ತುಂಗಭದ್ರಾ ಜಲಾಶಯದ 32 ಗೇಟ್ ಬದಲಾವಣೆಗೆ ಮರು ಟೆಂಡರ್

| Published : May 22 2025, 01:21 AM IST

ಸಾರಾಂಶ

ತುಂಗಭದ್ರಾ ಜಲಾಶಯದ 32 ಕ್ರಸ್ಟ್ ಗೇಟ್ ಬದಲಾವಣೆಗೆ ಟೆಂಡರ್ ಕರೆಯಲಾಗಿದ್ದು, ಅರ್ಜಿ ಸಲ್ಲಿಸಿದ್ದ ನಾಲ್ಕು ಗುತ್ತಿಗೆ ಕಂಪನಿಗಳು ಅರ್ಹತೆ ಹೊಂದದ ಹಿನ್ನೆಲೆ ಈಗ ತುಂಗಭದ್ರಾ ಮಂಡಳಿ ಮರು ಟೆಂಡರ್ ಕರೆದಿದೆ.

19ನೇ ಗೇಟ್ ಕಾಮಗಾರಿಗೆ ಗ್ರೀನ್ ಸಿಗ್ನಲ್

ಕನ್ನಡಪ್ರಭ ವಾರ್ತೆ ಹೊಸಪೇಟೆತುಂಗಭದ್ರಾ ಜಲಾಶಯದ 32 ಕ್ರಸ್ಟ್ ಗೇಟ್ ಬದಲಾವಣೆಗೆ ಟೆಂಡರ್ ಕರೆಯಲಾಗಿದ್ದು, ಅರ್ಜಿ ಸಲ್ಲಿಸಿದ್ದ ನಾಲ್ಕು ಗುತ್ತಿಗೆ ಕಂಪನಿಗಳು ಅರ್ಹತೆ ಹೊಂದದ ಹಿನ್ನೆಲೆ ಈಗ ತುಂಗಭದ್ರಾ ಮಂಡಳಿ ಮರು ಟೆಂಡರ್ ಕರೆದಿದೆ.ಈಗಾಗಲೇ ಮತ್ತೆ ಇ- ಟೆಂಡರ್ ಕರೆಯಲಾಗಿದ್ದು, ಏಳು ದಿನದೊಳಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದು ಮಂಡಳಿ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.ತುಂಗಭದ್ರಾ ಜಲಾಶಯದ ಗೇಟ್ ಗಳ ಬದಲಾವಣೆಗೆ ಪರಿಣತ ತಜ್ಞರು ಸಲಹೆ ನೀಡಿದ್ದಾರೆ. ಇನ್ನೂ ಎನ್ ಡಿಟಿ ಸರ್ವಿಸ್ ಸಂಸ್ಥೆ ಕೂಡ ಅಧ್ಯಯನ ನಡೆಸಿ ವರದಿ ನೀಡಿತ್ತು. ಈ ವರದಿ ಆಧಾರದ ಮೇಲೆ 32 ಗೇಟ್ ಗಳ ಬದಲಾವಣೆಗೆ ಇ-ಟೆಂಡರ್ ಕರೆಯಲಾಗಿತ್ತು. ಗುಜರಾತ ಮೂಲದ ಮೂರು ಕಂಪನಿಗಳು ಹಾಗು ಆಂಧ್ರಪ್ರದೇಶದ ಮೂಲದ ಒಂದು ಕಂಪನಿ ಟೆಂಡರ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದವು. ಆದರೆ, ಈ ಕಂಪನಿಗಳು ಅರ್ಹತೆ ಹೊಂದಿಲ್ಲದ ಹಿನ್ನೆಲೆ‌ ಮರು ಟೆಂಡರ್ ಕರೆಯಲಾಗಿದ್ದು, ಇನ್ನೊಂದೆಡೆ ಗುಜರಾತ ಮೂಲದ ಕಂಪನಿಯೊಂದು ಅರ್ಹತೆ ಹೊಂದಿದ್ದರೂ ವರ್ಕ್ ಡನ್ ಸರ್ಟಿಫಿಕೇಟ್ ಅನ್ನು ಟೆಂಡರ್ ಅರ್ಜಿಯಲ್ಲಿ ನಮೂದು ಮಾಡಿರಲಿಲ್ಲ ಎಂಬ ಮಾಹಿತಿಯೂ ಕನ್ನಡಪ್ರಭಕ್ಕೆ ಲಭಿಸಿದೆ.