ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಹದಿಹರೆಯದ ವಯಸ್ಸಿನಲ್ಲಿ ಮನಸೋ ಇಚ್ಛೆಯಂತೆ ಮೋಟಾರ್ ಬೈಕ್‌ಗಳನ್ನು ಓಡಿಸುವುದು ಮತ್ತು ಉಪಯೋಗಿಸುವುದು ಕಾನೂನು ಬಾಹಿರ. ಇದರಿಂದ ಅನಾಹುತಗಳು ಸಂಭವಿಸಿದರೆ ದಾಖಲಾತಿ ಹೊಂದಿರುವ ವಾರಸುದಾರರಿಗೆ ಕಾನೂನಿನ ಅನ್ವಯ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು ಎಂದು ಆರಕ್ಷಕ ಉಪನಿರೀಕ್ಷಕರಾದ ಕಾವ್ಯ ಅವರು ಎಚ್ಚರಿಸಿದರು.ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಕಾನೂನು ಅರಿವು ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಯಸ್ಸಿನ ಹದಿಹರೆಯದಲ್ಲಿ ಮನಸೋ ಇಚ್ಛೆಯಂತೆ ಬೈಕ್ ಓಡಿಸುವುದು ಕಾನೂನು ಬಾಹಿರವಾಗಿದ್ದು, ಅನಾಹುತಗಳು ಸಂಭವಿಸಿದರೆ ಕಾನೂನಿನ ಅನ್ವಯ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಮೋಟಾರ್ ಬೈಕ್‌ಗಳನ್ನು 18 ವರ್ಷದ ನಂತರ ದಾಖಲಾತಿಯೊಂದಿಗೆ ಉಪಯೋಗಿಸುವುದು ಸೂಕ್ತ ಎಂದು ಅರಿವು ಮೂಡಿಸಿದರು.
ಬೈಕ್ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು, ಕಾರುಗಳಲ್ಲಿ ಸೀಟ್ ಬೆಲ್ಟ್‌ಗಳನ್ನು ಬಳಸಿ ಕಾನೂನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಇದರಿಂದ ವ್ಯಕ್ತಿಯ ಜೀವ ಮತ್ತು ಜೀವನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರಿಂದ ತಾವೆಲ್ಲರೂ ಇದರ ಬಗ್ಗೆ ನಿಮ್ಮ ಪೋಷಕರಿಗೆ ಹಾಗೂ ನಿಮ್ಮ ನೆರೆಯವರಿಗೆ ತಿಳಿವಳಿಕೆಯನ್ನು ಮೂಡಿಸುವುದು ಅತಿ ಮುಖ್ಯ ಎಂದರು.ವಿದ್ಯಾರ್ಥಿನಿಯರನ್ನು ಕುರಿತು ಮಾತನಾಡಿ, ಆಕರ್ಷಣೆಗೆ ಒಳಗಾಗುತ್ತಿರುವ ಹೆಣ್ಣು ಮಕ್ಕಳು 18 ವರ್ಷಕ್ಕಿಂತ ಮುಂಚಿತವಾಗಿ ಪ್ರೀತಿ, ಪ್ರೇಮ, ಮದುವೆಗಳಲ್ಲಿ ತೊಡಗಿದ್ದು ಇತ್ತೀಚೆಗೆ ಪೋಕ್ಸೋ ಕಾಯ್ದೆಗಳು ಹೆಚ್ಚಾಗಲು ಕಾರಣವಾಗಿದೆ. ಆದ್ದರಿಂದ ವಿದ್ಯಾರ್ಥಿನಿಯರು ಓದಿನ ಕಡೆಗೆ ಗಮನ ಕೊಟ್ಟು ತಮ್ಮ ಗುರಿಯನ್ನು ಸಾಧಿಸಿ ನಿಮ್ಮನ್ನು ಸಾಕಿದ ತಂದೆ ತಾಯಿಯರಿಗೆ ಒಳ್ಳೆಯ ಮಕ್ಕಳಾಗಿ ಉತ್ತಮ ಭವಿಷ್ಯದ ಕಡೆಗೆ ಗಮನವನ್ನು ಹರಿಸಬೇಕು.
ತಂದೆ ತಾಯಿಯರು ಮತ್ತು ನಮ್ಮ ದೇಶ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳ ಮೇಲೆ ಬಂಡವಾಳವನ್ನು ಹೂಡಿದ್ದು ಅದರ ಲಾಭ ದೇಶಕ್ಕೆ ಸದುಪಯೋಗವಾಗಬೇಕು. ಅದರ ವ್ಯರ್ಥವನ್ನ ಮಾಡದೆ ಚಿಂತಿಸಿ ಭವಿಷ್ಯದ ಕಡೆಗೆ ಸಾಗಬೇಕಾಗಿದೆ. ಅಲ್ಲದೆ ಇತ್ತೀಚೆಗೆ ನಾವು ಬಳಸುವ ಸಾಮಾಜಿಕ ಜಾಲತಾಣಗಳಿಂದ ದುರುಪಯೋಗಗಳೇ ಜಾಸ್ತಿಯಾಗಿದ್ದು ಸೈಬರ್ ಕೃತ್ಯಗಳು ತುಂಬಾ ನಡೆಯುತ್ತಿರುವುದರಿಂದ ತಾವೆಲ್ಲರೂ ಜಾಗೃತರಾಗಿ ಹಾಗೂ ಪೋಷಕರಿಗೆ ಅರಿವನ್ನ ಮೂಡಿಸುವುದು ನಿಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಅಲ್ಲದೆ ಬ್ಯಾಂಕ್ ಎಟಿಎಂಗಳಲ್ಲಿ ಹಣವನ್ನು ಪಡೆಯುವಾಗ ದುರುಪಯೋಗಗಳು ಅನಾವಶ್ಯಕ ವ್ಯಕ್ತಿಗಳಿಂದ ದಿನನಿತ್ಯ ಹೆಚ್ಚಾಗಿರುವುದರಿಂದ ನಿಮ್ಮ ಪೋಷಕರಿಗೆ ನಿಮ್ಮ ಮನೆಯಲ್ಲಿರುವ ವೃದ್ಧರಿಗೆ ತಿಳಿವಳಿಕೆ ಮೂಡಿಸುವುದು ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಮಹೇಶ್ ಹೊಡೆನೂರು ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾನೂನಿನ ಅರಿವು ವಿದ್ಯಾರ್ಥಿಗಳಿಗೆ ಅತಿ ಮುಖ್ಯವಾಗಿ ಬೇಕಾಗಿದ್ದು ಜೊತೆಗೆ ಎಲ್ಲ ಸಾರ್ವಜನಿಕರು ಕಾನೂನು ಪಾಲನೆ ಮೂಡುವುದರ ಮೂಲಕ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು, ಆರಕ್ಷಕ ಸಿಬ್ಬಂದಿ ವರ್ಗದವರು ಹಾಜರಿದ್ದರು.