ಸಾರಾಂಶ
ಕನಕಪುರ: ಕಂಡ ಕನಸನ್ನು ನನಸು ಮಾಡಿಕೊಂಡ ಅಬ್ದುಲ್ ಕಲಾಂ ಮತ್ತು ಕೆ.ಆರ್.ನಾರಾಯಣ್ ಅವರಂತೆ ನೀವು ನಿಮ್ಮ ಗುರಿ ಮುಟ್ಟಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲೆ ಉಪ ನಿರ್ದೇಶಕರಾದ ಎಂ.ಪಿ.ನಾಗಮ್ಮ ತಿಳಿಸಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡೆ ಮತ್ತು ಎನ್ನೆಸ್ಸೆಸ್ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಡುಬಡತನದಲ್ಲಿ ಹುಟ್ಟಿದ್ದರೂ ಏನನ್ನಾದರೂ ಸಾಧನೆ ಮಾಡಬೇಕೆಂಬ ದೊಡ್ಡ ಕನಸು ಕಂಡಿದ್ದ ಅಬ್ದುಲ್ ಕಲಾಂ ಮತ್ತು ಕೆ.ಆರ್.ನಾರಾಯಣ್ ಅವರು ಸರ್ಕಾರಿ ಶಾಲೆಗಳಲ್ಲಿ, ಬೀದಿದೀಪದ ಬೆಳಕಿನಲ್ಲಿ ಓದಿ ಕಷ್ಟಪಟ್ಟು ಉನ್ನತ ವ್ಯಾಸಂಗ ಮಾಡಿದರು. ನಿರಂತರ ಕಠಿಣ ಪರಿಶ್ರಮದಿಂದ ರಾಷ್ಟ್ರಪತಿಗಳಾಗಿ ದೇಶ ಸೇವೆ ಮಾಡಿದರು. ಅವರ ಸಾಧನೆ ಮತ್ತು ಸೇವೆ ಅಸಾಮಾನ್ಯವಾದದ್ದು ಎಂದು ಹೇಳಿದರು.
ವಿದ್ಯಾರ್ಥಿಗಳು ಇಂತಹ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅವರು ನಡೆದು ಬಂದ ದಾರಿಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಅವರಂತೆ ನೀವು ಉನ್ನತ ಸಾಧನೆ ಮಾಡಿ ಉತ್ತಮ ವ್ಯಕ್ತಿಗಳಾಗಿ ಜೀವನ ರೂಪಿಸಿಕೊಳ್ಳಬೇಕು. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉತ್ತಮವಾದ ಉಪನ್ಯಾಸಕರ ತಂಡವಿದೆ, ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಕನಕಪುರ ನಗರ ಸೇರಿದಂತೆ ತಾಲೂಕಿನ ಜನತೆ ಇಲ್ಲಿ ದಾಖಲಾಗುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಹಾರೋಹಳ್ಳಿ ತಹಸೀಲ್ದಾರ್ ಶಿವಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ಫ್ಯಾಷನ್ ಆಗಿದೆ. ಅದರ ಮಹತ್ವ ಅರಿಯುತ್ತಿಲ್ಲ, ಜೀವನ ಮೌಲ್ಯಕ್ಕಿಂತ ಮೊಬೈಲ್‌ನಲ್ಲೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಮೊಬೈಲ್ ಗೀಳನ್ನು ಬಿಡಬೇಕೆಂದು ಸಲಹೆ ನೀಡಿದರು.
ಪ್ರಭಾರ ಪ್ರಾಂಶುಪಾಲ ಶಿವಕುಮಾರ್ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಶ್ರಮದಾನ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ನಾಯಕತ್ವ ಗುಣ ಮತ್ತು ಸಾಮಾಜಿಕ ಕಾಳಜಿ ಬೆಳೆಯುತ್ತದೆ ಎಂದು ತಿಳಿಸಿದರು.ಉಪನ್ಯಾಸಕ ಸತ್ಯನಾರಾಯಣ್ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ನಡೆದ ಸಾಂಸ್ಕೃತಿಕ ಮತ್ತು ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಸನ್ಮಾನಿಸಿದರು. ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಎನ್ನೆಸ್ಸೆಸ್ ಅಧಿಕಾರಿ ಪದ್ಮನಾಭ್ ನಗದು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀನಿವಾಸ, ಉಪನ್ಯಾಸಕ ತಂಗರಾಣಿ, ಶಿಲ್ಪ, ವಿಮಲಾ, ಮನೋನ್ಮಣಿ, ಮಮತ ಬಾಯಿ, ಲಂಕೇಶ್, ವಿನಯ್ ಕುಮಾರ್, ನಾರಾಯಣ ಸ್ವಾಮಿ, ದೀಪಿಕಾ, ಅಶ್ವಿನಿ, ಬಸವರಾಜು, ರಾಮಚಂದ್ರ, ಲಲಿತ, ಬಾಷಾ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 03:
ಕನಕಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡೆ ಮತ್ತು ಎನ್ನೆಸ್ಸೆಸ್ ಚಟುವಟಿಕೆಗಳ ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲೆ ಉಪ ನಿರ್ದೇಶಕ ನಾಗಮ್ಮ ಉದ್ಘಾಟಿಸಿದರು.