ಈ ಮಧ್ಯೆ 19ನೇ ಗೇಟ್ ನ ಸ್ಟಾಪ್‌ಲಾಗ್ ತೆರವು ಮಾಡಿ, ಕ್ರಸ್ಟ್ ಗೇಟ್ ನಿರ್ಮಾಣಕ್ಮೆ ಗುಜರಾತ್ ಮೂಲದ ಹಾರ್ಡ್‌ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಕಂಪನಿಗೆ ತುಂಗಭದ್ರಾ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ. ಗೇಟ್ ನ ಕಾಮಗಾರಿ ವಿನ್ಯಾಸವನ್ನೂ ಕೇಂದ್ರ ಜಲ ಆಯೋಗ ಕ್ಕೂ ರವಾನೆ ಮಾಡಲಾಗಿದೆ. ಈಗ ಗುಜರಾತ ಮೂಲದ ಕಂಪನಿ ಗೇಟ್ ಅಳವಡಿಕೆಗೆ ಪ್ರಾಥಮಿಕ ತಯಾರಿಯೂ ನಡೆಸಿದೆ. ಶೀಘ್ರ ವೇ 19ನೇ ಗೇಟ್ ಅಳವಡಿಕೆ ಕಾಮಗಾರಿ ಜಲಾಶಯದಲ್ಲಿ ನಡೆಯಲಿದೆ.ಸ್ಥಳೀಯ ಕಂಪನಿಗಳ ಪರ ಶಾಸಕರ ಲಾಬಿ ಜೋರು:ಇನ್ನೊಂದೆಡೆ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಗಳ ಬದಲಾವಣೆ ಕಾಮಗಾರಿಯಲ್ಲಿ ಸ್ಥಳೀಯ ಕಂಪನಿಗಳಿಗೆ ಅವಕಾಶ ದೊರೆಯುತ್ತಿಲ್ಲ. ಈಗಾಗಲೇ 19ನೇ ಗೇಟ್ ಗೆ ಅಳವಡಿಸಿರುವ ಸ್ಟಾಪ್ ಲಾಗ್ ತೆರವು ಮಾಡಿ ಗೇಟ್ ಅಳವಡಿಕೆಗೆ ಗುಜರಾತ್ ಮೂಲದ ಹಾರ್ಡ್‌ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಕಂಪನಿಗೆ ಅವಕಾಶ ನೀಡಲಾಗಿದೆ. ಈಗ ಮತ್ತೆ ಹೊರ ರಾಜ್ಯದ ಕಂಪನಿಗಳೇ ಅರ್ಜಿ ಸಲ್ಲಿಸಿದ್ದು, ಸ್ಥಳೀಯ ಕಂಪನಿಗಳಿಗೆ ಅವಕಾಶ ದೊರೆಯಬೇಕಿದೆ. ತುಂಗಭದ್ರಾ ಜಲಾಶಯಕ್ಕೆ ಧಕ್ಕೆಯುಂಟಾದಾಗ ಸ್ಥಳೀಯ‌ ಕಂಪನಿಗಳು ನೆರವಿಗೆ ಧಾವಿಸಿವೆ. ಹಾಗಾಗಿ ಸ್ಥಳೀಯ ಕಂಪನಿಗಳಿಗೆ ಅವಕಾಶ ದೊರೆಯಲಿ ಎಂದು ಕೊಪ್ಪಳ, ಬಳ್ಳಾರಿ, ವಿಜಯನಗರ ಮತ್ತು ರಾಯಚೂರಿನ ಶಾಸಕರು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರ ಗಮನ ಸೆಳೆದಿದ್ದಾರೆ. ಈಗ ಕಾಕತಾಳೀಯ ಎಂಬಂತೇ ಮರು ಟೆಂಡರ್ ಕೂಡ ಕರೆಯಲಾಗಿದ್ದು, ಸ್ಥಳೀಯ ಕಂಪನಿಗಳು ಅರ್ಜಿ ಸಲ್ಲಿಸಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.