ಸಾರಾಂಶ
ಬಳ್ಳಾರಿ: ತರಗತಿಯಲ್ಲಿ ಎಷ್ಟು ಹೊತ್ತು ಸಮಯ ಕಳೆಯುತ್ತೀರಿ ಎಂಬುದು ಮುಖ್ಯವಲ್ಲ. ಎಷ್ಟು ಹೊತ್ತಿನ ತನಕ ಏಕಾಗ್ರತೆಯಿಂದ ಪಾಠ ಆಲಿಸಿ, ಮನನ ಮಾಡಿಕೊಳ್ಳುತ್ತೀರಿ ಎಂಬುದು ಅತ್ಯಂತ ಮುಖ್ಯ ಎಂದು ಎಸ್ಪಿ ಡಾ.ಶೋಭಾರಾಣಿ ವಿ.ಜೆ. ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದ ಹೊರವಲಯದ ಹನಿ ಸಭಾಂಗಣದಲ್ಲಿ ಕನ್ನಡಪ್ರಭ-ಸುವರ್ಣನ್ಯೂಸ್, ಸನ್ಮಾರ್ಗ ಗೆಳೆಯರ ಬಳಗ, ಮೋಕಾ ಪೊಲೀಸ್ ಠಾಣೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ವಿದ್ಯಾರ್ಥಿ ಜೀವನದಲ್ಲಿ ಸಮಯ ಪಾಲನೆ ಅತ್ಯಂತ ಮುಖ್ಯ. ಸಮಯಕ್ಕೆ ಹೆಚ್ಚು ಮಹತ್ವ ನೀಡಿದರೆ ಮಾತ್ರ ನೀವು ಅಂದುಕೊಂಡಷ್ಟು ಫಲಿತಾಂಶ ಪಡೆಯಲು ಸಾಧ್ಯ. ಆಲಸಿಗಳಾದರೆ ಸಾಧನೆಯ ಶಿಖರ ಮುಟ್ಟಲು ಸುಲಭವಾಗುವುದಿಲ್ಲ. ನಿರಂತರ ಅಧ್ಯಯನ ಹಾಗೂ ಜ್ಞಾನಾರ್ಜನೆಯ ಗುರಿ ನಿಮ್ಮದಾಗಬೇಕು. ತರಗತಿಯಲ್ಲಿ ಮಾಡಿದ ಪಾಠವನ್ನು ಅಂದೇ ಮನನ ಮಾಡಿಕೊಳ್ಳಬೇಕು. ಪರೀಕ್ಷೆ ದಿನಗಳಲ್ಲಿ ಓದಿನ ಚಾಟ್ ಮಾಡಿಕೊಳ್ಳಬೇಕು. ಯಾವ ವಿಷಯ ಎಷ್ಟೊತ್ತು ಓದಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಂಡು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಬರೀ ಎಂಟು ವರ್ಷಗಳ ಕಾಲ ಶ್ರಮಪಟ್ಟರೆ ಸಾಕು, ಇಡೀ ಜೀವನ ಸುಖಮಯವಾಗಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಐಎಎಸ್, ಐಪಿಎಸ್ ಸೇರಿದಂತೆ ದೊಡ್ಡ ಹುದ್ದೆಗಳಲ್ಲಿರುವವರು ಗ್ರಾಮೀಣ ಭಾಗದಿಂದ ಹಾಗೂ ಸರ್ಕಾರಿ ಶಾಲೆಗಳಿಂದ ಬಂದವರಾಗಿದ್ದಾರೆ. ನಿರಂತರ ಓದಿನಿಂದ ಅನೇಕರು ತಾವು ಅಂದುಕೊಂಡಂತೆಯೇ ಆಗಿದ್ದಾರೆ. ಕಷ್ಟ ಪಡದೇ ಯಾರೂ ಸಾಧನೆ ಮಾಡಿದ ಉದಾಹರಣೆಗಳಿಲ್ಲ. ನೀವು ಅಂದುಕೊಂಡಂತಾಗಲು ಇರುವ ಏಕೈಕ ಸಾಧನವೆಂದರೆ ಅದು ಶಿಕ್ಷಣವಾಗಿದೆ. ಹೀಗಾಗಿ ಸದಾ ಓದಿನ ಕಡೆ ಗಮನ ನೀಡಿ. ಈ ರೀತಿಯ ಕಾರ್ಯಾಗಾರಗಳ ಸದುಪಯೋಗ ಮಾಡಿಕೊಳ್ಳಿ ಎಂದರು.ವಿಶ್ವಾಸದಿಂದ ಪರೀಕ್ಷೆ ಎದುರಿಸಿ:
