ಸಾರಾಂಶ
ಒಂದು ಗಿಡ ಬೆಳೆದು, ಪ್ರಕೃತಿಯಿಂದ ಅದು ಬೇಕಾದುದನ್ನು ಪಡೆದು, ಕೊಡಬೇಕಾದುದನ್ನು ಕೊಟ್ಟು, ಅದರ ಜೀವನವನ್ನು ಚೆನ್ನಾಗಿ ಮಾಡಲಿಕ್ಕೆ ಮನುಷ್ಯರ ಸಹಕಾರ ಬೇಕಾಗಿಯೇ ಇಲ್ಲ ಎಂದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಮಹಾಭಾರತ ಹಳೆಕಾಲದ ಗ್ರಂಥ. ಇದನ್ನು ಓದದಿದ್ದರೆ ಏನೂ ಆಗುವುದಿಲ್ಲ. ಮಹಾಭಾರತವನ್ನು ಓದಿದರೆ ಕಾಡಬೇಕು. ಹಲವು ಚಿಂತನೆಗಳಿಂದಲೇ ಮಹಾಭಾರತ ಇವತ್ತಿಗೂ ಪ್ರಸ್ತುತ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದ್ದಾರೆ.ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾಸಂಸ್ಥೆಯ ಸಂಯೋಜನೆಯಲ್ಲಿ ನಡೆಯುತ್ತಿರುವ ಭ್ರಮರ ಇಂಚರ ನುಡಿಹಬ್ಬದ ಎರಡನೆಯ ದಿನ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಜೀವನದಲ್ಲಿ ನಾವು ಏನೋ ಆಗಬೇಕು ಎಂದು ಬಯಸುತ್ತಿರುತ್ತೇವೆ. ಆ ಏನೋ ಒಂದು ಆಗುವ ಸಾಧ್ಯತೆ ಇದೆ. ಸಂಕಟ ಪಡೆಯದೆ ಸಾಕ್ಷಾತ್ಕಾರ ಕಷ್ಟ. ದೊಡ್ಡ ದೊಡ್ಡ ಪದಗಳ ಜೊತೆಗೆ ಇರುವುದು ಸತ್ಯ ಶೋಧನೆ. ಶೋಧನೆ ಮಾಡದೆ ಸತ್ಯ ತಿಳಿಯುವುದಿಲ್ಲ. ಧರ್ಮ ಸಂಕಟ ಎಂಬ ಪದವೂ ಹಾಗೆಯೇ. ವ್ಯಕ್ತಿತ್ವವನ್ನೇ ಕಲಿತದ್ದನ್ನು ಪಣಕ್ಕಿಡದೆ ಸತ್ಯಶೋಧನೆ ಆಗುವುದಿಲ್ಲ. ಪಡಲೇಬೇಕಾದ ದುಃಖ ಅಥವಾ ಸಂಕಟ ಎನ್ನುವುದು ಜೀವನದ ಮೊದಲ ದರ್ಶನ.ಒಂದು ಗಿಡ ಬೆಳೆದು, ಪ್ರಕೃತಿಯಿಂದ ಅದು ಬೇಕಾದುದನ್ನು ಪಡೆದು, ಕೊಡಬೇಕಾದುದನ್ನು ಕೊಟ್ಟು, ಅದರ ಜೀವನವನ್ನು ಚೆನ್ನಾಗಿ ಮಾಡಲಿಕ್ಕೆ ಮನುಷ್ಯರ ಸಹಕಾರ ಬೇಕಾಗಿಯೇ ಇಲ್ಲ ಎಂದರು.