ಓದು, ಬರವಣಿಗೆಯಿಂದ ಮನುಷ್ಯನ ಮನಸ್ಸು ಪರಿಶುದ್ಧ: ಬೀರಣ್ಣ ನಾಯಕ

| Published : Nov 24 2025, 03:00 AM IST

ಸಾರಾಂಶ

ಓದು, ಬರವಣಿಗೆ ಮನುಷ್ಯನ ಮನಸ್ಸನ್ನು ಪರಿಶುದ್ಧ ಮಾಡುತ್ತದೆ. ನಮ್ಮಲ್ಲಿ ಪುಸ್ತಕ, ಸಾಹಿತ್ಯಗಳ ಅಧ್ಯಯನ ಹೆಚ್ಚಬೇಕು.

ಹಿರೇಗುತ್ತಿಯಲ್ಲಿ ಕುಮಟಾ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಚುಟುಕು ಸಾಹಿತಿ

ಕನ್ನಡಪ್ರಭ ವಾರ್ತೆ ಗೋಕರ್ಣ

ಓದು, ಬರವಣಿಗೆ ಮನುಷ್ಯನ ಮನಸ್ಸನ್ನು ಪರಿಶುದ್ಧ ಮಾಡುತ್ತದೆ. ನಮ್ಮಲ್ಲಿ ಪುಸ್ತಕ, ಸಾಹಿತ್ಯಗಳ ಅಧ್ಯಯನ ಹೆಚ್ಚಬೇಕು ಎಂದು ನಿವೃತ್ತ ಶಿಕ್ಷಕ ಚುಟುಕು ಸಾಹಿತಿ ಬೀರಣ್ಣ ಮೋನಪ್ಪ ನಾಯಕ ಹೇಳಿದರು.

ಹಿರೇಗುತ್ತಿಯಲ್ಲಿ ನಡೆದ ಕುಮಟಾ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಸಾಹಿತ್ಯ ಎಂದರೆ ಜೀವನದ ಕನ್ನಡಿ ಎಂದ ಅವರು, ಮಾತೃಭಾಷೆ ಕನ್ನಡ ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಇದಕ್ಕೆ ಓದು-ಬರಹದ ಆಸಕ್ತಿ ಹೆಚ್ಚಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳ ಬೇಕು ಎಂದು ಕರೆ ನೀಡಿದರು.

ಸಮಾರಂಭ ಉದ್ಘಾಟಿಸಿದ ವಿಶ್ರಾಂತ ಪ್ರಾಧ್ಯಾಪಕ ನರೇಂದ್ರ ರೈ ದೆರ್ಲ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಭಾವಿಸುವತನ, ಪ್ರೀತಿಸುವತನ ಕಡಿಮೆಯಾಗುತ್ತಿದೆ. ತರಗತಿಯಲ್ಲಿ ಒಂದು ಗಂಟೆ ಪಾಠ ಕೇಳುವ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಮೊಬೈಲ್‌, ಟಿವಿ ವೀಕ್ಷಣೆಯಲ್ಲಿ ಕಾಲಹರಣ ಮಾಡುತ್ತಿದ್ದು, ಇಂತಹ ಕ್ಲಿಷ್ಟಕರ ಸಮಯದಲ್ಲಿ ಕಾಲೇಜಿನಲ್ಲಿ ಸಾಹಿತ್ಯ ಸಮ್ಮೇಳನಗಳ ನಡೆಯುತ್ತಿರುವುದು ಯುವ ಜನರಿಗೆ ಒಳ್ಳೆಯ ಮಾರ್ಗದರ್ಶನಕ್ಕೆ ಪೂರಕ ಎಂದರು.

ಕೊರೋನಾ ಮಹಾಮಾರಿ ಬಂದಾಗ ಈ ರೋಗದ ಬಗ್ಗೆ ಹಲವು ಚರ್ಚೆ, ಸಂಶೋಧನೆ, ಪ್ರಯೋಗಗಳಾಗಿದೆ. ಆದರೆ ಮನುಷ್ಯನ ಮನಸ್ಸು ಬದಲಾಗಲಿಲ್ಲ ಎಂದರು.

