ಸಾರಾಂಶ
ಚಿತ್ರದುರ್ಗ ತಾಲೂಕಿನ ಯಳಗೋಡು ಗ್ರಾಪಂಯಲ್ಲಿ ಮಳೆ ನೀರು ಕೊಯ್ಲು ಹಾಗೂ ಬದು ನೀರು ನಿರ್ವಹಣೆ ಕುರಿತ ತರಬೇತಿಯನ್ನು ಗ್ರಾಪಂ ಅಧ್ಯಕ್ಷೆ ಅನಿತಾ ನಾಗರಾಜ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಂಬಲ ಸಂಪನ್ಮೂಲ ಸಂಸ್ಥೆ ಸಹಯೋಗದಲ್ಲಿ ಜಲಜೀವನ್ ಮಿಷನ್ ಯೋಜನೆ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಚಿತ್ರದುರ್ಗ ತಾಲೂಕಿನ ಯಳಗೋಡು ಗ್ರಾಮ ಪಂಚಾಯಿತಿಯಲ್ಲಿ ಮಳೆ ನೀರು ಕೊಯ್ಲು ಹಾಗೂ ಬದು ನೀರು ನಿರ್ವಹಣೆ ಕುರಿತು ತರಬೇತಿ ನಡೆಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ನಾಗರಾಜ್ ಮಾತನಾಡಿ, ಯಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆ ನಳ ಸಂಪರ್ಕ ಕಲ್ಪಿಸಲಾಗುತ್ತಿದೆ. ಪ್ರತಿ ವ್ಯಕ್ತಿಗೆ 55 ಲೀಟರ್ ಶುದ್ಧ ಹಾಗೂ ಸುರಕ್ಷಿತ ನೀರು ಕೊಡಲಾಗುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಪಂ ಅಭಿವೃದ್ದಿ ಅಧಿಕಾರಿ ಎಂ.ಆರ್.ಪ್ರಹ್ಲಾದ ಕುಮಾರ್ ಮಾತನಾಡಿ, ಗ್ರಾಪಂಯಿಂದ ಜಲ ಜೀವನ್ ಮಿಷನ್ ಯೋಜನೆ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆ ವಿವಿಧ ಘಟಕಾಂಶ ಅನುಷ್ಠಾನ ಮಾಡಲಾಗುತ್ತಿದೆ. ಎಲ್ಲಾ ಗ್ರಾಪಂ ಸದಸ್ಯರು ಮತ್ತು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ಇದರ ಬಗ್ಗೆ ಮಾಹಿತಿ ತಿಳಿದುಕೊಂಡು ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.ಜಲ ಜೀವನ್ ಯೋಜನೆ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ ಎಸ್.ನಾಡರ್, ಜಲ ಜೀವನ್ ಹಾಗೂ ಸ್ವಚ್ಛ ಭಾರತ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಜಿಎಸ್ ನಾಗರಾಜ್ ಮತ್ತು ಗುರುಮೂರ್ತಿ, ಮಳೆ ನೀರು ಕೊಯ್ಲು ಹಾಗೂ ಬದು ನೀರು ನಿರ್ವಹಣೆ ಬಗ್ಗೆ ತಿಳಿಸಿದರು. ಗ್ರಾಪಂ ಸದಸ್ಯರಾದ ಬಸವರಾಜಪ್ಪ, ರುದ್ರೇಶ್, ಶಾಂತಕುಮಾರ್, ಪಾಲಯ್ಯ, ರೂಪಾ, ಸಮಿತಿ ಸದಸ್ಯರು ಮತ್ತು ನೀರುಗಂಟಿಗಳು ಇದ್ದರು.