ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬಿಪಿಎಲ್ ಕಾರ್ಡ್‌ದಾರರ ಪರಿಷ್ಕರಣೆ ವೇಳೆ ಅರ್ಹ ಫಲಾನುಭವಿಗಳ ಹೆಸರು ಕೈ ಬಿಟ್ಟು ಹೋಗಿದೆ. ಇನ್ನೊಂದು ವಾರದೊಳಗೆ ಅವರ ಹೆಸರುಗಳನ್ನು ಪುನರ್ ಸೇರ್ಪಡೆ ಮಾಡಲಾಗುವುದು ಎಂದು ಕರ್ನಾಟಕ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಯುಳ್ಳವರು, ಕಾರನ್ನು ಹೊಂದಿರುವವರು, ಆದಾಯ ತೆರಿಗೆ (ಐಟಿ) ಕಟ್ಟುವ ಲಕ್ಷಾಂತರ ಜನರು ಬಿಪಿಎಲ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಇವರನ್ನು ಅನರ್ಹಗೊಳಿಸಲಾಗುತ್ತಿದೆ ಎಂದರು.
ಬಿಪಿಎಲ್ ಕಾರ್ಡ್‌ಗಳ ಪರಿಶೀಲನೆ ವೇಳೆ ಅರ್ಹ ಫಲಾನುಭವಿಗಳ ಹೆಸರುಗಳು ಸಹ ಬಿಪಿಎಲ್ ಕಾರ್ಡ್ ಪಟ್ಟಿಯಿಂದ ಕೈಬಿಟ್ಟು ಹೋಗಿದೆ. ಇದನ್ನು ಸರಿಪಡಿಸಲು ಆಹಾರ ಇಲಾಖೆ ಹಾಗೂ ಆಯೋಗ ಮುಂದಾಗಿದೆ. ಈ ಬಗ್ಗೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಅಧಿಕಾರಿಗಳು ಸರಿಪಡಿಸಲು ಎರಡು ದಿನ ಸಮಾಯಾವಕಾಶ ಕೇಳಿದ್ದಾರೆ. ಆದರೆ, ನಾವು ಒಂದು ವಾರವೇ ಸಮಯ ನೀಡಿದ್ದು, ಒಟ್ಟಿನಲ್ಲಿ ಈ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯಬೇಕೆಂದು ಹೇಳಿದರು.ಹಾಸ್ಟೆಲ್, ಹೋಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಹಕರಿಗೆ ಉತ್ಕೃಷ್ಟವಾದ ಆಹಾರ ಸಿಗಬೇಕೆಂಬುದು ಆಹಾರ ಆಯೋಗದ ಧ್ಯೇಯವಾಗಿದೆ. ಆ ನಿಟ್ಟಿನಲ್ಲಿ ನನ್ನ ನೇತೃತ್ವದಲ್ಲಿ ಆಯೋಗದ ಸದಸ್ಯರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ ಎಂದರು.
ಯಾವ ಹೋಟೆಲ್, ಹಾಸ್ಟೆಲ್ ಗಳಲ್ಲಿ ನ್ಯೂನ್ಯತೆ ಕಂಡು ಬಂದಿದೆ. ಅಲ್ಲಿ ಕೆಲವರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಕೆಲವರಿಗೆ ಎಚ್ಚರಿಕೆ ನೀಡಲಾಗಿದೆ. ನಾನು ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯಾದ್ಯಂತ ಈವರೆಗೆ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ನ್ಯೂನ್ಯತೆ ಕಂಡು ಬಂದಿರುವ ಹಾಸ್ಟೆಲ್, ಹೋಟೆಲ್, ಅಂಗನವಾಡಿ, ಪಡಿತರ ಅಂಗಡಿ, ಗೋಧಾಮುಗಳಿಗೆ ಭೇಟಿ ಕೊಟ್ಟು ಆಹಾರದ ಗುಣಮಟ್ಟ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.ಮಂಡ್ಯದ ಬೂದನೂರು ಗ್ರಾಮದ ಪೌಷ್ಟಿಕ ಆಹಾರ ತಯಾರಿಕಾ ಘಟಕದಲ್ಲಿ ಅಧಿಕಾರಿಗಳು ಆಹಾರ ಗುಣಮಟ್ಟದಲ್ಲಿ ಲೋಪ ಎಸಗಿದ್ದರಿಂದ ಕಳೆದ ಬಾರಿ ಭೇಟಿ ನೀಡಿದ್ದಾಗ ಐದು ಮಂದಿಯನ್ನು ಅಮಾನತು ಮಾಡಲಾಗಿತ್ತು. ಆದರೆ, ಮತ್ತೆ ಅಲ್ಲಿಗೆ ತೆರಳಿ ಮರು ಪರಿಶೀಲಿಸುವಾಗ ಅಧಿಕಾರಿಗಳು ತಪ್ಪೊಪ್ಪಿಗೆ ಪತ್ರ ನೀಡಿರುವುದರಿಂದ ಅವರಿಗೆ ಮತ್ತೊಂದು ಅವಕಾಶ ನೀಡಿ, ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು.
ಆಹಾರ ಗುಣಮಟ್ಟದಲ್ಲಿ ಮತ್ತೆ ಲೋಪ ಎಸಗಿದರೆ ಮತ್ತೆ ನಿಮ್ಮ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಬಂದಿದ್ದೇನೆ. ಮಂಡ್ಯ ಮಾತ್ರವಲ್ಲದೇ ಪೌಷ್ಟಿಕ ಆಹಾರ ತಯಾರಿಕಾ ಘಟಕ ಜಿಲ್ಲೆಯ ಪಾಂಡವಪುರ, ಮದ್ದೂರು, ಮಳವಳ್ಳಿಯಲ್ಲಿದ್ದು, ಶೀಘ್ರವೇ ಅಲ್ಲಿಗೂ ಸಹ ಭೇಟಿ ಕೊಟ್ಟು ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸುವುದಾಗಿ ಹೇಳಿದರು.ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಘಟಕಗಳಿಗೂ ಭೇಟಿ ಕೊಟ್ಟು ಲೋಪದೋಷಗಳಿದ್ದರೆ ಅವುಗಳನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗುವುದಾಗಿ ತಿಳಿಸಿದರು.