ಪ್ರಶ್ನೆಪತ್ರಿಕೆ ಸೋರಿಕೆ ದೃಢಪಟ್ಟಲ್ಲಿ ಮರುಪರೀಕ್ಷೆ: ಕಾನೂನು ವಿಶ್ವವಿದ್ಯಾಲಯ ಕುಲಸಚಿವೆ ರತ್ನಾ

| Published : Feb 06 2025, 11:48 PM IST

ಪ್ರಶ್ನೆಪತ್ರಿಕೆ ಸೋರಿಕೆ ದೃಢಪಟ್ಟಲ್ಲಿ ಮರುಪರೀಕ್ಷೆ: ಕಾನೂನು ವಿಶ್ವವಿದ್ಯಾಲಯ ಕುಲಸಚಿವೆ ರತ್ನಾ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ತಿಂಗಳು ಬೆಂಗಳೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆ ಆರಂಭಗೊಳ್ಳುವುದಕ್ಕಿಂತ 45 ನಿಮಿಷಗಳ ಮೊದಲು ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಕೈಬರಹದಲ್ಲಿ ಬರೆದ ಕೆಲವು ಪ್ರಶ್ನೆಗಳು ಸೋರಿಕೆಯಾಗಿರುವುದು ಕಂಡುಬಂದಿತ್ತು.

ಹುಬ್ಬಳ್ಳಿ:

ವಿವಿಯಿಂದ ಕಳೆದ ತಿಂಗಳು 23ರಂದು ನಡೆಸಿದ್ದ ಕಾನೂನು ಪದವಿ ಕೋರ್ಸ್‌ನ ಮೊದಲ ಸೆಮಿಸ್ಟರ್‌ನ ಕಾಂಟ್ರಾಕ್ಟ್ ಲಾ-1 ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಕುರಿತು ತನಿಖೆ ನಡೆಯುತ್ತಿದೆ. ಒಂದು ವೇಳೆ ಸೋರಿಕೆಯಾಗಿರುವುದು ದೃಢಪಟ್ಟಲ್ಲಿ ಮರುಪರೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಸಚಿವೆ (ಮೌಲ್ಯಮಾಪನ) ರತ್ನಾ ಭರಮಗೌಡರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ತಿಂಗಳು ಬೆಂಗಳೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆ ಆರಂಭಗೊಳ್ಳುವುದಕ್ಕಿಂತ 45 ನಿಮಿಷಗಳ ಮೊದಲು ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಕೈಬರಹದಲ್ಲಿ ಬರೆದ ಕೆಲವು ಪ್ರಶ್ನೆಗಳು ಸೋರಿಕೆಯಾಗಿರುವುದು ಕಂಡುಬಂದಿತ್ತು. ಅಂದಾಜು ಶೇ. 50ರಿಂದ ಶೇ 60ರಷ್ಟು ಪ್ರಶ್ನೆಗಳಲ್ಲಿ ಸಾಮ್ಯತೆ ಇದ್ದವು ಎಂದರು.

ವಿವಿಯಿಂದ ನಡೆಸುವ ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಶ್ನೆಗಳು ಮತ್ತು ವಿವಿ ಪ್ರಶ್ನೆ ಪತ್ರಿಕೆಗಳಲ್ಲಿನ ಅಂಶಗಳು ತಾಳೆಯಾಗಿವೆ. ಈ ಕುರಿತು ತನಿಖೆ ನಡೆಯುತ್ತಿದೆ. ಉಳಿದಂತೆ ಎಲ್ಲ ಪರೀಕ್ಷೆಗಳು ಸುಸೂತ್ರವಾಗಿ ನಡೆಯುತ್ತಿದ್ದು ವಿದ್ಯಾರ್ಥಿಗಳು ಆತಂಕಕ್ಕೊಳಗಾಗಬಾರದು ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ವಿವಿಯ ಪರೀಕ್ಷಾ ವಿಚಕ್ಷಕ ತಂಡದ ಮುಖ್ಯಸ್ಥ ವಿಶ್ವನಾಥ ಹಾಗೂ ಬೆಂಗಳೂರು ಕಾಲೇಜು ಒಂದರ ಬೋಧಕೇತರ ಹಾಗೂ ಬೋಧಕ ಸಿಬ್ಬಂದಿಯು ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಿದ್ದಾರೆ. ವಿವಿಯಿಂದಲೂ ವಿಸ್ತೃತ ತನಿಖೆ ನಡೆಸಲು ಗಂಭೀರ ಚಿಂತನೆ ನಡೆದಿದೆ ಎಂದರು.

ವಿವಿ ವ್ಯಾಪ್ತಿಯಲ್ಲಿ 130 ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, 116 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿವೆ. ಈ ತರಹದ ಪ್ರಶ್ನೆ ಪತ್ರಿಕೆ ಸೋರಿಕೆ ಇದೇ ಮೊದಲ ಬಾರಿ ನಡೆದಿದೆ. ಇದನ್ನು ವಿವಿಯು ಗಂಭೀರವಾಗಿ ಪರಿಗಣಿಸಿದೆ ಎಂದರು.

ಪ್ರಕರಣದ ಹಿನ್ನೆಲೆಯಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಸಿಸಿ ಕ್ಯಾಮೆರಾ ಎದುರು ಆಂತರಿಕ ಹಾಗೂ ಬಾಹ್ಯ ವಿಚಕ್ಷಕ ತಂಡದೆದರು ಪ್ರಶ್ನೆ ಪತ್ರಿಕೆಗಳನ್ನು ತೆರೆಯಬೇಕೆಂದು ಸೂಚಿಸಲಾಗಿದೆ. ಸಿಸಿ ಟಿವಿ ವಿಡಿಯೋ ಪೂಟೇಜ್‌ಗಳನ್ನು ಕನಿಷ್ಠ ಒಂದು ತಿಂಗಳ ವರೆಗೆ ಕಾಯ್ದಿಟ್ಟುಕೊಳ್ಳಬೇಕು. ಜಿಪಿಎಸ್ ಕ್ಯಾಮೆರಾ ಎದುರು ಪ್ರಶ್ನೆ ಪತ್ರಿಕೆಗಳನ್ನು ತೆರೆಯುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿವಿಯ ಕುಲಸಚಿವೆ (ಆಡಳಿತ) ಅನುರಾಧ ವಸ್ತ್ರದ, ಹಣಕಾಸು ಅಧಿಕಾರಿ ಸಂಜು ಸಿ ಸೇರಿದಂತೆ ಹಲವರಿದ್ದರು.