ವೇಟ್‌ಲಿಫ್ಟಿಂಗ್ ಕೇವಲ ದೇಹದ ಶಕ್ತಿಯನ್ನಷ್ಟೇ ಅಲ್ಲ, ಮನಸ್ಸಿನ ಏಕಾಗ್ರತೆ ಮತ್ತು ದೃಢ ಸಂಕಲ್ಪವನ್ನು ಪರೀಕ್ಷಿಸುವ ಕ್ರೀಡೆ. ಸ್ಪರ್ಧಾರ್ಥಿಗಳು ಸ್ಪರ್ಧಾತ್ಮಕ ಮನೋಭಾವದಿಂದ ಸ್ಪರ್ಧಿಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ದೃಢ ಸಂಕಲ್ಪ ಮಾಡಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹಾರೈಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವೇಟ್‌ಲಿಫ್ಟಿಂಗ್ ಕೇವಲ ದೇಹದ ಶಕ್ತಿಯನ್ನಷ್ಟೇ ಅಲ್ಲ, ಮನಸ್ಸಿನ ಏಕಾಗ್ರತೆ ಮತ್ತು ದೃಢ ಸಂಕಲ್ಪವನ್ನು ಪರೀಕ್ಷಿಸುವ ಕ್ರೀಡೆ. ಸ್ಪರ್ಧಾರ್ಥಿಗಳು ಸ್ಪರ್ಧಾತ್ಮಕ ಮನೋಭಾವದಿಂದ ಸ್ಪರ್ಧಿಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ದೃಢ ಸಂಕಲ್ಪ ಮಾಡಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹಾರೈಸಿದರು.ನಗರದ ವಿಕಾಸ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ವಿಕಾಸ ಪದವಿ ಪೂರ್ವ ಕಾಲೇಜು, ಶಿವಮೊಗ್ಗ ಇವುಗಳ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ 2026-27ನೇ ಸಾಲಿನ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ವೇಟ್ ಲಿಫ್ಟಿಂಗ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಭ್ಯಾಸ ಎಷ್ಟು ಮುಖ್ಯವೋ, ಕ್ರೀಡೆಯೂ ಅಷ್ಟೇ ಮುಖ್ಯ. ಶರೀರವನ್ನು ಸದೃಢವಾಗಿಟ್ಟುಕೊಂಡಾಗ ಮಾತ್ರ ಬುದ್ಧಿಯೂ ಚುರುಕಾಗಿ ಕೆಲಸ ಮಾಡಲು ಸಾಧ್ಯ. ಇಂದು ಪಿಯು ಹಂತದಲ್ಲೇ ನೀವು ತೋರಿಸುತ್ತಿರುವ ಈ ಪ್ರತಿಭೆ, ನಾಳೆ ನಮ್ಮ ರಾಜ್ಯ ಹಾಗೂ ದೇಶವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ, ಒಲಿಂಪಿಕ್ಸ್ ನಂತಹ ವೇದಿಕೆಗಳಲ್ಲಿ ಪ್ರತಿನಿಧಿಸುವಂತಾಗಬೇಕು ಎಂದು ಆಶಿಸಿದರು.
