಗ್ಗಾಂವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ತೆರೆಯಲು ಸೂಚಿಸಿದರು.ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಪ್ರತಿ ಎಕರೆಗೆ 30 ಕ್ವಿಂಟಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 60 ಕ್ವಿಂಟಲ್ ಎಫ್ಎಕ್ಯು ಗುಣಮಟ್ಟದ ಹಸಿಶುಂಠಿ ಖರೀದಿಗೆ ಅವಕಾಶವಿದೆ. ಹಸಿಶುಂಠಿ ಖರೀದಿ ಮೊತ್ತವನ್ನು ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬೇಕು ಎಂದರು. ನೈಜ ರೈತರಿಂದ ಮಾತ್ರ ಖರೀದಿ: ನೈಜ ರೈತರಿಂದ ಮಾತ್ರ ಹಸಿಶುಂಠಿ ಖರೀದಿಗೆ ಕ್ರಮವಹಿಸಬೇಕು. ಈ ಯೋಜನೆಯ ಅನುಕೂಲವನ್ನು ಮಧ್ಯವರ್ತಿಗಳು ತೆಗೆದುಕೊಳ್ಳದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ತೋಟಗಾರಿಕೆ ಉಪನಿರ್ದೇಶಕರು ಮಾತನಾಡಿ, ಜಿಲ್ಲೆಯ ಹಾನಗಲ್ಲ ತಾಲೂಕಿನಲ್ಲಿ 11,706.70 ಹೆ., ಹಿರೇಕೆರೂರು 6783.40 ಹೆ., ಬ್ಯಾಡಗಿ 5318.20 ಹೆ., ಶಿಗ್ಗಾವಿ 3365.60 ಹೆ., ರಟ್ಟಿಹಳ್ಳಿ 1216.50 ಹೆ., ರಾಣಿಬೆನ್ನೂರು- 216.50 ಹೆ., ಹಾವೇರಿ 181.70 ಹೆ., ಹಾಗೂ ಸವಣೂರು ತಾಲೂಕಿನಲ್ಲಿ 33.90 ಹೆಕ್ಟೇರ್ ಸೇರಿ ಒಟ್ಟು 28,822.50 ಹೆಕ್ಟೇರ್ ಪ್ರದೇಶದಲ್ಲಿ ಹಸಿಶುಂಠಿ ಬೆಳೆಯಲಾಗಿದೆ ಎಂದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಇತರರು ಇದ್ದರು. ಪೋಕ್ಸೊ ಕಾಯ್ದೆ ಬಗ್ಗೆ ಕಾರ್ಯಾಗಾರ ಇಂದು

ಹಾವೇರಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ವೈದ್ಯಕೀಯ ಸಂಘ ಹಾಗೂ ಎಫ್‌ಒಜಿಎಸ್‌ಐ ಸಹಯೋಗದಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಂತ್ರಗಳ ನಿಷೇಧ ಕಾಯ್ದೆ ಕಾರ್ಯಕ್ರಮದಡಿ ಪೋಕ್ಸೊ ಕಾಯ್ದೆ ಕುರಿತು ಕಾರ್ಯಾಗಾರ ಏ. 25ರಂದು ಬೆಳಗ್ಗೆ 9 ಗಂಟೆಗೆ ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಜರುಗಲಿದೆ.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿರಾದಾರ ದೇವಿಂದ್ರಪ್ಪ ಎನ್. ಅವರು ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ ಸುರಗಿಹಳ್ಳಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಸಂತೋಷಕುಮಾರ, ಪೆನಲ್ ನ್ಯಾಯವಾದಿ ಆರ್.ಐ. ಚನ್ನಪಟ್ಟಣ ಅವರು ಪೋಕ್ಸೋ ಕಾಯ್ದೆ ಕುರಿತು ಉಪನ್ಯಾಸ ನೀಡಲಿದ್ದಾರೆ.