ಸಾರಾಂಶ
ದೇಶಕ್ಕಾಗಿಯೇ ತನ್ನ ಬದುಕನ್ನೇ ತ್ಯಾಗ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುಣ್ಯಸ್ಮರಣೆ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಯಲಬುರ್ಗಾ
ದೇಶಕ್ಕಾಗಿಯೇ ತನ್ನ ಬದುಕನ್ನೇ ತ್ಯಾಗ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ ಎಂದು ಬಾದಿಮನಾಳ ಕನಕಗುರಪೀಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಾಲುಮತ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬ್ರಿಟಿಷರ ತೆರಿಗೆ ಪದ್ಧತಿಯನ್ನು ವಿರೋಧಿಸಿ ೧೮೫೭ರ ಕ್ರಾಂತಿಗಿಂತ ಮುಂಚೆ ಇಡೀ ದೇಶದಲ್ಲಿ ಸ್ವಾತಂತ್ರ‍್ಯಗೋಸ್ಕರ ಬ್ರಿಟಿಷರ ವಿರುದ್ಧ ತೊಡೆತಟ್ಟಿ ನಿಂತ ಪ್ರಪ್ರಥಮ ಕನ್ನಡಿಗ ಸೇನಾನಿ ಸಂಗೊಳ್ಳಿ ರಾಯಣ್ಣ ಎಂದರು.ಅಂದು ಹಣ, ಭೂಮಿಯ ಆಸೆಗಾಗಿ ರಾಯಣ್ಣನಿಗೆ ನಮ್ಮವರೇ ಮೋಸ ಮಾಡಿ ಬ್ರಿಟಿಷರಿಗೆ ಹಿಡಿದುಕೊಟ್ಟಿರಬಹುದು. ಆದರೆ, ತಾಯಿ ಭಾರತ ಮಾತೆ ರಾಯಣ್ಣನಿಗೆ ಮೋಸ ಮಾಡಲಿಲ್ಲ. ಏಕೆಂದರೆ ರಾಯಣ್ಣ ಹುಟ್ಟಿದ್ದು ಆಗಸ್ಟ್ ೧೫ರಂದು ಅಂದು ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕ ದಿನ. ರಾಯಣ್ಣನನ್ನು ಬ್ರಿಟಿಷರು ನೇಣಿಗೇರಿಸಿದ್ದು ಜನವರಿ ೨೬ರಂದು. ಅಂದು ನಮ್ಮ ರಾಷ್ಟ್ರ ಗಣರಾಜ್ಯವಾದ ದಿನ. ರಾಯಣ್ಣ ಧೈರ್ಯ, ಸಾಹಸದ ಮೂಲಕ ಬ್ರಿಟಿಷರ ಎದೆ ನಡುಗಿಸಿದ್ದ ವೀರ. ಕಿತ್ತೂರು ರಾಣಿ ಚೆನ್ನಮ್ಮ ಬೆನ್ನೆಲುಬಾಗಿ ತಾಯ್ನಾಡಿಗಾಗಿ ಜೀವ ನೀಡಿದ ದೇಶಭಕ್ತ ಎಂದರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಮೂರ್ತಿ ಇಟಗಿ ಮಾತನಾಡಿದರು. ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಪೊಲೀಸ್‌ಪಾಟೀಲ, ಕೆರಿಬಸಪ್ಪ ನಿಡಗುಂದಿ, ರಾಮಣ್ಣ ಸಾಲಭಾವಿ, ಪಪಂ ಸದಸ್ಯ ರೇವಣೆಪ್ಪ ಹಿರೇಕುರಬರ, ಬಾಲಚಂದ್ರ ಸಾಲಭಾವಿ, ಶಿವು ರಾಜೂರು, ಹನುಮಂತಪ್ಪ ಕುರಿ, ದೊಡ್ಡಯ್ಯ ಗುರುವಿನ, ಯಲ್ಲಪ್ಪ ಹೊಸಮನಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಎನ್. ಶ್ಯಾಗೋಟಿ, ಹಾಲುಮತ ಸಮಾಜದ ಯುವ ಘಟಕದ ಅಧ್ಯಕ್ಷ ಶರಣು ಚಿಲವಾಡಗಿ, ಶಂಕರಗೌಡ ಮರಿಗೌಡ್ರ, ದೇವಪ್ಪ ಹಲಗೇರಿ, ಅಮರೇಶ ದಮ್ಮೂರು, ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಸಾಲಭಾವಿ, ಸಾವಿತ್ರಿ ಗೊಲ್ಲರ, ಶೋಭಾ ಕುರಿ, ಭಾಗಿರಥಿ ಜೋಗಿನ, ಸಾವಿತ್ರಿ ಜಮಾದಾರ ಮತ್ತಿತರರು ಇದ್ದರು.