ಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿ

| Published : Mar 22 2025, 02:03 AM IST

ಸಾರಾಂಶ

ಪತ್ರಿಕೋದ್ಯಮ ರಂಗದಲ್ಲಿ ಅವಕಾಶಗಳು ಹೆಚ್ಚು, ವಿದ್ಯಾರ್ಥಿಗಳು ಕೌಶಲ್ಯ ಅಭಿವೃದ್ಧಿ ಹೊಂದುವುದರ ಮೂಲಕ ಪತ್ರಿಕೋದ್ಯಮ ವೃತ್ತಿಯಲ್ಲಿ ಮುಂದುವರೆಯಬಹುದು

ಬಳ್ಳಾರಿ: ಪತ್ರಿಕೋದ್ಯಮ ಎಂಬುದು ಜನರ ಜೀವನಾಡಿಯಂತಿದ್ದು, ಬದಲಾಗುತ್ತಿರುವ ಶಿಕ್ಷಣ ಕ್ರಮದಲ್ಲಿ ಕೌಶಲ್ಯ ಆಧಾರಿತ ತಾಂತ್ರಿಕ ಕಲಿಕೆಗೆ ಒತ್ತು ನೀಡಬೇಕು. ದಿನವೂ ಪತ್ರಿಕೆ ಓದುವ ಹವ್ಯಾಸದಿಂದ ಜ್ಞಾನ ವೃದ್ಧಿಸಿಕೊಳ್ಳಬಹುದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಮುನಿರಾಜು ಹೇಳಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪತ್ರಿಕೋದ್ಯಮ ರಂಗದಲ್ಲಿ ಅವಕಾಶಗಳು ಹೆಚ್ಚು, ವಿದ್ಯಾರ್ಥಿಗಳು ಕೌಶಲ್ಯ ಅಭಿವೃದ್ಧಿ ಹೊಂದುವುದರ ಮೂಲಕ ಪತ್ರಿಕೋದ್ಯಮ ವೃತ್ತಿಯಲ್ಲಿ ಮುಂದುವರೆಯಬಹುದು ಎಂದರು.

ಪತ್ರಿಕೋದ್ಯಮ ಶಿಕ್ಷಣ ಗಟ್ಟಿಗೊಳಿಸಲು ಮುಂಬರುವ ದಿನಗಳಲ್ಲಿ ವಿವಿಯಲ್ಲಿ ಸುಸಜ್ಜಿತ ಸ್ಟುಡಿಯೋ ಹಾಗೂ ಅತ್ಯಾಧುನಿಕ ಉಪಕರಣ ಒದಗಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಕುಲಸಚಿವ ರುದ್ರೇಶ್ ಎಸ್.ಎನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಬರೆಯಬೇಕು. ಬರೆಯುವುದರಿಂದ ಬರವಣಿಗೆಯಲ್ಲಿನ ಲೋಪದೋಷಗಳು ಮನವರಿಕೆಯಾಗುತ್ತವೆ. ಇದರಿಂದ ಬರವಣಿಗೆಯ ಕೌಶಲ್ಯ ವೃದ್ಧಿಸುತ್ತದೆ. ಇದರ ಜತೆಗೆ ಮಾತನಾಡುವ ಕೌಶಲ್ಯ ಸಹ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ಹರಿಶಂಕರ್ ಜಿ.ಪಾಳ್ಯ ಮಾತನಾಡಿ, ತನಿಖಾ ಪತ್ರಿಕೋದ್ಯಮ ಆಯ್ಕೆ ಮಾಡಿಕೊಳ್ಳುವವರು ನಿರ್ಭೀತಿ ಮತ್ತು ಆಮೀಷಕ್ಕೆ ತುತ್ತಾಗದಂತೆ ಕೆಲಸ ಮಾಡುವುದು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಪತ್ರಿಕೋದ್ಯಮ ಎಂಬುದು ಹುಲಿಯ ಮೇಲಿನ ಸವಾರಿ ಇದ್ದಂತೆ. ಅಡ್ಡದಾರಿ ಹಿಡಿಯದೆ ನೈತಿಕ ಪತ್ರಿಕೋದ್ಯಮ ಅಂತರಾಳ ಮಾಡಿಕೊಂಡು ಕೆಲಸ ನಿರ್ವಹಿಸಿದಲ್ಲಿ ಯಾರ ಹಂಗಿಲ್ಲದೆ ಈ ಕ್ಷೇತ್ರದಲ್ಲಿ ಮುಂದುವರೆಯಬಹುದು ಎಂದು ತಿಳಿಸಿದರು.

ಬಳಿಕ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ರಾಕೇಶ್ ವಿ.ತಾಳಿಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಬ್ಬಂದಿ ಧನುಂಜಯ ಭಟ್ ಸ್ವಾಗತಿಸಿದರು. ಡಾ. ಜಯರಾಜ.ಎಚ್ ನಿರೂಪಿಸಿ ವಂದಿಸಿದರು. ಪತ್ರಿಕೋದ್ಯಮದ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.