ಸಾರಾಂಶ
ಹಾನಗಲ್ಲ: ಗ್ರಂಥಾಲಯದಲ್ಲಿ ಕೇವಲ ೨೦ ದಿನಗಳು ಮಾತ್ರ ಓದಿಗೆ ಲಭ್ಯವಾಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಿಗೆ ಭಾರೀ ಆತಂಕವಾಗಿದೆ ಎಂದು ಹಾನಗಲ್ಲಿನಲ್ಲಿ ಓದುಗರು ತಾಲೂಕು ತಹಸೀಲ್ದಾರ್ ಎಸ್. ರೇಣುಕಮ್ಮ ಅವರಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸುವಂತೆ ವಿನಂತಿಸಿದ್ದಾರೆ.ಹಾನಗಲ್ಲ ಪಟ್ಟಣದಲ್ಲಿರುವ ಗ್ರಂಥಾಲಯದ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿರುವ ಅವರು, ತಿಂಗಳಿನಲ್ಲಿ ೫ ಸೋಮವಾರಗಳು ಹಾಗೂ ಮಂಗಳವಾರಗಳು, ಎರಡು ನಾಲ್ಕನೆ ಶನಿವಾರಗಳು, ರಜೆ ದಿನಗಳನ್ನೊಳಗೊಂಡು ತಿಂಗಳಿಗೆ ಕೇವಲ ೨೦ ದಿನಗಳು ಮಾತ್ರ ಗ್ರಂಥಾಲಯ ಓದುಗರಿಗೆ ಲಭ್ಯವಾಗುತ್ತಿದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಿಗೆ ಭಾರೀ ಆತಂಕವಾಗಿದೆ. ಓದುವ ವಿದ್ಯಾರ್ಥಿಗಳಿಗಾಗಿ ಸೋಮವಾರಗಳಂದು ಹಾಗೂ ಶನಿವಾರಗಳಂದು ಓದಲು ಅವಕಾಶ ಮಾಡಿಕೊಡಬೇಕು. ಗ್ರಂಥಾಲಯದ ಸ್ವಚ್ಛತೆ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಬೇಕು. ಉತ್ತಮ ಸ್ಪರ್ಧಾತ್ಮಕ ಪರೀಕ್ಷೆ ಓದಿಗೆ ಸಹಕಾರಿಯಾಗುವ ಗ್ರಂಥಗಳನ್ನು ಒದಗಿಬೇಕು. ಈ ಮೂಲಕ ಯುವ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲಾ ಗ್ರಂಥಾಲಯದ ಅಧಿಕಾರಿಗಳು ಕೂಡ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಕಂಪ್ಯೂಟರ್ ಬಳಕೆಗೆ ಅವಕಾಶ ನೀಡುತ್ತಿಲ್ಲ ಎಂದಿದ್ದಾರೆ.ಈ ಸಂದರ್ಭದಲ್ಲಿ ಓದುಗರಾದ ವಿಜಯ, ಸುನೀಲ್, ಮಂಜುಳಾ, ನಂದಿತಾ, ರಂಜಿತಾ, ಆರ್.ಎಲ್.ವಿನಾಯಕ, ಮಂಜುನಾಥ ಬಾಳಂಬೀಡ, ವಿ.ಕೆ.ಮಾಳೇಶ, ರುದ್ರು ಹಕ್ಕಲಮನಿ, ಆದರ್ಶ ಪಾಟೀಲ, ಮಜಲಿಯರ, ಕಿರಣ, ಭರತ, ನಂದಿತಾ, ಕಾವೇರಿ, ದರ್ಶನ್, ಲೋಹಿತ, ಕೃಷ್ಣಾ, ಶಿವರಾಜ, ಸುದೀಪ, ಅಜಯ, ಗಣಪತಿ, ಸತೀಶ, ಸುರಮಾನ, ದಯಾನಂದ ಮೊದಲಾದವರು ಇದ್ದರು.