ನೊಂದವರ, ಶೋಷಿತರಿಗೆ ನ್ಯಾಯ ಕೊಡಿಸಲು ಆರ್‌ಸಿಬಿ ಅಸ್ತಿತ್ವಕ್ಕೆ

| Published : Oct 08 2024, 01:07 AM IST

ಸಾರಾಂಶ

ಅನ್ಯಾಯ, ಅಪ್ಪ-ಮಕ್ಕಳ ಸರ್ವಾಧಿಕಾರಿ ಧೋರಣೆ ಹಾಗೂ ಸ್ವಜನ ಪಕ್ಷಪಾತದಿಂದ ಬಿಜೆಪಿ ಕಾಪಾಡಲು ಸ್ವಾತಂತ್ರ್ಯವಾಗಿ ಚುನಾವಣೆ ಎದುರಿಸಿದ್ದೆ. ಬಿಜೆಪಿ ಶುದ್ಧೀಕರಣ ಆಗಬೇಕು ಎಂಬುದು ನನ್ನ ಉದ್ದೇಶವಾಗಿತ್ತು ಎಂದು ಈಶ್ವರಪ್ಪ ಹೇಳಿದ್ದಾರೆ.

ಹುಬ್ಬಳ್ಳಿ:

ಸಮಾಜದಲ್ಲಿ ನೊಂದವರ, ಶೋಷಿತರ, ಬಡವರ ಹಾಗೂ ಹಿಂದುಳಿದವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ (ಆರ್‌ಸಿಬಿ) ಬ್ರಿಗೇಡ ಹೊಸ ಸಂಘಟನೆ ಅಸ್ತಿತ್ವಕ್ಕೆ ತರಲಾಗುತ್ತಿದೆ. ಅ. 20ರಂದು ಬಾಗಲಕೋಟೆಯಲ್ಲಿ ಹಲವು ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಸ್ಪಷ್ಟ ರೂಪ ಕೊಡಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

ಆರ್‌ಸಿಬಿ ಸ್ಥಾಪನೆ ಸಂಬಂಧ ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಉತ್ತರ ಕರ್ನಾಟಕದ ಭಾಗದ ವಿವಿಧ ಸಮುದಾಯಗಳ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಷ್ಟ್ರವಿರೋಧಿಗಳ ವಿರುದ್ಧ:

ಹೊಸ ಸಂಘಟನೆ ಹುಟ್ಟುಹಾಕುವಂತೆ ಹಲವು ಸಾಧು-ಸಂತರು ಮಾರ್ಗದರ್ಶನ, ಸಲಹೆ ನೀಡಿದ ಹಿನ್ನೆಲೆಯಲ್ಲಿ ಈ ಸಂಘಟನೆ ಹುಟ್ಟು ಹಾಕಲಾಗುತ್ತಿದೆ. ಎಲ್ಲ ಸಮುದಾಯದ ಜನರು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಇದಕ್ಕೆ ನಾಡಿನ ವಿವಿಧ ಮಠಾಧೀಶರು ಬೆನ್ನೆಲುಬಾಗಿ ನಿಂತಿದ್ದಾರೆ. ಜಾತ್ಯತೀತ, ಪಕ್ಷಾತೀತ ಮತ್ತು ರಾಜಕೀಯೇತರವಾಗಿ ಬ್ರಿಗೇಡ್ ಕೆಲಸ ಮಾಡಲಿದ್ದು, ಸಮಾಜ ವಿರೋಧಿ, ರಾಷ್ಟ್ರ ವಿರೋಧಿಗಳ ವಿರುದ್ಧ ಕಾರ್ಯ ನಿರ್ವಹಿಸಲಿದೆ ಎಂದರು.

