ಸಾರಾಂಶ
- ಜಯಕರ್ನಾಟಕ ಸಂಘಟನೆ 153 ದಿನಗಳ ಹೋರಾಟಕ್ಕೆ ತಾತ್ಕಾಲಿಕ ಜಯ - - - ಕನ್ನಡಪ್ರಭ ವಾರ್ತೆ ಹರಿಹರ
ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿರುವ ವಾಣಿಜ್ಯ ಮಳಿಗೆಗಳ ಕರಾರು ಅವಧಿ ಮುಗಿದಿದ್ದು, ತಕ್ಷಣ ಮರುಹರಾಜು ನಡೆಸುವಂತೆ ಜಯ ಕರ್ನಾಟಕ ಸಂಘಟನೆಯಿಂದ ನಡೆಸುತ್ತಿದ್ದ 153 ದಿನಗಳ ಹೋರಾಟಕ್ಕೆ ಜಯ ಸಿಕ್ಕಿದ್ದು, ತಾರ್ಕಿತ ಅಂತ್ಯ ಸಿಗುವ ಲಕ್ಷಣಗಳು ಕಂಡುಬರುತ್ತಿವೆ. ಈ ಬಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ರಸ್ತೆ ಪಕ್ಕ ಇರುವ 9 ಮಳಿಗೆ ಹಾಗೂ ಮೊದಲ ಮಹಡಿಯಲ್ಲಿರುವ 15 ಮಳಿಗೆಗಳು ಸೇರಿದಂತೆ 24 ಮಳಿಗೆಗಳ ಹರಾಜು ಪ್ರಕಟಣೆ ಹೊರಡಿಸಿದೆ. ಉಳಿದ 24 ಮಳಿಗೆದಾರರು ನ್ಯಾಯಾಲಯದ ಮೊರೆಹೋಗಿದ್ದಾರೆ.ಅರ್ಜಿ ಮೊತ್ತ ₹500 ಇದ್ದು, ಠೇವಣಿ ಮೊತ್ತ ₹1ಲ ಕ್ಷ ನಿಗದಿಪಡಿಸಲಾಗಿದೆ. ಅರ್ಜಿಗಳ ವಿತರಣೆ ಮಾ.6ರಿಂದ ಪ್ರಾರಂಭವಾಗಿದೆ. ಮಾ.8 ರವರೆಗೆ (ಸರ್ಕಾರಿ ರಜಾ ದಿನಗಳಲ್ಲಿಯೂ ಲಭ್ಯ) ಅರ್ಜಿ ನೀಡಲಿದ್ದಾರೆ. ಅರ್ಜಿಗಳನ್ನು ಸಲ್ಲಿಸಲು ಮಾ.10ರ ಸಂಜೆ 5 ಗಂಟೆ ಗಡುವು ನೀಡಲಾಗಿದೆ. ಮಾ.13ರಂದು ತಾಲೂಕು ಕ್ರೀಡಾಂಗಣ ಕಚೇರಿಯಲ್ಲಿ ಬೆಳಗ್ಗೆ 11.30ಕ್ಕೆ ಹರಾಜು ಪ್ರಕ್ರಿಯೆ ನಡೆಯಲಿದೆ.
