ಸಾರಾಂಶ
ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ 2025 ಕಾರ್ಯಕ್ರಮ ನಡೆಯಿತು.
ಕನ್ನಡಪ್ರ ವಾರ್ತೆ ಕಾರ್ಕಳಪತ್ರಿಕೆ ಓದುವುದು ವಿದ್ಯಾರ್ಥಿಗಳಲ್ಲಿ ವಿಚಾರ ವಿಶ್ಲೇಷಣಾ ಸಾಮರ್ಥ್ಯ ಮತ್ತು ಜಗತ್ತಿನ ಅರಿವನ್ನು ಬೆಳೆಸುವ ಉತ್ತಮ ಮಾರ್ಗವಾಗಿದೆ ಎಂದು ಉಡುಪಿ ಟಿ.ಎಂ.ಎ. ಪೈ ಮಹಾವಿದ್ಯಾಲಯದ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಪತ್ರಿಕಾ ದಿನಾಚರಣೆ 2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕ್ರಿಯೇಟಿವ್ ಕಾಲೇಜಿನ ಸ್ಥಾಪಕ ಅಶ್ವತ್ ಎಸ್.ಎಲ್. ಮಾತನಾಡಿ, ಮಾಧ್ಯಮಗಳು ಸತ್ಯ, ನ್ಯಾಯ ಹಾಗೂ ಸಮಾನತೆಯ ಪರಿಯಾಗಿ ಕೆಲಸ ಮಾಡಬೇಕು. ಮಾಧ್ಯಮದ ನೈತಿಕ ಬದ್ಧತೆ ಮತ್ತು ಸಾಮಾಜಿಕ ಜವಾಬ್ದಾರಿ ಬಲವಾಗಿರುವಾಗಲೇ ಸಮಾಜದ ನೈತಿಕ ಬುನಾದಿ ಬಲಪಡಿಸಬಹುದು ಎಂಬ ಮಾತುಗಳ ಮೂಲಕ ಮಾಧ್ಯಮದ ಮಹತ್ವ ತಿಳಿಸಿದರು.
ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಎಂ.ಎಸ್. ಮಾತನಾಡಿ, ಪತ್ರಿಕೆ ಓದುವ ಮೂಲಕ ಭಾಷಾ ನುಡಿ ಹಾಗೂ ಬರವಣಿಗೆಯ ಗುಣಾತ್ಮಕ ಸುಧಾರಣೆ ಸಾಧ್ಯವಿದೆ ಎಂದರು.ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್ ಮಾತನಾಡಿ, ಪತ್ರಿಕೆಗಳು ನಾಡಿನ ಧ್ವನಿ. ಭಾಷೆಯ ಸಂರಕ್ಷಣೆಗೂ ಸಂಸ್ಕೃತಿಯ ಅಭಿವೃದ್ಧಿಗೂ ಅವುಗಳ ಪಾತ್ರ ಅಮೂಲ್ಯವಾಗಿದೆ ಎಂದು ಹೇಳಿದರು.
ತೆಳ್ಳಾರಿನ ಹಿರಿಯ ಪತ್ರಿಕಾ ವಿತರಕ ಸದಾನಂದ ಪಾಟ್ಕರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಹರೀಶ್ ಆಚಾರ್ಯ, ಕೋಶಾಧಿಕಾರಿ ಕೆ.ಎಂ. ಖಲೀಲ್, ಜಿಲ್ಲಾ ಪ್ರತಿನಿಧಿ ಉದಯ್ ಕುಮಾರ್ ಮುಂಡ್ಕೂರು, ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ವಾಸುದೇವ ಭಟ್ ಸ್ವಾಗತಿಸಿದರು. ಉಪನ್ಯಾಸಕಿ ಪ್ರಿಯಾಂಕ ನಿರೂಪಿಸಿದರು. ಅವಿನ್ ಶೆಟ್ಟಿ ವಂದಿಸಿದರು.