ಸಮಕಾಲೀನ ವಿಚಾರ ತಿಳಿಯಲು ನಿತ್ಯ ಕನ್ನಡ ಪತ್ರಿಕೆ ಓದಿ: ಪಿ.ಜೆ.ಆಂಟೋನಿ ಕರೆ

| Published : Jul 18 2025, 12:45 AM IST

ಸಮಕಾಲೀನ ವಿಚಾರ ತಿಳಿಯಲು ನಿತ್ಯ ಕನ್ನಡ ಪತ್ರಿಕೆ ಓದಿ: ಪಿ.ಜೆ.ಆಂಟೋನಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹಾಜಪುರ, ಸಮಕಾಲೀನ ವಿಚಾರಗಳನ್ನು ತಿಳಿಯಬೇಕಾದರೆ ಪ್ರತಿ ನಿತ್ಯ ಕನ್ನಡ ದಿನ ಪತ್ರಿಕೆಗಳನ್ನು ಓದಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ಕರೆ ನೀಡಿದರು.

ಜೀವನ್ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢ ಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ

ಕನ್ನಡಪ್ರಭ ವಾರ್ತೆ, ನರಸಿಂಹಾಜಪುರ

ಸಮಕಾಲೀನ ವಿಚಾರಗಳನ್ನು ತಿಳಿಯಬೇಕಾದರೆ ಪ್ರತಿ ನಿತ್ಯ ಕನ್ನಡ ದಿನ ಪತ್ರಿಕೆಗಳನ್ನು ಓದಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ಕರೆ ನೀಡಿದರು.ಗುರುವಾರ ಪಟ್ಟಣದ ಜೀವನ್ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢ ಶಾಲೆಯಲ್ಲಿ ದಾನಿಗಳಾದ ಗದ್ದೇಮನೆ ವಿಶ್ವನಾಥ್ ಕೊಡುಗೆಯಾಗಿ ನೀಡಿದ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಟಿ.ವಿ ಮಾದ್ಯಮ, ಮೊಬೈಲ್, ಸಾಮಾಜಿಕ ಜಾಲ ತಾಣಗಳು ಎಷ್ಟೇ ಇದ್ದರೂ ಕನ್ನಡ ದಿನ ಪತ್ರಿಕೆಗಳಲ್ಲಿ ಮಾತ್ರ ನಿಖರ ವಾದ ಸುದ್ದಿ ಬರುತ್ತದೆ. ಕನ್ನಡಪ್ರಭ ಎಸ್.ಎಸ್.ಎಸ್.ಸಿ ವಿದ್ಯಾರ್ಥಿಗಳಿಗಾಗಿ ಯುವ ಆವೃತ್ತಿ ತಂದಿದ್ದು ಮಕ್ಕಳು ಪ್ರತಿ ನಿತ್ಯ ಇದನ್ನು ಓದಿ ಉತ್ತಮ ಅಂಕ ಪಡೆಯಬೇಕು ಎಂದರು. ದಾನಿಗಳಾದ ಉದ್ಯಮಿ ಗದ್ದೇಮನೆ ವಿಶ್ವನಾಥ್ ಕನ್ನಡ ಶಾಲೆಗಳ ಮಕ್ಕಳಿಗೆ ಸಹಾಯವಾಗುವಂತೆ ಈಗಾಗಲೇ ತಾಲೂಕಿನ 7500 ಮಕ್ಕಳಿಗೆ ಶಾಲಾ ಬ್ಯಾಗ್, ಯೂನಿ ಫಾರಂ, ನೋಟು ಬುಕ್ ನೀಡಿದ್ದಾರೆ. ವಿಶ್ವನಾಥ್ ಕನ್ನಡ ಶಾಲೆಯಲ್ಲೇ ಓದಿ ವಿದ್ಯಾವಂತರಾಗಿ ದೊಡ್ಡ ಉದ್ಯಮಿಯಾಗಿ ಬೆಳವಣಿಗೆ ಹೊಂದಿದ್ದಾರೆ. ತಮ್ಮ ಹುಟ್ಟೂರನ್ನು ಮರೆಯದೆ ತಾಲೂಕಿನ ವಿವಿಧ ಶಾಲಾ ಮಕ್ಕಳಿಗೆ ಶಾಲಾ ಪರಿಕರಣ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ದಾನಿ ಗದ್ದೇಮನೆ ವಿಶ್ವನಾಥ್ ಕನ್ನಡ ಪ್ರಭ ಯುವ ಆವೃತ್ತಿ ಬಿಡುಗಡೆ ಮಾಡಿ ಮಾತನಾಡಿ, ಮಲೆನಾಡಿನ ಮಕ್ಕಳು ಕಲಿಯಬೇಕು ಎಂಬ ಉದ್ದೇಶದಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಸಹಾಯ ನೀಡಿದ್ದೇನೆ. ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ ಹಾಗೂ ನರಸಿಂಹರಾಜಪುರ ತಾಲೂಕಿನ 110 ಸರ್ಕಾರಿ ಶಾಲೆ 750 ಮಕ್ಕಳಿಗೆ ಶಾಲಾ ಬ್ಯಾಗ್, ಸಮವಸ್ತ್ರ ಇತರ ಶಾಲಾ ಪರಿಕರಣ ನೀಡಿದ್ದೇನೆ ಎಂದರು. ಕನ್ನಡಪ್ರಭ ವರದಿಗಾರ ಯಡಗೆರೆ ಮಂಜುನಾಥ್ ಮಾಹಿತಿ ನೀಡಿ, ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕನ್ನಡಪ್ರಭದಿಂದ 1 ರು. ಯುವ ಆವೃತ್ತಿ ನೀಡಲಾಗುತ್ತಿದೆ. ರಜಾ ದಿನ ಹೊರತು ಪಡಿಸಿ 250 ದಿನ ಗಳು ಮಕ್ಕಳಿಗೆ ಯುವ ಆವೃತ್ತಿ ನೀಡಲಾಗುತ್ತಿದೆ. ಮಕ್ಕಳು ಪ್ರತಿ ದಿನ ಇದನ್ನು ಓದಬೇಕು. ಈಗಾಗಲೇ ತಾಲೂಕಿನ 4 ಸರ್ಕಾರಿ ಶಾಲೆ ಮಕ್ಕಳಿಗೆ ಯುವ ಆವೃತ್ತಿ ನೀಡಲಾಗುತ್ತಿದೆ. ಮಕ್ಕಳು ಪ್ರತಿ ದಿನ ಕನ್ನಡ ದಿನ ಪತ್ರಿಕೆ ಓದುತ್ತಾ ಹೋದರೆ ಜ್ಞಾನಾರ್ಜನೆಯಾಗಲಿದೆ ಎಂದರು. ಸಭೆ ಅಧ್ಯಕ್ಷತೆಯನ್ನು ಜೀವನ್ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢ ಶಾಲೆ ಉಪಾಧ್ಯಕ್ಷ ಫಾ.ಬೆನ್ನಿ ಮ್ಯಾಥ್ಯೂ ವಹಿಸಿದ್ದರು. ಅತಿಥಿಗಳಾಗಿ ಜಿನಿ ವಿಶ್ವನಾಥ್, ಜೀವನ್ ಜ್ಯೋತಿ ಶಾಲೆ ಕಾರ್ಯದರ್ಶಿ ಕೆ.ಟಿ.ಎಲ್ದೋ, ಖಜಾಂಚಿ ಸಜಿ ಇದ್ದರು. ಶಾಲಾ ಮುಖ್ಯೋಪಾಧ್ಯಾಯ ಪೀಟರ್ ಬಾಬು ಸ್ವಾಗತಿಸಿದರು. ಸಹ ಶಿಕ್ಷಕ ಚೇತನ್ ವಂದಿಸಿದರು.