ಜಯಕರ್ನಾಟಕ ಸಂಘಟನೆ ಹೋರಾಟ:ಈ ಹಿಂದೆ ಹರಿಹರದ ಮಹಾತ್ಮ ಗಾಂಧಿ ಕ್ರೀಡಾಂಗಣ ಮುಂಭಾಗದಲ್ಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 50 ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಲಾಗಿತ್ತು. ಆದರೆ ಬಾಡಿಗೆ ಕರಾರು ಅವಧಿ ಮುಗಿದರೂ ಮರುಹರಾಜು ಪ್ರಕ್ರಿಯೆ ನಡೆದಿಲ್ಲ. ಮಳಿಗೆ ಬಾಡಿಗೆ ಪಡೆದವರು ಇತರರಿಗೆ ಹೆಚ್ಚಿನ ದರಕ್ಕೆ ಒಳಬಾಡಿಗೆ ನೀಡಿದ್ದಾರೆ. ಅಲ್ಲದೇ, ಕ್ರೀಡಾಂಗಣದ ಮಳಿಗೆಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅನೇಕರು ತಾವು ನಡೆಸುತ್ತಿರುವ ವ್ಯಾಪಾರಕ್ಕೆ ಪರವಾನಗಿ ಪಡೆದಿಲ್ಲ ಎಂದು ಜಯಕರ್ನಾಟಕ ಸಂಘಟನೆ ನಿರಂತರ 153 ದಿನಗಳವರೆಗೆ ಧರಣಿ ಸತ್ಯಾಗ್ರಹ ನಡೆಸುತ್ತಿದೆ.
ಮಳಿಗೆ ಮರುಹರಾಜು ನಡೆಯಬೇಕು ಎಂದು ನಗರಸಭಾ ಪೌರಾಯುಕ್ತ, ತಹಸೀಲ್ದಾರ್, ಜಿಲ್ಲಾಧಿಕಾರಿ, ರಾಜ್ಯ ಜಿಲ್ಲಾ ಕ್ರೀಡಾ ಆಯುಕ್ತರು. ಸಚಿವರು, ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಂಘಟನೆ ಅಧ್ಯಕ್ಷ ಎಸ್. ಗೋವಿಂದ್, ಪ್ರಧಾನ ಕಾರ್ಯದರ್ಶಿ ಸಿ.ಎಚ್. ಸುನೀಲ್ ಕುಮಾರ್, ಉಪಾಧ್ಯಕ್ಷ ಆನಂದ ಎಂ.ಆರ್., ಸಂಘಟನಾ ಕಾರ್ಯದರ್ಶಿ ಎಂ. ಮಧು, ನಗರ ಹಾಗೂ ಗ್ರಾಮಾಂತರ ವಿದ್ಯಾರ್ಥಿ ಘಟಕದ ಆಧ್ಯಕ್ಷ ಶ್ರೀನಿವಾಸ, ಭರತ್ ಭಾನುವಳ್ಳಿ, ಮನವಿ ಸಲ್ಲಿಸಿದ್ದರು. ವಿವಿಧ ಸಂಘಟನೆಗಳು ಸತ್ಯಾಗ್ರಹಕ್ಕೆ ಸಹಕಾರ ನೀಡಿದ್ದವು.- - - ಕೋಟ್ ಸುದೀರ್ಘ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ಪ್ರಸ್ತುತ ಮಳಿಗೆ ವಿಚಾರ ಹರಾಜು ಪ್ರಕಟಣೆ ಹಂತದಲ್ಲಿದೆ. ಹರಾಜು ಪ್ರಕ್ರಿಯೆ ಮುಗಿದು, ಮಳಿಗೆ ಖಾಲಿ ಮಾಡಿಸುವ ತನಕ ಧರಣಿ ಮುಂದುವರಿಯಲಿದೆ. ಉಳಿದ ಮಳಿಗೆಗಳ ಮಾಲೀಕರು ನ್ಯಾಯಾಲಯ ಮೆಟ್ಟಿಲೇರಿದ್ದು, ಕಾನೂನಾತ್ಮಕ ಹೋರಾಟ ಕೈಗೊಳ್ಳಲಾಗುವುದು
- ಎಸ್.ಗೋವಿಂದ್, ತಾಲೂಕು ಅಧ್ಯಕ್ಷ, ಜಯ ಕರ್ನಾಟಕ ಸಂಘಟನೆ- - - -06ಎಚ್‍ಆರ್‍ಆರ್03:
ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿರುವ ವಾಣಿಜ್ಯ ಮಳಿಗೆಗಳ ಸಮುಚ್ಛಯ.