ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಯಣ್ಣ ಹೆಸರಿಡಲು ಶ್ರಮಿಸುವೆ: ಶೆಟ್ಟರ್‌

| Published : Aug 16 2024, 12:48 AM IST

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಯಣ್ಣ ಹೆಸರಿಡಲು ಶ್ರಮಿಸುವೆ: ಶೆಟ್ಟರ್‌
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಯಣ್ಣನ ಹೆಸರಿಡುವಂತೆ ಹಲವು ವರ್ಷಗಳಿಂದ ಹೋರಾಟ ನಡೆದಿದೆ. ರಾಜ್ಯ ಸರ್ಕಾರ ಇದಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರದಲ್ಲಿ ಯಾವ ಇಲಾಖೆಗೆ ಮನವಿ ಸಲ್ಲಿಸಿದೆ, ಯಾವ ಹಂತದಲ್ಲಿದೆ ಎಂಬುದರ ಕುರಿತು ಶಾಸಕರು ನನಗೆ ಮಾಹಿತಿ ನೀಡಿದರೆ, ಮುಂದಿನ ಕ್ರಮಕೈಗೊಳ್ಳುವೆ ಎಂದು ಜಗದೀಶ ಶೆಟ್ಟರ್‌ ಭರವಸೆ ನೀಡಿದ್ದಾರೆ.

ಹುಬ್ಬಳ್ಳಿ:

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿಡಲು ಕೇಂದ್ರದ ಮಟ್ಟದಲ್ಲಿ ಪ್ರಾಮಾಣಿಕ ಕಾರ್ಯ ಮಾಡುವೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ಅವರು ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಗುರುವಾರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ ಜಯಂತಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಇಲ್ಲಿನ ವಿಮಾನ ನಿಲ್ದಾಣಕ್ಕೆ ರಾಯಣ್ಣನ ಹೆಸರಿಡುವಂತೆ ಹಲವು ವರ್ಷಗಳಿಂದ ಹೋರಾಟ ನಡೆದಿದೆ. ರಾಜ್ಯ ಸರ್ಕಾರ ಇದಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರದಲ್ಲಿ ಯಾವ ಇಲಾಖೆಗೆ ಮನವಿ ಸಲ್ಲಿಸಿದೆ, ಯಾವ ಹಂತದಲ್ಲಿದೆ ಎಂಬುದರ ಕುರಿತು ಶಾಸಕರು ನನಗೆ ಮಾಹಿತಿ ನೀಡಿದರೆ, ಮುಂದಿನ ಕ್ರಮಕೈಗೊಳ್ಳುವೆ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕೆಲವರು ರಾಯಣ್ಣನ ಇತಿಹಾಸ ತಿರುಚಲು ಮುಂದಾಗಿದ್ದಾರೆ. ಒಡೆದಾಳುವ ನೀತಿ ಹಾಗೂ ಬ್ರಿಟಿಷ್‌ ಮನಸ್ಥಿತಿ ಉಳ್ಳವರು ಈಗಲೂ ಇದ್ದಾರೆ. ಅಂತಹವರನ್ನು ದೂರವಿಡಬೇಕು ಎಂದರು.

ಶಾಸಕ ಎನ್.ಎಚ್. ಕೋನರಡ್ಟಿ ಮಾತನಾಡಿದರು. ಇದೇ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ವರು, ಪತ್ರಿಕಾ ರಂಗದಲ್ಲಿ ಸಾಧನೆಗೈದ 10 ಜನರಿಗೆ, ಕೇಂದ್ರ ವಿಮಾನಯಾನ ಇಲಾಖೆಯಲ್ಲಿ ಸಾಧನೆಗೈದ ಇಬ್ಬರು, ಪೊಲೀಸ್ ಇಲಾಖೆಯ 8 ಸಾಧಕರು, ಕಲಾ ಕ್ಷೇತ್ರದಲ್ಲಿ ಮೂವರಿಗೆ, ಸಮಾಜ ಸೇವೆ ಕ್ಷೇತ್ರದಲ್ಲಿ 7 ಜನರಿಗೆ, ಸಾರಿಗೆ ಇಲಾಖೆಯ 6 ಜನರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 11 ಮಹಿಳೆಯರಿಗೆ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸಿದರು. ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ, ಮನಸೂರು ಮಠದ ಬಸವರಾಜ ದೇವರು, ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ, ವಿಜಯಕುಮಾರ ಅಪ್ಪಾಜಿ, ಮಲ್ಲಿಕಾರ್ಜುನ ತಾಲೂರ, ಅಲ್ತಾಫ್ ಹಳ್ಳೂರ, ಶಿವಾನಂದ ಕರಿಗಾರ ಸೇರಿದಂತೆ ಹಲವರಿದ್ದರು.