ಮುಂದಿನ ಯುವ ದಸರಾದಲ್ಲಿ ವೇಟ್ ಲಿಫ್ಟಿಂಗ್ ಸ್ಪರ್ಧೆ: ನಮ್ಮ ಶಿವಮೊಗ್ಗ ಕ್ರೀಡಾ ಕ್ಷೇತ್ರಕ್ಕೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮುಂದಿನ ಯುವ ದಸರಾದಲ್ಲಿ ವೇಟ್ ಲಿಫ್ಟಿಂಗ್ ಪಂದ್ಯಾವಳಿ ಮಾಡುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾರ್ಥಿಗಳು ಭಾಗವಹಿಸಬೇಕು. ಹೆಣ್ಣು ಮಕ್ಕಳು ಇಂದಿನ ವೇಟ್ ಲಿಫ್ಟಿಂಗ್ ಪಂದ್ಯಾವಳಿಯಲ್ಲಿ ಅತ್ಯಂತ ಉತ್ಸುಕತೆಯಿಂದ ಹಾಗೂ ಸ್ಪರ್ಧಾತ್ಮಕವಾಗಿ ಭಾಗವಹಿಸಿದ್ದೀರಿ. ನಿಮ್ಮ ಈ ಮಾನಸಿಕತೆ ಮೆಚ್ಚುವಂತಹದ್ದಾಗಿದ್ದು. ಕ್ರೀಡೆಗೆ ಅಗತ್ಯವಾದ ಎಲ್ಲ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ ಮಾತನಾಡಿ, ಕಳೆದ ವರ್ಷ ಕೋಲಾರದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಬಾರಿ ಶಿವಮೊಗ್ಗದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ವಿಕಾಸ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ. ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು 185 ಸ್ಪರ್ಧಾರ್ಥಿಗಳು 72 ಬಾಲಕಿಯರು ಮತ್ತು 113 ಬಾಲಕರು ಭಾಗಹಿಸಿದ್ದಾರೆ ಎಂದರು.
ಸ್ಪರ್ಧೆಯಲ್ಲಿ ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ಕ್ರೀಡಾಪಟುಗಳಿಗೆ ನನ್ನ ಶುಭ ಹಾರೈಕೆಗಳು. ರಾಜ್ಯ ಮಟ್ಟದಲ್ಲಿ ಆಯ್ಕೆಯಾದವರು ರಾಷ್ಟ್ರೀಯ ನಂತರ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುತ್ತೀರಿ. ಮುಂದಿನ ಹಂತಕ್ಕೆ ಮತ್ತಷ್ಟು ಸಿದ್ಧರಾಗಿ, ಭಾರತದ ಪ್ರಖ್ಯಾತ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಏಷ್ಯನ್ ಪಂದ್ಯಾವಳಿಯಲ್ಲಿ 198 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಪಡದು ಸಾಧನೆ ಮಾಡಿ ವೇಟ್‌ಲಿಫ್ಟರ್‌ಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.ವಿಕಾಸ ವಿದ್ಯಾ ಸಮಿತಿಯ ಕಾರ್ಯದರ್ಶಿ ಎ.ಜೆ.ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಸಹ ಕಾರ್ಯದರ್ಶಿ ವಿಜಯೇಂದ್ರ ಬಿಂದುರಾವ್ ಸುಳೇಕೇರಿ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಜಿ.ಎಫ್ ಕುಟ್ರಿ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಯೋಗೇಶ್ ಎಸ್, ಅನುದಾನಿತ ಪ್ರಾಂಶುಪಾಲರ ಸಂಘದ ಅಧ್ಯಕ್ಷ ರಾಜು ಕೆ ಎಚ್, ಕ್ರೀಡಾ ಸಂಯೋಜಕ ನಾಗೇಂದ್ರ ಪ್ರಸಾದ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಶಶಿಧರ್, ವೇಟ್ ಲಿಫ್ಟಿಂಗ್ ಅಸೋಸಿಯೇಷನ್‌ನ ಕಾರ್ಯದರ್ಶಿ ಸಿಪಿಆರ್ ಸುಧೀರ್ ಕುಮಾರ್, ವಿಕಾಸ ಪಿಯು ಕಾಲೇಜು ಪ್ರಾಚಾರ್ಯರಾದ ಮಧುಸೂಧನ್, ಗೋಪಾಲಕೃಷ್ಣ, ಪ್ರವೀಣ್, ಹರೀಶ್, ಉಪನ್ಯಾಸಕರು, ದೈಹಿಕ ಶಿಕ್ಷಣ ಶಿಕ್ಷಕರು, ಸ್ಪಧಾರ್ಥಿಗಳು, ಸಿಬ್ಬಂದಿ ಹಾಜರಿದ್ದರು.