ಇಂದಿನ ಯುವಜನರ ಓದುವ ಹವ್ಯಾಸವು ಡಿಜಿಟಲ್‌ನತ್ತ ಹೊರಳುತ್ತಿದ್ದರೂ ಪತ್ರಿಕೆ ಓದುವುದರಿಂದ ಬಹಳಷ್ಟು ಗ್ರಹಿಸಬಹುದು ಎಂದು ಪತ್ರಕರ್ತೆ ದೀಪಾ ಗಣೇಶ್‌ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇಂದಿನ ಯುವಜನರ ಓದುವ ಹವ್ಯಾಸವು ಡಿಜಿಟಲ್‌ನತ್ತ ಹೊರಳುತ್ತಿದ್ದರೂ ಪತ್ರಿಕೆ ಓದುವುದರಿಂದ ಬಹಳಷ್ಟು ಗ್ರಹಿಸಬಹುದು ಎಂದು ಪತ್ರಕರ್ತೆ ದೀಪಾ ಗಣೇಶ್‌ ಅಭಿಪ್ರಾಯಪಟ್ಟರು.

ದೊಮ್ಮಲೂರಿನ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಬಹುವಚನ ಟ್ರಸ್ಟ್‌ನಿಂದ ಆಯೋಜಿಸಿದ್ದ ಕಾದಂಬರಿಕಾರ ವಿವೇಕ ಶಾನ್‌ಭಾಗ್‌ ಸಂಸ್ಥಾಪನೆಯ, ಪತ್ರಕರ್ತೆ ದೀಪಾ ಗಣೇಶ್‌ ಸಂಪಾದನೆಯ ಭಾರತೀಯ ಭಾಷಾ ಸಾಹಿತ್ಯ ಕುರಿತ ಅರ್ಧ ವಾರ್ಷಿಕ ನಿಯತಕಾಲಿಕೆ ‘ಹೈಪೆನ್‌’ನ ಮೊದಲ ಸಂಚಿಕೆ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಯುವಜನರ ಓದುವ ಹವ್ಯಾಸವು ಇಂದಿನ ಡಿಜಿಟಲ್‌ ಯುಗದಲ್ಲಿ ಮೊಬೈಲ್‌, ಸಾಮಾಜಿಕ ಜಾಲತಾಣ ಮತ್ತಿತರ ಕಡೆ ಹೊರಳುತ್ತಿದೆ. ಹೀಗಿದ್ದರೂ ಪತ್ರಿಕೆ ಓದುವುದರಿಂದ ಬಹಳಷ್ಟು ಗ್ರಹಿಸಬಹುದು. ಡಿಜಿಟಲ್‌ ಮಾಧ್ಯಮಕ್ಕೆ ಪೈಪೋಟಿ ನೀಡುತ್ತಿದ್ದರೂ ಮುದ್ರಣ ಮಾಧ್ಯಮಕ್ಕೆ ಅದರದೇ ಮಾನ್ಯತೆ ಇದೆ. ಈ ಹಿನ್ನೆಲೆಯಲ್ಲಿ ‘ಹೈಪೆನ್‌’ ಮಹತ್ವದ ಹೆಜ್ಜೆಯಾಗಿದೆ ಎಂದು ಬಣ್ಣಿಸಿದರು.