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಪರೀಕ್ಷೆ ಬರೆಯುವಾಗ ಯಾವುದೇ ಆತಂಕವಿಲ್ಲದೇ ವಿಶ್ವಾಸದಿಂದ ಎದುರಿಸಬೇಕು. ವಿಶ್ವಾಸ ಬರಬೇಕಾದರೆ ಪರೀಕ್ಷೆ ಮುನ್ನ ಮೂರು ತಿಂಗಳು ಮದುವೆ, ಸಮಾರಂಭ ಮತ್ತಿತರ ಕಾರ್ಯಗಳಿಂದ ದೂರು ಉಳಿಯಬೇಕು. ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಯಾವುದೇ ವಿಷಯದ ಬಗ್ಗೆ ಪ್ರಶ್ನೆಗಳಿದ್ದರೆ ಕೂಡಲೇ ಶಿಕ್ಷಕರಿಂದ ತಿಳಿದು ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕನ್ನಡಪ್ರಭ-ಸುವರ್ಣ ನ್ಯೂಸ್ ಹಾಗೂ ಸನ್ಮಾರ್ಗ ಗೆಳೆಯರ ಬಳಗ ಜೊತೆಗೂಡಿ ಈ ರೀತಿಯ ಕಾರ್ಯಾಗಾರ ಹಮ್ಮಿಕೊಂಡಿರುವುದು ಹೆಚ್ಚು ಸಂತಸ ತಂದಿದೆ. ಸುದ್ದಿ ನೀಡುವ ಧಾವಂತದ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಮಾಧ್ಯಮ ಸಂಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯದ ನೆಲೆಯಲ್ಲಿ ಕಾರ್ಯಾಗಾರ ಹಮ್ಮಿಕೊಂಡು ಸಾರ್ಥಕ ಕೆಲಸ ಮಾಡಿವೆ ಎಂದು ಶ್ಲಾಘಿಸಿದರು.
ಸನ್ಮಾರ್ಗ ಗೆಳೆಯರ ಬಳಗದ ಗೌರವಾಧ್ಯಕ್ಷ ಡಾ.ಪಿ.ರಾಧಾಕೃಷ್ಣ ಮಾತನಾಡಿದರು. ಅಧ್ಯಕ್ಷ ಎಚ್.ಲಕ್ಷ್ಮಿಕಾಂತ ರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಎಂ.ಎಸ್.ಜಿ. ಜಗದೀಶ್ ಗೌಡ, ಕನ್ನಡಪ್ರಭ ಜಿಲ್ಲಾ ವರದಿಗಾರ ಮಂಜುನಾಥ ಕೆ.ಎಂ., ಸುವರ್ಣನ್ಯೂಸ್ ಜಿಲ್ಲಾ ವರದಿಗಾರ ನರಸಿಂಹಮೂರ್ತಿ, ಮೋಕಾ ಪೊಲೀಸ್ ಠಾಣೆ ಪಿಎಸ್ಐ ಕಾಳಿಂಗ, ಬಿಇಒ ನಯೀಮರ್ ರಹಮಾನ್, ಸನ್ಮಾರ್ಗ ಗೆಳೆಯರ ಬಳಗದ ಚಂದ್ರಶೇಖರ ಆಚಾರ್ ಕಪ್ಪಗಲ್, ಸಿದ್ದು ವಣೇನೂರು, ಹನಿ ಫಂಕ್ಷನ್ ಹಾಲ್‌ನ ಮಾಲೀಕ ಇಬ್ರಾಹಿಂ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಮೆಹತಾಬ್, ಇಸಿಒ ಗೂಳೆಪ್ಪ ಬೆಳ್ಳಿಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.ಸಂಪನ್ಮೂಲ ವ್ಯಕ್ತಿಗಳಾದ ಪುರುಷೋತ್ತಮ, ಎಚ್.ಹುಲೆಪ್ಪ, ಸಿದ್ಧಲಿಂಗೇಶ ಗದುಗಿನ
ಆಂಗ್ಲ, ಗಣಿತ, ಕನ್ನಡ ಪರೀಕ್ಷೆ ಬರೆಯುವ ಮುನ್ನದ ಸಿದ್ಧತೆಗಳು ಹಾಗೂ ಯಾವುದೇ ಆತಂಕವಿಲ್ಲದೇ ಪರೀಕ್ಷೆ ಎದುರಿಸುವುದು ಹೇಗೆ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.ತಾಲೂಕಿನ ಬಾಣಾಪುರ, ಹಿರೇ ಹಡ್ಲಿಗಿ, ಬಸರಕೋಡು, ಬೆಣಕಲ್, ಎಂ.ಗೋನಾಳ್, ಸಿಂಧುವಾಳ, ಯರಗುಡಿ, ಮೋಕಾ ಗುಡ್ ಶಫರ್ಡ್, ಮೋಕಾ ಹಾಗೂ ಯರಗುಡಿಯ ಮೊರಾರ್ಜಿ ದೇಸಾಯಿ ಪ್ರೌಢಶಾಲೆಗಳ ಸುಮಾರು 1250ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.