ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ರಾಯನಗೌಡ ಚಿತ್ತಾಪೂರ (ತಾತರಡ್ಡಿ) ಅವರು ಒಬ್ಬ ಸರಳ ಹಾಗೂ ಸೌಮ್ಯ ಸ್ವಭಾವಕ್ಕೆ ಹೆಸರಾದವರು. ಮೂಲತಃ ಇವರು ಕೃಷಿಯಾಧಾರಿತ ಜಮೀನುದಾರರು, ಮಾತ್ರವಲ್ಲದೇ ಬಹುದೊಡ್ಡ ಕೂಡಿಬಾಳುವ ಕುಟುಂಬದವರು. ಅವರು ಎಲ್ಲಿಯೂ ಗರ್ವ ಬಿಗುಮಾನ ಹೊಂದಿದವರಲ್ಲ. ಜಾತಿ, ಮತ, ಪಂಥ ಎನ್ನದೇ ಎಲ್ಲ ವರ್ಗದವರನ್ನು ಅತ್ಯಂತ ಗೌರವದಿಂದ ಕಾಣುವ ವ್ಯಕ್ತಿತ್ವದ ಮೂಲಕ ಸ್ನೇಹ ಜೀವಿಯಾಗಿ ಬೆಳೆದು ಬಂದವರು ಎಂದು ಬಿಜೆಪಿ ಮುಖಂಡ ಡಾ.ವಿರೇಶ ಪಾಟೀಲ ಹೇಳಿದರು. ಪಟ್ಟಣದ ಹುಡ್ಕೋ ಬಡಾವಣೆಯ ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಸಮಾಜ ಸೇವಕ ರಾಯನಗೌಡ ಚಿತ್ತಾಪೂರ (ತಾತರಡ್ಡಿ) ಅವರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಂಸ್ಥೆಯು ದುಬೈನಲ್ಲಿ ವಿಶೇಷ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಹಿನ್ನೆಲೆ ಪಟ್ಟಣದ ಗಣ್ಯರು, ರಾಜಕೀಯ ಮುಖಂಡರು, ಸಾಹಿತಿಗಳು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ದುಬೈ, ವಿದೇಶ ಪ್ರಯಾಣ ಸುಖಕರವಾಗಿರಲಿ ಎಂದು ಶುಭಹಾರೈಸಿದರು. ಈ ವೇಳೆ ಮಾತನಾಡಿದ ವಿರೇಶ ಪಾಟೀಲ, 2017ರಲ್ಲಿ ಮುದ್ದೇಬಿಹಾಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ತುಮಕೂರ ಬಳಿ ಆಕಸ್ಮೀಕ ಬೆಂಕಿ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸುಮಾರು 40 ಪ್ರಯಾಣಿರಕನ್ನು ಪ್ರಣಾಪಾಯದಿಂದ ಕಾಪಾಡಿದ ರಾಯನಗೌಡ ಚಿತ್ತಾಪೂರ ಕಾರ್ಯ ಶ್ಲಾಘನೀಯ. ಅವರ ಸಾಮಾಜಿಕ ಶೌರ್ಯ ಕಾರ್ಯಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು, ಇಡಿ ತಾಲೂಕಿಗೆ ಗೌರವ ಲಭಿಸಿದಂತಾಗಿದೆ. ರಾಯನಗೌಡರವರ ದಂಪತಿಗಳ ವಿದೇಶ ಪ್ರಯಾಣವು ಸುಖಕರವಾಗಿರಲಿ, ಇನ್ನಷ್ಟು ಸಾಮಾಜಿಕ ಸೇವೆ ಇವರಿಂದ ದೊರಕುವಂತಾಗಲಿ ಎಂದರು.ಈ ವೇಳೆ ನಿವೃತ್ತ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಪಿ.ಬಿ ಕಾಳಗಿ, ಸಂಗಮೇಶ ಬಿರಾದಾರ (ಜಿಟಿಸಿ), ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಮುರಳಿಕೃಷ್ಣ ಬುಡ್ಡೋಡಿ, ರಾಜು ಕರಡ್ಡಿ, ಗುರುಸ್ವಾಮಿ ಬೂದಿಹಾಳಮಠ, ಸತೀಶ ಕುಲಕರ್ಣಿ, ನಿಂಗಪ್ಪ ಚೆಟ್ಟೆರ, ವಿಕ್ರಮ ಓಸ್ವಾಲ್, ದೇವೇಂದ್ರ ವಾಲಿಕಾರ, ಕೃಷಿ ಅಧಿಕಾರಿ ಗೋವಿಂದರೆಡ್ಡಿ ಮೆದಕಿನಾಳ, ಗೋಪಿ ಮಡಿವಾಳ, ಸುರೇಶ ಕಲಾಲ, ಪುರಸಭೆ ಸದಸ್ಯ ಯಲ್ಲಪ್ಪ ನಾಯಕಮಕ್ಕಳ, ಶಿಕ್ಷಕ ಜೆ.ಡಿ ಮುಲ್ಲಾ, ಶಿವು ಹುರಕಡ್ಲಿ, ಶರಣು ಕೋರ್ಟ ಸೇರಿದಂತೆ ಹಲವರು ಇದ್ದರು.