ಸಾಹಿತ್ಯ ಓದಿನಿಂದ ಜ್ಞಾನ ಹೆಚ್ಚಳ: ರಾಜ್‌ ಆಚಾರ್ಯ

| Published : Mar 21 2025, 12:33 AM IST

ಸಾರಾಂಶ

ಬದುಕಲು ಬೇಕಾದಂತಹ ಸೌಲಭ್ಯಕ್ಕಾಗಿ ಎಲೆಕ್ಟ್ರಾನಿಕ್ಸ್‌, ಮೆಕ್ಯಾನಿಕಲ್‌ ಸೇರಿದಂತೆ ಯಂತ್ರೋಪಕರಣಗಳಿಗೆ ಸಂಬಂಧಿಸಿದ ಕೋರ್ಸ್‌ಗಳಿವೆ. ಆದರೆ ಇವುಗಳಿಂದ ಜ್ಞಾನವನ್ನು ಕಲಿಸಿಕೊಡಲು ಸಾಧ್ಯವಿಲ್ಲ. ಜ್ಞಾನವನ್ನು ಅಳವಡಿಸಿಕೊಳ್ಳುವುದು ಮತ್ತು ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆನ್ನುವುದನ್ನು ಸಾಹಿತ್ಯ ಹೇಳಿಕೊಡುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

‘ಬದುಕಲ್ಲಿ ಸ್ವೀಕರಿಸಬೇಕೆನ್ನುವ ಜ್ಞಾನ ಪ್ರತಿಯೊಬ್ಬರಲ್ಲಿಯೂ ಇರಬೇಕಿದ್ದು, ಆ ಜ್ಞಾನ ಹೆಚ್ಚಳಕ್ಕಾಗಿ ಸಾಹಿತ್ಯ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಸಾಹಿತಿ ರಾಜ್‌ ಆಚಾರ್ಯ ಸಲಹೆ ನೀಡಿದರು.

ನಗರದ ಡಿ.ದೇವರಾಜ ಅರಸು ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಡಿವಿಜಿ ಕಗ್ಗ ಬಳಗ, ಷುಗರ್‌ ಸಿಟಿ ಅಲಯನ್ಸ್‌ ಕ್ಲಬ್‌, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಡಿ.ವಿ.ಜಿ. ಮತ್ತು ಪು.ತಿ.ನ. ಜಯಂತಿ ಅಂಗವಾಗಿ ಮಂಗಳವಾರ ನಡೆದ ‘ಬದುಕು ಜಟಕಾಬಂಡಿ–ಬಾಡ ಒಲವೇ, ಕಗ್ಗ ವಾಚನ-ಗೀತ ಗಾಯನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಬದುಕಲು ಬೇಕಾದಂತಹ ಸೌಲಭ್ಯಕ್ಕಾಗಿ ಎಲೆಕ್ಟ್ರಾನಿಕ್ಸ್‌, ಮೆಕ್ಯಾನಿಕಲ್‌ ಸೇರಿದಂತೆ ಯಂತ್ರೋಪಕರಣಗಳಿಗೆ ಸಂಬಂಧಿಸಿದ ಕೋರ್ಸ್‌ಗಳಿವೆ. ಆದರೆ ಇವುಗಳಿಂದ ಜ್ಞಾನವನ್ನು ಕಲಿಸಿಕೊಡಲು ಸಾಧ್ಯವಿಲ್ಲ. ಜ್ಞಾನವನ್ನು ಅಳವಡಿಸಿಕೊಳ್ಳುವುದು ಮತ್ತು ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆನ್ನುವುದನ್ನು ಸಾಹಿತ್ಯ ಹೇಳಿಕೊಡುತ್ತದೆ ಎಂದು ಪ್ರತಿಪಾದಿಸಿದರು.

ವಿದ್ಯೆಯಲ್ಲಿ ಅನುತ್ತೀರ್ಣರಾದವರು ಸಾಹಿತ್ಯ ಓದುವುದರಲ್ಲಿ ಅವರು ಉತ್ತೀರ್ಣರಾಗುತ್ತಾರೆ ಎನ್ನುವುದು ನನ್ನ ಅಭಿಪ್ರಾಯ. ಹೃದಯವಂತಿಕೆ ಬೆಳೆಸುವುದು ಮಾತ್ರ ಸಾಹಿತ್ಯ ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಸಾಹಿತ್ಯ ಏಕೆ ಬೇಕು ಮತ್ತು ಏಕೆ ಓದಬೇಕು ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಉದ್ಘಾಟಿಸಿ ಮಾತನಾಡಿದ ತ.ನಾ.ಶಿವಕುಮಾರ್, ನಾಡಿನ ಸಾಹಿತಿ, ಕವಿಗಳಾದ ಡಿ.ವಿ.ಜಿ. ಮತ್ತು ಪು.ತಿ.ನ. ಅವರು ಜ್ಞಾನಪೀಠ ಪುರಸ್ಕಾರಕ್ಕೂ ಮೀರಿದ ವ್ಯಕ್ತಿತ್ವ ಉಳ್ಳವರು. ಸಾಹಿತಿಗಳಾದವರ ಎಷ್ಟೋ ಹೆಸರುಗಳನ್ನು ಕೇಳಿರುವುದಿಲ್ಲ, ಅವರ ಕೃತಿಗಳನ್ನು ಓದಿರುತ್ತೇವೆ ಎಂದರು.

ಅಲಯನ್ಸ್‌ ಸಂಸ್ಥೆಯ ಗೌರ್ನರ್‌ ಕೆ.ಟಿ.ಹನುಮಂತು ಮಾತನಾಡಿ, ಕನ್ನಡ ಸಾರಸತ್ವ ಲೋಕದ ಧ್ರುವತಾರೆಗಳಾಗಿ ಡಿ.ವಿ.ಜಿ. ಮತ್ತು ಪು.ತಿ.ನ. ನಿಲ್ಲುತ್ತಾರೆ. ಇವರಿಬ್ಬರಿಗೂ ಜ್ಞಾನಪೀಠ ಸಿಗಲಿಲ್ಲ ಎನ್ನುವ ನೋವು ಸಾಹಿತ್ಯ ಲೋಕದಲ್ಲಿದೆ. ಪು.ತಿ.ನ. ಅವರ ಭಾವಗೀತೆ, ಪ್ರೇಮಗೀತೆ, ಸಾಹಿತ್ಯವನ್ನು ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಸಾಹಿತ್ಯ ಓದುವುದರಿಂದ ನೆಮ್ಮದಿ ಹೆಚ್ಚಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅಲಯನ್ಸ್‌ ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್‌.ಚಂದ್ರಶೇಖರ್‌, ಪ್ರತಿಭಾಂಜಲಿ ಡೇವಿಡ್‌, ಬಳಗದ ಭವಾನಿ ಲೋಕೇಶ್‌ ಭಾಗವಹಿಸಿದ್ದರು.