ಅ. 20ರಂದು ಬೆಳಗ್ಗೆ 11ಕ್ಕೆ ಬಾಗಲಕೋಟೆಯ ಚರಂತಿಮಠ ಸಮಯದಾಯ ಭವನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬೃಹತ್ ಸಭೆಯಲ್ಲಿ ಕೂಡಲ ಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀ, ಮಾದಲಿಂಗ ಮಹಾರಾಜರು, ಮಹಾಲಿಂಗರಾಯ ಸ್ವಾಮೀಜಿ ಸೇರಿದಂತೆ 35ಕ್ಕೂ ಅಧಿಕ ಮಠಾಧೀಶರು ಭಾಗವಹಿಸಲಿದ್ದಾರೆ. ನಾಡಿನ ಮೂಲೆ ಮೂಲೆಯಿಂದ 2 ಸಾವಿರಕ್ಕೂ ಹೆಚ್ಚು ವಿವಿಧ ಸಮಾಜದ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಲಿದ್ದಾರೆ.

ತಪ್ಪು ಮಾಡಿದೆ:

ಈ ಹಿಂದೆಯೂ ರಾಯಣ್ಣ ಬ್ರಿಗೇಡ್ ಸ್ಥಾಪನೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು, ಅಮಿತ್ ಶಾ ಮೂಲಕ ಸಂಘಟನೆಯನ್ನು ಕೈಬಿಡುವಂತೆ ನನಗೆ ಸೂಚನೆ ಕೊಡಿಸಿದ್ದರು. ಆದರೆ, ಅಂದು ಸಂಘಟನೆ ಕೈಬಿಟ್ಟು ತಪ್ಪು ಮಾಡಿದೆ ಎಂದು ಈಗ ಎನ್ನಿಸುತ್ತಿದೆ. ಹೀಗಾಗಿ ರಾಣಿ ಚೆನ್ನಮ್ಮ, ರಾಯಣ್ಣ ಬ್ರಿಗ್ರೇಡ್ ಕಾರ್ಯವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

ಅನ್ಯಾಯ, ಅಪ್ಪ-ಮಕ್ಕಳ ಸರ್ವಾಧಿಕಾರಿ ಧೋರಣೆ ಹಾಗೂ ಸ್ವಜನ ಪಕ್ಷಪಾತದಿಂದ ಬಿಜೆಪಿ ಕಾಪಾಡಲು ಸ್ವಾತಂತ್ರ್ಯವಾಗಿ ಚುನಾವಣೆ ಎದುರಿಸಿದ್ದೆ. ಬಿಜೆಪಿ ಶುದ್ಧೀಕರಣ ಆಗಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಈಗ ಯಾರ ಮಾತನ್ನೂ ಕೇಳುವ ಪ್ರಶ್ನೆಯೇ ಇಲ್ಲ. ನಾಡಿನ ಹಿತ ಬಯಸುವ ಸಾಧು-ಸಂತರ ಮಾರ್ಗದರ್ಶನದಲ್ಲಿ ಬ್ರಿಗೇಡ್ ಆರಂಭಿಸುತ್ತೇವೆ. ರಾಜಕೀಯವಾಗಿ ನನಗೆ ಆದ ಮೋಸವನ್ನು ನಾಡಿನ ಜನ ಗಮನಿಸಿದ್ದಾರೆ. ಸರಿಯಾದ ಸಮಯಕ್ಕೆ ಉತ್ತರ ನೀಡಲಿದ್ದಾರೆ ಎಂದರು.

ಈ ವೇಳೆ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಮಾಜಿ ಶಾಸಕರಾದ ರಘುಪತಿ ಭಟ್, ವೀರಭದ್ರಪ್ಪ ಹಾಲಹರವಿ, ಬಂಜಾರ ಸಮಾಜದ ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ, ಕೆ.ಎಸ್‌. ಈಶ್ವರಪ್ಪ ಪುತ್ರ ಕಾಂತೇಶ, ಅಹಿಂದ ನಾಯಕ ಮುಕುಡಪ್ಪ, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಸೇರಿದಂತೆ ಹಲವರಿದ್ದರು.