ಸಾರಾಂಶ
- ಲಂಬಾಣಿ ಸಮುದಾಯ ಪ್ರತಿಭಟನೆಯಲ್ಲಿ ಸರ್ದಾರ ಸೇವಾಲಾಲ್ ಶ್ರೀ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯ ಸರ್ಕಾರ ಪ್ರಸ್ತುತ ನ್ಯಾ. ನಾಗಮೋಹನ್ ದಾಸ್ ವರದಿಯಂತೆ ಕೊರಚ, ಕೊರಮ, ಭೋವಿ, ಲಂಬಾಣಿ ಹಾಗೂ ಇತರೆ ಉಪ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆಯಲ್ಲಿ ತೆಗೆದುಕೊಂಡಿರುವ ತೀರ್ಮಾನ ಖಂಡಿಸಿ ಸೋಮವಾರ ಲಂಬಾಣಿ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ, ತೀರ್ಮಾನವನ್ನು ಪುನರ್ ಪರಿಶೀಲಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.ಸಮುದಾಯದ ಗುರುಗಳಾದ ಚಿತ್ರದುರ್ಗದ ಸರ್ದಾರ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಪರಿಶಿಷ್ಟ ಸಮುದಾಯ 101 ಜಾತಿಗಳ ದತ್ತಾಂಶ ಪರಿಗಣಿಸಿ, ಕೇವಲ 18 ಉಪ ಜಾತಿಗಳಿರುವ ಎಡಗೈ ಸಮುದಾಯದವರಿಗೆ ಶೇ.6ರಷ್ಟು ಮೀಸಲಾತಿ, ಇದೇ ರೀತಿ 20 ಜಾತಿ ಸಮುದಾಯಗಳಿಗೆ ಶೇ.6 ಮೀಸಲಾತಿ ಕಲ್ಪಿಸಿದೆ. ಆದರೆ ಅಲೆಮಾರಿ ಹಾಗೂ ಸ್ಪರ್ಶ ಜನಸಮುದಾಯ ವರ್ಗಕ್ಕೆ ಶೇ.5ರಷ್ಚು ಮೀಸಲಾತಿ ಕಲ್ಪಿಸಿ, ಇದರಲ್ಲಿ 63 ಜಾತಿಗಳನ್ನು ಸೇರಿಸಿ ಮೀಸಲಾತಿ ನೀಡಿ ಪರಿಷ್ಕೃತ ವರ್ಗೀಕರಣಕ್ಕೆ ಸರ್ಕಾರ ಶೀಫಾರಸು ಖಂಡನೀಯ ಎಂದರು.
ಸರ್ಕಾರ ಕೂಡಲೇ ಈ ಶಿಫಾರಸು ಹಾಗೂಳೊಳಮೀಸಲಾತಿ ವರ್ಗೀಕರಣದ ಬಗ್ಗೆ ಪುನರ್ ಪರಿಶೀಲನೆ ನಡೆಸಿ ಒಳಮೀಸಲಾತಿಯಲ್ಲಿ ಅನ್ಯಾಯವಾಗಿರುವ, ಅದರಲ್ಲೂ ವಿಶೇಷವಾಗಿ ಲಂಬಾಣಿ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.ತಾಲೂಕು ಲಂಬಾಣಿ ಸಮಾಜ ಅಧ್ಯಕ್ಷ ಪ್ರಭುದೇವ ನಾಯ್ಕ ಮಾತನಾಡಿ, ಪ್ರಸ್ತುತ ಸರ್ಕಾರದ ಈ ಮೀಸಲಾತಿ ಹಂಚಿಕೆಯಿಂದ ಇಡೀ ಲಂಬಾಣಿ (ಬಂಜಾರ) ಸಮುದಾಯದ ಮುಂದಿನ ಭವಿಷ್ಯದ ಮಕ್ಕಳ ಜೀವನಕ್ಕೆ ಮರಣ ಶಾಸನ ಬರೆದಂತಾಗುತ್ತಿದೆ. ಇದು ಲಂಬಾಣಿ ಸಮಾಜದ ಭವಿಷ್ಯದ ಪ್ರಶ್ನೆ. ಸರ್ಕಾರ ಕೂಡಲೇ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ, ವರದಿಯ ಶಿಫಾರಸುಗಳ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ತಾಂಡ ಅಭಿವೃದ್ಧಿ ನಿಗಮ ಮಾಜಿ ಸದಸ್ಯ ಮಾರುತಿ ನಾಯ್ಕ ಮಾತನಾಡಿ. ಇಲ್ಲಿ ಇಡೀ ಸಮಾಜದವರು ಪಕ್ಷಬೇಧ ಮರೆದು ಲಂಬಾಣಿ ಸಮಾಜಕ್ಕೆ ಅಗಿರುವ ಅನ್ಯಾಯ ವಿರುದ್ಧ ಹೋರಾಟ ನಡೆಸಲೇಬೇಕಾಗಿದೆ. ಸರ್ಕಾರದ ಈ ಮೀಸಲಾತಿ ನೀತಿಗೆ ತಮ್ಮ ಸಮಾಜದ ಸಹಮತವಿಲ್ಲ ಎಂದು ಹೇಳಿದರು.ನ್ಯಾಮತಿ ತಾಲೂಕು ಅಧ್ಯಕ್ಷ ಪ್ರಕಾಶ್ ನಾಯ್ಕ ಮಾತನಾಡಿ, ಬಹುಪಾಲು ಲಂಬಾಣಿ ಸಮುದಾಯವು ಅನೇಕ ದಶಕಗಳಿಂದ ಗುಳೆ ಹೋಗುವ ಪದ್ಧತಿ ಮತ್ತು ದೌರ್ಜನ್ಯದ ಜೀವನ ನಡೆಸುತ್ತಿದೆ. ಕೇವಲ ಹಳ್ಳಿಗಳು, ಗುಡ್ಡಗಾಡು ಪ್ರದೇಶಗಳಲ್ಲಿ ವಾಸ ಮಾಡುವ ಏಕೈಕ ಜನಾಂಗವೆಂದರೆ ಅದು ಲಂಬಾಣಿ ಜನಾಂಗವಾಗಿದೆ. ಇಂದಿಗೂ ಅದೆಷ್ಟೋ ತಾಂಡಗಳು ಕಂದಾಯ ಗ್ರಾಮಗಳಾಗದೇ ಆರ್ಥಿಕವಾಗಿ ಹಿಂದುಳಿದಿವೆ ಎಂದರು.
ವಕೀಲ ಮಲ್ಲೇಶ್ ನಾಯ್ಕ, ಬಂಜಾರ್ ಸಮಾಜದ ತಾಲೂಕು ಮಾಜಿ ಅಧ್ಯಕ್ಷ ಅಂಜುನಾಯ್ಕ, ಜುಂಜಾನಾಯ್ಕ ಸೇರಿದಂತೆ ಹಲವಾರು ಮುಖಂಡರು ಮಾತನಾಡಿದರು. ಸುರೇಂದ್ರ ನಾಯ್ಕ ಭೀಮಾನಾಯ್ಕ,ಸೇವಾನಾಯ್ಕ ಮತ್ತಿತರ ಮುಖಂಡರು ಇದ್ದರು.ಹೊನ್ನಾಳಿ ಪಟ್ಟಣದ ಟಿ.ಬಿ. ವೃತ್ತದಿಂದ ಬಂಜಾರ ಸಮಾಜದ ಸಹಸ್ರಾರು ಜನರು ಮೆರವಣಿಗೆ ನಡೆಸಿ, ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿದರು. ರಸ್ತೆ ತಡೆ ಮಾಡಿದ ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ರಾಜೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
- - - -25ಎಚ್.ಎಲ್.ಐ1.ಜೆಪಿಜಿ:ಕೊರಚ, ಕೊರಮ, ಭೋವಿ, ಲಂಬಾಣಿ ಹಾಗೂ ಇತರೆ ಉಪ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆ ತೀರ್ಮಾನ ಖಂಡಿಸಿ ಸೋಮವಾರ ಲಂಬಾಣಿ ಸಮಾಜದಿಂದ ಪ್ರತಿಭಟನೆ ನಡೆಸಿಯಿತು.