ಕವಿ ರಂಜಿತ್‌ ಹೊಸಕೋಟೆ ಮಾತನಾಡಿ, ಅತ್ಯಂತ ಪ್ರಭಾವಶಾಲಿ ಹಾಗೂ ಸ್ಮರಣೀಯ ಕಥೆಗಳ ರಚನೆಕಾರ ಜಿ.ಎ.ಕುಲಕರ್ಣಿ ಅವರ‘ಚಂದ್ರವಾಳ’ ಎಂಬ ವಿಶಿಷ್ಟ ಕತೆಯ ಅನುವಾದವು ಇದರಲ್ಲಿ ಸೇರಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಹಳೆಯ ಬಾಂಬೆ ಪ್ರೆಸಿಡೆನ್ಸಿ ಪ್ರದೇಶದ ಕನ್ನಡ ಮಾತನಾಡುವ ಕುಟುಂಬವೊಂದರಲ್ಲಿ ಜನಿಸಿದ ಕುಲಕರ್ಣಿ ಅವರು ಇಂಗ್ಲಿಷ್ ಮತ್ತು ಅಮೆರಿಕನ್ ಸಾಹಿತ್ಯವನ್ನು ಬೋಧಿಸುತ್ತಿದ್ದರು. ಜೊತೆಗೆ, ಸ್ಥಳೀಯ ಸಂಸ್ಕೃತಿ ಹಾಗೂ ಯುರೋಪಿಯನ್ ಸಾಹಿತ್ಯ ಪರಂಪರೆಗಳೆರಡನ್ನೂ ಅಳವಡಿಸಿಕೊಂಡು ಮರಾಠಿಯಲ್ಲಿ ಬರೆಯುವುದನ್ನು ಆಯ್ಕೆ ಮಾಡಿಕೊಂಡರು. ‘ಸಹಜ ವಿಶ್ವಸಂಸ್ಕೃತಿ ಪ್ರಜ್ಞೆ’ ಗುಣಕ್ಕೆ ಇವರು ಅತ್ಯುತ್ತಮ ನಿದರ್ಶನವಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಮ್ಮ ನ್ಯಾಯಯುತ ಹಕ್ಕಿಗಾಗಿ ಅಸಂಖ್ಯ ಯುವಜನರು ನಿರಾಯುಧರಾಗಿ ದೇಶದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರ ಮೇಲೆ ತೀವ್ರ ದೌರ್ಜನ್ಯ ನಡೆಯುತ್ತಿದ್ದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಇಂತಹ ಸಂದರ್ಭದಲ್ಲಿ ಪುಸ್ತಕ ಲೋಕಾರ್ಪಣೆ, ನಿಯತಕಾಲಿಕೆ ಬಿಡುಗಡೆ, ನಾಟಕ, ಚಲನಚಿತ್ರ ಮತ್ತಿತರ ಅಭಿವ್ಯಕ್ತಿಗಳ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವೇ ಎಂದು ನಮ್ಮಲ್ಲಿ ಅನೇಕರು ಪ್ರಶ್ನಿಸಿಕೊಂಡಿದ್ದೇವೆ ಎಂದು ಹೇಳಿದರು.

ಇದಕ್ಕಿಂತ ಸೂಕ್ತವಾದ ಸಮಯ ಇನ್ನೊಂದಿಲ್ಲ. ನಮ್ಮ ಮಾನವೀಯ ಸಾಧ್ಯತೆಗಳನ್ನು ಸಂಕುಚಿತಗೊಳಿಸಲು, ನಿರ್ಬಂಧಿಸಲು ಯತ್ನಿಸುವ ಸವಾರ್ಧಿಕಾರದ ವಿರುದ್ಧ ಪ್ರತಿರೋಧ ತೋರಿಸುವುದು ನಮ್ಮ ಅವಿಭಾಜ್ಯ ಅಂಗವಾಗಿದೆ. ರಾಜ ಅಲೆಕ್ಸಾಂಡರ್‌ನನ್ನೇ ತನ್ನ ಹಾದಿಯಲ್ಲಿ ಸಾಗದಂತೆ ತಡೆಹಿಡಿದು ನಿಲ್ಲಿಸಿದ ವಾಕ್‌ ವಾಕ್‌ ಮರದಂತೆ ನಾವು ಪ್ರತಿರೋಧ ತೋರಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಾದಂಬರಿಕಾರ ವಿವೇಕ ಶಾನ್‌ಭಾಗ್‌, ನಟಿ ಅರುಂಧತಿ ನಾಗ್‌, ಸಾಹಿತಿಗಳಾದ ಉತ್ತರ ಪ್ರದೇಶದ ನಮಿತಾ ಗೋಖಲೆ, ಗೀತಾಂಜಲಿ ಶ್ರೀ ಮತ್ತಿತರರು ಉಪಸ್ಥಿತರಿದ್ದರು.