ಬೀದರ್‌ನ ಗುಮ್ಮೆ ಬಡಾವಣೆಯ ಸಾಹಿತಿ ಶಿಲ್ಪಾ ಮಹೇಶ ಮಜಗೆ ಅವರ ನಿವಾಸದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಪುಸ್ತಕಗಳು ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿ ಇಡೀ ಜಗತ್ತಿನ ಜ್ಞಾನ ನೀಡುತ್ತವೆ. ಪರಸ್ಪರ ಸಂಬಂಧ ಬೆಳೆಸುತ್ತವೆ. ಉತ್ತಮ ಸಮಾಜ ಕಟ್ಟಲು ಕೃತಿ ಓದುವುದು ಅಗತ್ಯ ಎಂದು ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪಾ ಮಾಸಿಮಾಡೆ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಜಾಗೃತ ಸಮಿತಿ ಬೀದರ್‌ ಸಹಯೋಗದಲ್ಲಿ‌ ಬೀದರ್‌ನ ಗುಮ್ಮೆ ಬಡಾವಣೆಯ ಸಾಹಿತಿ ಶಿಲ್ಪಾ ಮಹೇಶ ಮಜಗೆ ಅವರ ನಿವಾಸದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆಯಾಗಿ ಮನೆಮನೆಗಳಲ್ಲಿ ಪತ್ರಿಕೆ, ಪುಸ್ತಕಗಳನ್ನು ಓದುವವರ ಸಂಖ್ಯೆ ಅಧಿಕವಾಗ ಬೇಕಿದೆ. ಪುಸ್ತಕ ಗಳ ಓದಿನಿಂದ ಪ್ರಬುದ್ಧತೆ ಬೆಳೆಯುತ್ತದೆ. ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಪುಸ್ತಕಗಳು ಸಹಕಾರಿಯಾಗಿವೆ ಎಂದರು.

ಹಿರಿಯ ಸಾಹಿತಿ ಭಾರತಿ ವಸ್ತ್ರದ್‌ ಅವರು ವಿಶೇಷ ಉಪನ್ಯಾಸ ನೀಡಿ, ಆಧುನಿಕತೆಯ ಭರಾಟೆಯಲ್ಲಿ ನಾವು ಓದಿನ ಅಭಿರುಚಿ ಕಳೆದುಕೊಳ್ಳುತ್ತಿದ್ದೇವೆ. ಮನೆಯಲ್ಲಿ ಪುಸ್ತಕ ಸಂಗ್ರಹಣೆಗೆ ಸ್ಥಳ ಮೀಸಲಿಡಬೇಕೆಂಬ ಆಸಕ್ತಿ ಸಹ ತೋರುತ್ತಿಲ್ಲ. ಆದರೆ, ಪುಸ್ತಕ ಓದಿನಿಂದ ಜಗತ್ತಿನ ಜ್ಞಾನ ಕಲಿಯಲು ಸಾಧ್ಯ. ಮನೆಯಲ್ಲಿ ಪುಸ್ತಕ ಗ್ರಂಥಾಲಯವಿದ್ದರೆ ಸಾಹಿತ್ಯ, ಸಂಸ್ಕೃತಿಯ ವಾತಾವರಣ ನಿರ್ಮಾಣವಾಗುತ್ತದೆ ಎಂಬುದನ್ನು ತಿಳಿಯಬೇಕಿದೆ. ಓದಿನ ಹವ್ಯಾಸವು ಮನಸ್ಸಿನ ಏಕಾಗ್ರತೆ, ನೆಮ್ಮದಿ, ಜ್ಞಾನ ವೃದ್ಧಿಸುತ್ತದೆ. ಎಲ್ಲೆಡೆ ಮನೆಗೊಂದು ಪುಸ್ತಕಾಲಯ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಬಾಲಾಜಿ ಕುಂಬಾರ ಪ್ರಾಸ್ತಾವಿಕ ಮಾತನಾಡಿ, ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರಿದ್ದಂತೆ. ಎಲ್ಲರ ಮನೆಯಲ್ಲಿ ದೇವರ ಕೋಣೆ ಇರುವಂತೆ ಮನೆಯಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಜಾಗ ಮೀಸಲಿಡಬೇಕು ಎಂದರು.

ಸಾಹಿತಿ ಶಿಲ್ಪಾ ಮಹೇಶ ಮಜಗೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ರಘುಶಂಖ ಭಾತಂಬ್ರಾ ಅವರು ಪುಸ್ತಕಗಳ ಮಹತ್ವದ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿಲ್ಪಾ ಮಜಗೆ ಅವರ ಮನೆಯಲ್ಲಿ ಸ್ಥಾಪಿಸಿದ ‘ಪುಸ್ತಕ ಕುಂಜʼ ನೂತನ ಗ್ರಂಥಾಲಯ ಕೋಣೆಯನ್ನು ಉದ್ಘಾಟಿಸಲಾಯಿತು.

ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ಜಯದೇವಿ ಯದಲಾಪುರೆ, ಲಕ್ಷ್ಮಣ ಮೇತ್ರೆ ಸೇರಿದಂತೆ ಸಾಹಿತ್ಯಾಸಕ್ತರಾದ ಶಂಭುಲಿಂಗ ವಾಲ್ದೊಡ್ಡಿ, ಮಹೇಶ ಮಜಗೆ, ಹಂಸಕವಿ, ಶೈಲಜಾ ಹುಡಗೆ, ಕೀರ್ತಿಲತಾ ಹೊಸಳ್ಳಿ, ಮಹೇಶ್ವರಿ ಹೇಡೆ, ಸಿದ್ದಮ್ಮ ಹಳಕಾಯಿ, ನಾಗಯ್ಯಸ್ವಾಮಿ, ಜಗದೇವಿ ತಿಬಶೆಟ್ಟಿ, ಆರ್‌ಎಸ್‌ ಬಿರಾದರ್‌, ಬಸವರಾಜ ಸಿಂದಬಂದಗೆ, ದಿನೇಶ ಕೊಂಡಾ ಸೇರಿ ಅನೇಕರು ಉಪಸ್ಥಿತರಿದ್ದರು. ಲಕ್ಷ್ಮಿ ಬಿರಾದರ್‌ ಸ್ವಾಗತಿಸಿದರು. ಸ್ವರೂಪರಾಣಿ ನಾಗೂರೆ ನಿರೂಪಿಸಿದರು. ಆಶಾ ಕೋಟೆ ವಂದಿಸಿದರು.