ಪುಸ್ತಕ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ರಾಜ್ಯ ಸರ್ಕಾರ ಇಂತಹ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ ನೀಡಿ ಕನ್ನಡ ಉಳಿಸಿ-ಬೆಳೆಸಲು ಪ್ರೋತ್ಸಾಹ ನೀಡಬೇಕು ಎಂದರು. ಅಲ್ಲದೆ ತಮ್ಮ ಕ್ಷೇತ್ರದಲ್ಲಿ ಶಿಕ್ಷಣಕ್ಕಾಗಿ ಹೆಚ್ಚಿನ ಅನುದಾನ ತಂದು ಶಾಲಾ, ಕಾಲೇಜು ಪ್ರಾರಂಭಿಸಿ ಶಿಕ್ಷಣಕ್ಕೆ ಒತ್ತು ನೀಡಿದ್ದನ್ನು ವಿವರಿಸಿ, ಉಳಿದ ಅಭಿವೃದ್ಧಿ ಕಾರ್ಯದ ಬಗ್ಗೆಯೂ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಸಾಹಿತ್ಯಕ್ಕಾಗಿಯೇ ಹುಟ್ಟಿಕೊಂಡ ಸಾಹಿತ್ಯ ಪರಿಷತ್ ಹಲವು ಕಾರ್ಯಕ್ರಮಗಳು ಹಮ್ಮಿಕೊಂಡು ಭಾಷೆ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಪರಿಷತ್ ಜನಸಾಮಾನ್ಯರಾಗಿದ್ದು, ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ಉಳಿದೆಲ್ಲದಕ್ಕೂ ಅನುದಾನ ನೀಡುವ ಸರ್ಕಾರ ಕನ್ನಡ ಉಳಿಸುವ ಕೆಲಸಕ್ಕೆ ಯಾಕೆ ಅನುದಾನ ನೀಡುತ್ತಿಲ್ಲ ಎಂದು ಪ್ರಶ್ನಿಸಿ, ವಿಷಾದ ವ್ಯಕ್ತಪಡಿಸಿದರು.

ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರಮೋದ ನಾಯ್ಕ ಮಾತನಾಡಿದರು.

ಕುಮಟಾ ತಹಸೀಲ್ದಾರ್‌ ಧ್ವಜಾರೋಹಣ ನೆರವೇರಿಸಿ ಸಮಾರಂಭಕ್ಕೆ ಶುಭ ಕೋರಿದರು. ಆನಂತರ ಹಿರೇಹೊಸಬು ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಆಕರ್ಷಕ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಕರೆತರಲಾಯಿತು. ಗೋಕರ್ಣ ಪೊಲೀಸ್ ಠಾಣೆ ಪಿಐ ಶ್ರೀಧರ ಎಸ್‌.ಆರ್. ಮೆರವಣಿಗೆಗೆ ಚಾಲನೆ ನೀಡಿದರು.

ತಹಸೀಲ್ದಾರ್‌ ಶ್ರೀಕೃಷ್ಣ ಕಾಮಕರ, ಹಿರೇಗುತ್ತಿ ಗ್ರಾಪಂ ಅಧ್ಯಕ್ಷ ಶಾಂತ ನಾಯಕ, ಡಾ. ಎಂ.ಎಚ್. ನಾಯಕ ಕೂಜಳ್ಳಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಆರ್.ಎಲ್. ಭಟ್, ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ಆಡಳಿತ ಮಂಡಳಿಯ ಅಧ್ಯಕ್ಷ ಹೊನ್ನಪ್ಪ ನಾಯಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಕರವೇ ಸ್ವಾಭಿಮಾನ ಬಳದ ಅಧ್ಯಕ್ಷ ರಾಜು ಮಾಸ್ತಿಹಳ್ಳ, ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಆನಂದು ಗಾಂವಕರ, ಹಿರೇಗುತ್ತಿ ಪಿಯು ಕಾಲೇಜಿನ ಪ್ರಾಚಾರ್ಯರು ಉಪಸ್ಥಿತರಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಮೋದ ನಾಯ್ಕ ಸ್ವಾಗತಿಸಿದರು. ನಿವೃತ್ತ ಶಿಕ್ಷಕ, ಸಾಹಿತಿ ಎನ್. ಆರ್. ಗಜು ಮುಖ್ಯದ್ವಾರಗಳಲ್ಲಿನ ಹೆಸರಿರುವ ಸಾಹಿತಿಗಳ ಪರಿಚಯಿಸಿದರು. ಶಿಕ್ಷಕ ಎನ್.ಆರ್. ರಾಮು ಕಾರ್ಯಕ್ರಮ ನಿರ್ವಹಿಸಿದರು. ಪಿಐ ಶ್ರೀಧರ ಎಸ್‌.ಆರ್‌., ಪಿಎಸ್‌ಐ ಖಾದರ ಬಾಷಾ ಹಾಗೂ ಸಿಬ್ಬಂದಿ ಬಂದೋಬಸ್ತ್‌ ಒದಗಿಸಿದ್ದರು.