ರಾಯಣ್ಣ ಹೋರಾಟಗಾರರಿಗೆ ಇಂದಿಗೂ ಪ್ರೇರಣೆ: ಚಿಂತನ್

| Published : Jan 30 2025, 12:34 AM IST

ರಾಯಣ್ಣ ಹೋರಾಟಗಾರರಿಗೆ ಇಂದಿಗೂ ಪ್ರೇರಣೆ: ಚಿಂತನ್
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟಿಷರ ವಿರುದ್ಧ ಹೋರಾಟ ಮಾತ್ರವಲ್ಲ, ರೈತರನ್ನು ಸಂಘಟಿಸುವ, ಕಂದಾಯ ಹಾಗೂ ಭೂ ಮಾಲೀಕತ್ವ ವಿಚಾರದಲ್ಲಿ ಕೂಡ ಹೋರಾಡಿದ್ದ ಕೆಚ್ಚೆದೆಯ ಗುಂಡಿಗೆ ಹೊಂದಿದ್ದರು ಸಂಗೊಳ್ಳಿ ರಾಯಣ್ಣ. ಈಗ ಕೂಡ ಅವರು ಹೋರಾಟಗಾರರಿಗೆ ಪ್ರೇರಣೆಯಾಗಿದ್ದಾರೆ ಎಂದು ಪತ್ರಕರ್ತ, ಚಿಂತಕ ರಾ.ಚಿಂತನ್ ದಾಔಣಗೆರೆಯಲ್ಲಿ ಹೇಳಿದ್ದಾರೆ.

- ಶಿವಯೋಗಿ ಮಂದಿರದಲ್ಲಿ ಸಂಗೊಳ್ಳಿ ರಾಯಣ್ಣ 194ನೇ ಹುತಾತ್ಮ ದಿನಾಚರಣೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಬ್ರಿಟಿಷರ ವಿರುದ್ಧ ಹೋರಾಟ ಮಾತ್ರವಲ್ಲ, ರೈತರನ್ನು ಸಂಘಟಿಸುವ, ಕಂದಾಯ ಹಾಗೂ ಭೂ ಮಾಲೀಕತ್ವ ವಿಚಾರದಲ್ಲಿ ಕೂಡ ಹೋರಾಡಿದ್ದ ಕೆಚ್ಚೆದೆಯ ಗುಂಡಿಗೆ ಹೊಂದಿದ್ದರು ಸಂಗೊಳ್ಳಿ ರಾಯಣ್ಣ. ಈಗ ಕೂಡ ಅವರು ಹೋರಾಟಗಾರರಿಗೆ ಪ್ರೇರಣೆಯಾಗಿದ್ದಾರೆ ಎಂದು ಪತ್ರಕರ್ತ, ಚಿಂತಕ ರಾ.ಚಿಂತನ್ ಹೇಳಿದರು.

ನಗರದ ಶಿವಯೋಗಿ ಮಂದಿರದಲ್ಲಿ ಭಾನುವಾರ ಸಂಜೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ 194ನೇ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಹುತಾತ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಬ್ರಿಟಿಷ್ ಆಡಳಿತ ವಿರುದ್ಧ ಆರಂಭಿಕ ಹೋರಾಟಗಾರನಾದ ಕ್ರಾಂತಿಕಾರಿ ರಾಯಣ್ಣ ಒಂದಲ್ಲ ಒಂದು ದಿನ ನಮ್ಮ ನಾಡು ಬಿಳಿಯರ ಕಪಿಮುಷ್ಠಿಯಿಂದ ಬಿಡುಗಡೆ ಹೊಂದುವ ಭರವಸೆಯನ್ನು 150 ವರ್ಷ ಮೊದಲೇ ಕಂಡಿದ್ದರು. 1798ರ ಆಗಸ್ಟ್ 15ರಂದು ಹುಟ್ಟಿ, 1831ರ ಜ.26ರಂದು ಹುತಾತ್ಮನಾಗುವ ರಾಯಣ್ಣ, ರಾಷ್ಟ್ರೀಯ ಹಬ್ಬದ ದಿನದಂದು ಯಾವತ್ತಿಗೂ ನೆನಪಿನಲ್ಲಿ ಉಳಿಯುವುದು ಕನ್ನಡಿಗರಿಗೆಲ್ಲ ರೋಮಾಂಚನದ ಸಂಗತಿ ಎಂದರು.

ಜಿಲ್ಲಾ ಕರವೇ ಅಧ್ಯಕ್ಷ ರಾಮೇಗೌಡ ಮಾತನಾಡಿ, ಕಳೆದ ವರ್ಷ ಹೋರಾಟದ ಫಲವಾಗಿ ರಾಜ್ಯದ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ ನೀಡಿತು. ಡಾ.ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಉಗ್ರ ಹೋರಾಟಕ್ಕೆ ಮುಂದಾಗುತ್ತಿದ್ದೇವೆ. ದಾವಣಗೆರೆಯಲ್ಲೇ ವಿಶ್ವ ಕನ್ನಡ ಸಮ್ಮೇಳನ ಮಾಡುವ ನಿಟ್ಟಿನಲ್ಲಿ ಸರಕಾರ ದಿನಾಂಕ ಪ್ರಕಟಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ವಾಸುದೇವ ರಾಯ್ಕರ್ (ಸಮಾಜ ಸೇವಾ), ಮಂಜುನಾಥ ಪಂಡಿತ್ (ನಾಗರಿಕ ಸೇವಾ), ಡಾ. ಎಸ್.ವಿಜಯ ಕುಮಾರ (ವೈದ್ಯಕೀಯ), ಸದಾನಂದ ಹೆಗಡೆ (ಮಾಧ್ಯಮ ಕ್ಷೇತ್ರ), ಚಿದಾನಂದ (ದೃಶ್ಯ ಮಾಧ್ಯಮ) ಎಸ್.ಎಸ್. ಸಿದ್ದರಾಜು (ರಂಗಭೂಮಿ), ಎಂ.ಭೀಮೇಶ್ (ಕನ್ನಡಪರ), ರೈತಪರ ಕ್ಷೇತ್ರ ಎಂ.ಒ. ದೇವರಾಜ (ರೈತ), ಧರ್ಮರಾಜ್ (ಕಲಾವಿದ) ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಗೀತೆಗಳ ರಸಮಂಜರಿ, ಕ್ರಾಂತಿವೀರ ರಾಯಣ್ಣ ರೂಪಕ ಹಾಗೂ ಮಲ್ಲಕಂಬ ಸ್ಪರ್ಧೆ ನಡೆಸಲಾಯಿತು. ಈ ಸಂದರ್ಭ ಇನ್‌ಸೈಟ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ವಿನಯ್ ಕುಮಾರ, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಕಾಂತರಾಜ, ಪಾಲಿಕೆ ಸದಸ್ಯ ಕೆ.ಪ್ರಸನ್ನಕುಮಾರ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಕರವೇ ಜಿಲ್ಲಾ ಘಟಕದ ಈಶ್ವರ್, ಸಂತೋಷ, ಗೋಪಾಲ ದೇವರಮನಿ, ರವಿಕುಮಾರ, ಪೈಲ್ವಾನ್ ಜಬೀವುಲ್ಲಾ ಖಾನ್, ಮಂಜುಳಾ ಗಣೇಶ್, ಗಿರೀಶ್ ಕುಮಾರ್, ಜಬೀವುಲ್ಲಾ ಇದ್ದರು.

- - - -29ಕೆಡಿವಿಜಿ33:

ದಾವಣಗೆರೆಯಲ್ಲಿ ಕರವೇಯಿಂದ ನಡೆದ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.