ಸಮಾಜ ನಿರ್ಮಾಣ ಕಾರ್ಯದಲ್ಲಿ ಎನ್ಸೆಸ್ಸೆಸ್‌ ಮಾರ್ಗದರ್ಶನ: ಮೀನಾಕ್ಷಿ ಭಟ್ಟ

| Published : Nov 24 2025, 03:00 AM IST

ಸಮಾಜ ನಿರ್ಮಾಣ ಕಾರ್ಯದಲ್ಲಿ ಎನ್ಸೆಸ್ಸೆಸ್‌ ಮಾರ್ಗದರ್ಶನ: ಮೀನಾಕ್ಷಿ ಭಟ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿಂದು ನಾನು ಎನ್ನುವುದೇ ಬೆಳೆಸಿಕೊಳ್ಳಲಾಗುತ್ತಿದೆ. ಇದರಿಂದ ಸಮಾಜ ಒಕ್ಕೂಟ ವ್ಯವಸ್ಥೆ ಉಳಿಯದು.

ಆನಗೋಡಿನಲ್ಲಿ ಸರ್ಕಾರಿ ಕಾಲೇಜಿನ ಎನ್‌ಎಸ್‌ಎಸ್‌ ವಿಶೇಷ ಶಿಬಿರ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಸಮಾಜದಲ್ಲಿಂದು ನಾನು ಎನ್ನುವುದೇ ಬೆಳೆಸಿಕೊಳ್ಳಲಾಗುತ್ತಿದೆ. ಇದರಿಂದ ಸಮಾಜ ಒಕ್ಕೂಟ ವ್ಯವಸ್ಥೆ ಉಳಿಯದು. ಅದನ್ನು ಬಿಟ್ಟು ನಾವು ಎನ್ನುವ ಭಾವನೆ ಮೂಡಿಸಿ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ಎನ್.ಎಸ್.ಎಸ್. ಉತ್ತಮ ಮಾರ್ಗದರ್ಶನ ನೀಡುತ್ತದೆ ಎಂದು ಆನಗೋಡು ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಭಟ್ಟ ಹೇಳಿದರು.

ತಾಲೂಕಿನ ಆನಗೋಡು ಗ್ರಾಪಂ ಸಭಾಭವನದಲ್ಲಿ ಶುಕ್ರವಾರ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್‌ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಸಮಾಜಕ್ಕೆ ನೆರವಾಗುವಂತಹ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ದನ ಮಾತನಾಡಿ, ವ್ಯಕ್ತಿತ್ವ ನಿರ್ಮಾಣದಿಂದ ಮಾತ್ರ ವ್ಯಕ್ತಿ ನಿರ್ಮಾಣವಾಗುತ್ತದೆ. ನಾವು ಸೇವೆ ಸಲ್ಲಿಸಿದಾಗ ಮಾತ್ರ ಸೇವೆ ಪಡೆಯುವ ಹಕ್ಕಿದೆ. ಒಬ್ಬನನ್ನು ಬದಲಾಯಿಸಿದರೆ ಸಮಾಜ ಬದಲಾಯಿಸಬಹುದು. ಆ ಕೆಲಸವನ್ನು ಶಿಕ್ಷಕರಾದವರು ಮಾಡಬೇಕು. ಮಾಹಿತಿ ಸಂಗ್ರಹ ಮಾಡಿದ ಮಾತ್ರಕ್ಕೆ ಬುದ್ಧಿವಂತರಾಗಲು ಸಾಧ್ಯವಿಲ್ಲ. ಸಮಾಜ ಕಟ್ಟುವ ಕಾರ್ಯವನ್ನು ಭಾವನಾತ್ಮಕವಾಗಿ ಬುದ್ಧಿವಂತರಾಗಿರುವವರು ಮಾಡುತ್ತಾರೆ ಎಂದರು.

ವೈಟಿಎಸ್‌ಎಸ್‌ ಶಿಕ್ಷಣ ಸಂಸ್ಥೆಯ ನಿರ್ದೇಶಕ ನಾಗರಾಜ ಮದ್ಗುಣಿ ಮಾತನಾಡಿ, ಅಂಕ ಗಳಿಕೆಯ ಬೆನ್ನು ಹತ್ತಿದ ವಿದ್ಯಾರ್ಥಿಗಳು ಸಾಮಾಜಿಕವಾಗಿ ಹಿಂದುಳಿಯುತ್ತಾರೆ. ಉತ್ತಮ ವ್ಯಕ್ತಿತ್ವ, ನಾಯಕತ್ವ ಗುಣ, ಸೇವಾ ಮನೋಭಾವ ಇದ್ದವನು ಮಾತ್ರ ಸಾಮಾಜಿಕವಾಗಿ ಸಾಧನೆ ಮಾಡಲು ಸಾಧ್ಯ. ಈ ಗುಣಗಳನ್ನು ಎನ್‌ಎಸ್‌ಎಸ್‌ ಕಲಿಸುತ್ತದೆ ಎಂದರು.

ಮುಖ್ಯ ಶಿಕ್ಷಕಿ ಪ್ರತಿಭಾ ನಾಯ್ಕ, ಗ್ರಾಪಂ ಅಧ್ಯಕ್ಷೆ ಕುಸುಮಾ ಸಿದ್ದಿ, ಎಸ್‌ಡಿಎಂಸಿ ಅಧ್ಯಕ್ಷ ನಾಗೇಂದ್ರ ಭಟ್ಟ ಮಾತನಾಡಿದರು. ಗ್ರಾಪಂ ಸದಸ್ಯೆ ಭಾರತಿ ನಾಯ್ಕ, ಸಿಡಿಸಿ ಸಮಿತಿ ಸದಸ್ಯ ಡಿ.ಎನ್. ಗಾಂವ್ಕರ್, ಶಿಕ್ಷಣಪ್ರೇಮಿ ಜಿ.ಜಿ. ಭಟ್ಟ, ಶಿಕ್ಷಕರಾದ ಸೌಮ್ಯಶ್ರೀ ಹಾನಗಲ್, ಸುಮಂಗಲಾ ಉಪಸ್ಥಿತರಿದ್ದರು.

ಲಕ್ಷ್ಮೀ ಪ್ರಾರ್ಥಿಸಿದರು. ಉಪನ್ಯಾಸಕ ಡಾ. ಓಂಪ್ರಕಾಶ ನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮಾಧಿಕಾರಿ ರವಿ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ರಂಜನಾ ಮರಾಠಿ ವಂದಿಸಿದರು.